ಬಸ್ ನಿಲ್ದಾಣದಲ್ಲಿ ಆಕರ್ಷಕ ಮತ ಜಾಗೃತಿ

ಚಿತ್ರದುರ್ಗ :

       ಇದೇ ಏ. 18 ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಮತದಾರರು ತಪ್ಪದೆ ಮತ ಚಲಾವಣೆ ಮಾಡುವಂತಾಗಲು, ಮತದಾನ ಪ್ರಕ್ರಿಯೆ ಹಾಗೂ ಮತ ಜಾಗೃತಿ ಪ್ರೇರಣೆ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚುನಾವಣಾ ಆಯೋಗದ ಸಹಯೋಗದಲ್ಲಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ವಿಶೇಷ ವಸ್ತುಪ್ರದರ್ಶನಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಂಗಳವಾರ ಚಾಲನೆ ನೀಡಿದರು.

         ಈ ವಿಶೇಷ ವಸ್ತು ಪ್ರದರ್ಶನದಲ್ಲಿ ಇದೇ ಏ. 18 ರಂದು ನಡೆಯುವ ಲೋಕಸಭಾ ಚುನಾವಣೆ ನಿಮಿತ್ಯ ಮತದಾನ ಮಾಡುವ ಬಗ್ಗೆ, ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಕುರಿತ ವಿವಿಧ ಘೋಷ ವಾಕ್ಯಗಳು ಹಾಗೂ ಕಾರ್ಟೂನ್ ಚಿತ್ರಗಳನ್ನು ಬಳಸಿಕೊಂಡು ಸಿದ್ಧಪಡಿಸಲಾಗಿರುವ ಪ್ರಚಾರ ಫಲಕಗಳು ಎಲ್ಲರ ಗಮನ ಸೆಳೆಯುತ್ತಿವೆ. ಏ. 02 ರಿಂದ 04 ರವರೆಗೆ ಮೂರು ದಿನಗಳ ಕಾಲ ಚಿತ್ರದುರ್ಗ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ವಿಶೇಷ ವಸ್ತುಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

         ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಮೊಬೈಲ್ ಆ್ಯಪ್ ಸಿ-ವಿಜಿಲ್ ಹಾಗೂ ಚುನಾವಣಾ ಆ್ಯಪ್ ಬಳಕೆಯ ವಿಧಾನ ಕುರಿತ ಫಲಕಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜೊತೆಗೆ ‘ಓಟ್ ಮಾಡಿದವನೆ ಹೀರೋ’, ‘ಮಹಿಳೆಯರಿಗೆ ಪ್ರತ್ಯೇಕ ಸಾಲು’, ‘ಆಮಿಷಕ್ಕೆ ಒಳಗಾಗದಿರಿ- ವಿವೇಚನೆಯಿಂದ ಮತ ಚಲಾಯಿಸಿ’ ‘ವಿಕಲಚೇತನರಿಗೆ ಸೌಲಭ್ಯ’, ‘ಮತದಾನ ಎಲ್ಲರ ಕರ್ತವ್ಯ’ ಸೇರಿದಂತೆ ಹಲವು ಮತ ಜಾಗೃತಿಯ ಘೋಷಣೆಗಳನ್ನು ಹಾಗೂ ಮಾಹಿತಿಗಳು ಪ್ರಚಾರ ಫಲಕದಲ್ಲಿ ಅಳವಡಿಸಲಾಗಿದೆ.

        ಮತದಾರರ ಜಾಗೃತಿಗಾಗಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ದಾಖಲಾಗಬೇಕು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಆಯೋಜಸಿರುವ ಈ ವಸ್ತುಪ್ರದರ್ಶನವು, ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ.

          ಪ್ರತಿಯೊಬ್ಬ ಮತದಾರರೂ ಏ. 18 ರಂದು ತಪ್ಪದೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಪ್ರತಿಕ್ರಿಯಿಸಿ, ಮತದಾನದ ಬಗ್ಗೆ ಹೆಚ್ಚಿನ ಅರಿವು ಪಡೆಯಲು ವಸ್ತುಪ್ರದರ್ಶನ ಉಪಯುಕ್ತವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವಸ್ತುಪ್ರದರ್ಶನ ವೀಕ್ಷಿಸಿ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.

         ಚಿತ್ರದುರ್ಗ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಚುನಾವಣಾ ವಸ್ತುಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿ, ವಸ್ತು ಪ್ರದರ್ಶನ ಆಯೋಜಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್ ಬಿ.ವಿ., ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್, ವಾರ್ತಾ ಇಲಾಖೆ ಸ್ವಾಗತಕಾರರಾದ ಹೆಚ್. ಕೃಷ್ಣಾನಾಯ್ಕ ವಿಭಾಗೀಯ ಮೆಕಾನಿಕಲ್ ಇಂಜಿನಿಯರ್ ವಿಜಯಕುಮಾರ್ ಜಿ, ಮತ್ತು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ವಸ್ತುಪ್ರದರ್ಶನ ಏ. 04 ರವರೆಗೆ ಪ್ರದರ್ಶನಗೊಳ್ಳಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap