ಹೊನ್ನಾಳಿ:
ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಜಂಗೀ ಕುಸ್ತಿ ಸ್ಪರ್ಧೆ ನಡೆಯಿತು. ಈ ಬಾರಿ ಮಹಿಳೆಯರ ಕುಸ್ತಿ ಸ್ಪರ್ಧೆ ನಡೆದದ್ದು ವಿಶೇಷವಾಗಿದೆ. ವಿಜೇತರಿಗೆ ಬೆಳ್ಳಿ ಗದೆ ಬಹುಮಾನವಾಗಿ ಇಡಲಾಗಿತ್ತು.
ಪುರುಷರ ಕುಸ್ತಿ ಸ್ಪರ್ಧೆಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ, ದಾವಣಗೆರೆಯ ಶ್ರೀನಿವಾಸ್ ಹಾಗೂ ದೆಹಲಿಯ ಆಸೀಫ್ ಪ್ರಥಮ ಸ್ಥಾನಕ್ಕಾಗಿ ಸೆಣಸಿದರು. ಆದರೆ, ಸ್ಪರ್ಧೆಯಲ್ಲಿ ಈರ್ವರೂ ಸಮಬಲದಿಂದ ಕಾದಾಡಿದರು. ಈ ಕಾರಣಕ್ಕಾಗಿ ಪ್ರಥಮ ಸ್ಥಾನ ಘೋಷಿಸಲಿಲ್ಲ. ಹಾಗಾಗಿ, ಬೆಳ್ಳಿ ಗದೆ ದೇವಸ್ಥಾನ ಸಮಿತಿಯ ಬಳಿಯೇ ಉಳಿಯಿತು. ಇಬ್ಬರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ಬೆಂಗಳೂರಿನ ಡಾಲ್ಫಿ ಮತ್ತು ಮಂಗಳೂರಿನ ಆಸ್ಮಾ ಪ್ರಥಮ ಸ್ಥಾನಕ್ಕಾಗಿ ಸೆಣಸಿದರು. ಮಂಗಳೂರಿನ ಆಸ್ಮಾ ಅಧಿಕ ಅಂಕ ಗಳಿಸಿ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ಪಡೆದುಕೊಂಡರು. ದೇವಸ್ಥಾನ ಸೇವಾ ಸಮಿತಿ ಎಲ್ಲಾ ಕುಸ್ತಿಪಟುಗಳಿಗೂ ಊಟದ ವ್ಯವಸ್ಥೆ ಮಾಡಿತ್ತು.ಸೋಮವಾರ ಶ್ರೀ ಆಂಜನೇಯ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ಆಂಜನೇಯ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
