ಜಿಲ್ಲೆಯ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ

ತುಮಕೂರು

       ಇದೇ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣಾ ಮತದಾನದ ಬಗ್ಗೆ ವಿಕಲಚೇತನರು/ಅಲೆಮಾರಿ/ಅರೆ ಅಲೆಮಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಅರಿವು ಕಾರ್ಯಕ್ರಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಜಿಲ್ಲಾ ಸ್ವೀಪ್ ಸಮಿತಿಗೆ ನಿರ್ದೇಶನ ನೀಡಿದರು.

        ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಸ್ವೀಪ್ ಸಮಿತಿಯ ಎಲ್ಲಾ ಅಧಿಕಾರಿಗಳ ಮತ್ತು ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

         ಲೋಕಸಭಾ ಚುನಾವಣೆ-2019ರ ಮತದಾನ ದಿನದಂದು ಜಿಲ್ಲೆಯಲ್ಲಿರುವ ಎಲ್ಲಾ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ರೀತಿಯಲ್ಲಿ ಅರಿವು ಮೂಡಿಸಬೇಕು. ಇದಕ್ಕಾಗಿ ಯುವಕ ಸಂಘಗಳು, ಕ್ರೀಡಾಕ್ಲಬ್‍ಗಳು ಕಾಲೇಜು ರಾಯಭಾರಿಗಳ ಮೂಲಕ ಮತ್ತು ಪಟ್ಟಣ/ನಗರ ಪ್ರದೇಶಗಳಲ್ಲಿ ಕಸ ಸಂಗ್ರಹ ವಾಹನಗಳಲ್ಲಿ ಮತದಾನ ಜಾಗೃತಿ ಗೀತೆಗಳನ್ನು ಪ್ರಸಾರ ಮಾಡುವ ಮೂಲಕ ಮತದಾರರಲ್ಲಿ ಅರಿವು ಮೂಡಿಸಬೇಕು ಎಂದರು.

       ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ಅರೆ ಅಲೆಮಾರಿ/ಅಲೆಮಾರಿ ವಾಸಿಸುವ ಪ್ರದೇಶಗಳಲ್ಲಿ ಎಸ್‍ಹೆಚ್‍ಜಿ(ಸ್ವ-ಸಹಾಯ ಗುಂಪುಗಳು) ಮಹಿಳೆಯರಲ್ಲಿ ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದ್ದು, ಈ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ನಗರ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.

        ಮತದಾನದ ದಿನದಂದು ಪೇಯ್ಡ್ ಹಾಲಿ ಡೇ (ವೇತನ ಸಹಿತ ರಜೆ)ಎಂದು ಘೋಷಿತವಾಗಿದ್ದು, ಈ ಬಗ್ಗೆ ಅರಿವು ಮೂಡಿಸಲು ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ದೊಡ್ಡದಾಗಿ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು. ಅಲ್ಲದೇ ಕಟ್ಟಡ ಕಾರ್ಮಿಕರಿಗೂ ಹಾಗೂ ಕಟ್ಟಡ ನಿರ್ಮಾಣಗಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಏಪ್ರಿಲ್ 18ರಂದು ಎಲ್ಲರೂ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸುವ ರೀತಿಯಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಕೈಗಾರಿಕೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

         ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಗೋಡೆ ಬರಹ ಬಿಡಿಸುವುದು, ಜಿಲ್ಲೆಯಲ್ಲಿ ಆಟ್ರ್ಸ್ ಅಂಡ್ ಕ್ರಾಫ್ಟ್ ಶಿಕ್ಷಕರನ್ನು ಬಳಸಿಕೊಂಡು ಮತದಾನದ ಜಾಗೃತಿ ಚಿತ್ರಗಳನ್ನು ಬಿಡಿಸುವುದು. “ವೋಟರ್ ಕಫ್” ಕ್ರೀಡೆಯನ್ನು ಆಯೋಜಿಸುವ ಕುರಿತಂತೆ ಚಿಂತನೆ ನಡೆಸುವಂತೆ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಸೂಚಿಸಿದರು.

          ವಿಕಲಚೇತನರಿಗೆ ಅಗತ್ಯವಿರುವ ಕಡೆ ವ್ಹೀಲ್‍ಚೇರ್‍ಗಳನ್ನು ಖರೀದಿಸಿ ಮತದಾನಕ್ಕೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದ ಅವರು ಮತದಾನ ಜಾಗೃತಿಗೆ ಅಗತ್ಯವಿರುವ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೇರಿದಂತೆ ಸ್ವೀಪ್ ಸಮಿತಿಯ ಸದಸ್ಯರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap