ದಾವಣಗೆರೆ
ಹಣ ಬಲವಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬರಬೇಕೆಂಬ ಗುರಿಯೊಂದಿಗೆ ಎಚ್.ಬಿ.ಮಂಜಪ್ಪನವರನ್ನು ಅಖಾಡಕ್ಕೆ ಇಳಿಸಿದ್ದೇವೆಂದು ಮಾಜಿ ಸಚಿವ, ದಾವಣಗೆರೆ ಲೋಕಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬುಧವಾರ ಸಂಜೆ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರದು ಹಣ ಬಲವಾದರೆ, ನಮ್ಮದ ಜನ ಹಾಗೂ ಕಾರ್ಯಕರ್ತರ ಬಲಹೊಂದಿರುವ ಪಕ್ಷವಾಗಿದೆ. ಹೀಗಾಗಿ ಕಾಂಗ್ರೆಸ್ ಗೆಲುವಿಗೆ ತೊಂದರೆ ಏನೂ ಇಲ್ಲ ಎಂದರು.
ಸರಳ ವ್ಯಕ್ತಿತ್ವ ಹೊಂದಿರುವ ಹೆಚ್.ಬಿ.ಮಂಜಪ್ಪ ಇಂದು (ಏ.4ರಂದು) ಬೆಳಿಗ್ಗೆ 10 ಗಂಟೆಗೆ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಕಳೆದ ಮೂರು ತಿಂಗಳ ಹಿಂದೆಯೇ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದೆ. ಹೈಕಮಾಂಡ್ ಸೂಚನೆ ಪಾಲಿಸುವ ನಿಷ್ಟಾವಂತ ಕಾರ್ಯಕರ್ತರು ನಾವಾಗಿದ್ದು, ಸೂಕ್ತ ಅಭ್ಯರ್ಥಿಯನ್ನು ಹೆಸರು ಕೊಡಲು ವರಿಷ್ಠರು ಸೂಚಿಸಿದ್ದರು. ಅದರಂತೆ ಎಚ್.ಬಿ.ಮಂಜಪ್ಪ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೊದಲು ಕೆಪಿಸಿಸಿಯಿಂದ ತಮ್ಮ ತಂದೆ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ಘೋಷಣೆಯಾಗಿತ್ತು. ನಂತರ ಜಿಪಂ ಮಾಜಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಿಪಂ ಸದಸ್ಯ ತೇಜಸ್ವಿ ಪಟೇಲ್ ಹಾಗೂ ನಿಖಿಲ್ ಕೊಂಡಜ್ಜಿ ಹೆಸರು ಪ್ರಸ್ತಾಪಕ್ಕೆ ಬಂದವು. ಯಾರಿಗೇ ಹೈಕಮಾಂಡ್ ಟಿಕೆಟ್ ನೀಡಿದರೂ ಪಕ್ಷದ ಗೆಲುವೇ ನಮ್ಮ ಗುರಿಯಾಗಿತ್ತು. ಈಗ ಮಂಜಪ್ಪ ಅಭ್ಯರ್ಥಿಯಾಗಿ ಅಂತಿಮವಾಗಿದ್ದಾರಷ್ಟೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಯಾರೂ ಸಹ ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಜಾತಿ ರಾಜಕಾರಣವನ್ನೂ ಸಹ ಯಾರೂ ಮಾಡಬಾರದು. ನಮ್ಮ ಕಾರ್ಯಕರ್ತರು, ಮುಖಂಡರು, ಹಾಲಿ-ಮಾಜಿ ಶಾಸಕರು, ಹಾಲಿ-ಮಾಜಿ ಜಿಪಂ ಸದಸ್ಯರು, ಪಕ್ಷದ ಪದಾಧಿಕಾರಿಗಳು ಲೋಕಸಭೆ ಚುನಾವಣೆಯಲ್ಲಿ ಹಣ ಬಲದ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತ ಎಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಿಕೊಂಡು ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿಯವರಂತೆ ನಾವೇನೂ ಕಾರ್ಯಕರ್ತರ ಮನೆಗೆ ಹೋಗಿ ಕರೆಯಬೇಕಿಲ್ಲ. ಒಂದು ಶಿಳ್ಳೆ ಹೊಡೆದರೂ ಸಾಕು ನಮ್ಮ ಕಾರ್ಯಕರ್ತರು ಚುನಾವಣೆಗೆ ಬರುತ್ತಾರೆ. ಸಂಜೆಯಿಂದಲೇ ಕಾಂಗ್ರೆಸ್ಸಿನ ಅಭ್ಯರ್ಥಿ ಮಂಜಪ್ಪನ ನಗರ, ಜಿಲ್ಲಾದ್ಯಂತ ಪ್ರಚಾರ ಮಾಡುತ್ತೇವೆ. ನಾಳೆ ನಾಮಪತ್ರ ಸಲ್ಲಿಕೆ ನಂತರ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರ ಕಾರ್ಯವೂ ಚುರುಕಾಗಲಿದ್ದು, ನಾವೆಲ್ಲರೂ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುತ್ತೇವೆ ಎಂದು ಮಾಹಿತಿ ನೀಡಿದರು.
ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವಂತೆ, ಸಂಸದ ಜಿ.ಎಂ.ಸಿದ್ದೇಶ್ವರ ಸಹ 10 ಸಾವಿರ ಕೋಟಿ ತಂದು ಅಭಿವೃದ್ಧಿ ಮಾಡಿದ್ದೇವೆಂಬ ಸುಳ್ಳು ಹೇಳುತ್ತಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ ಹಿಂದೆ ಸಚಿವರಿದ್ದಾಗ ಉತ್ತರ-ದಕ್ಷಿಣದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿ ಸಿದ್ದಣ್ಣ 15 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸುಳ್ಳು ಹೇಳುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಶಾಸಕ ಎಸ್.ರಾಮಪ್ಪ, ಪಕ್ಷದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ, ಎಚ್.ಪಿ.ರಾಜೇಶ, ಸೈಯದ್ ಸೈಫುಲ್ಲಾ, ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿ.ಪಂ. ಸದಸ್ಯ ಕೆ.ಎಸ್.ಬಸಂತಪ್ಪ, ಮುಖಂಡರಾದ ಬಿ.ಎಚ್.ವೀರಭದ್ರಪ್ಪ, ದಿನೇಶ ಕೆ.ಶೆಟ್ಟಿ, ಮುದೇಗೌಡ್ರ ಗಿರೀಶ, ಎಸ್.ಮಲ್ಲಿಕಾರ್ಜುನ, ರಾಜಶೇಖರ ಗೌಡ, ಹುಲಿಕಟ್ಟೆ ಕೊಟ್ರೇಶ ನಾಯ್ಕ ಮತ್ತಿತರರು ಹಾಜರಿದ್ದರು.