ದಾವಣಗೆರೆ
ಲೋಕಸಭೆಗೆ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಬಿ.ಮಂಜಪ್ಪ ದೋಸ್ತಿ ಪಕ್ಷಗಳ ನಾಯಕರ ಸಾರಥ್ಯದಲ್ಲಿ ಬೃಹತ್ ಮೆರವಣಿಗೆ ಗುರುವಾರ ಎರಡು ಸೆಟ್ ನಾಮಪತ್ರ ಸಲ್ಲಿಸಿದರು.ಬೆಳಿಗ್ಗೆ ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕುಟುಂಬದ ಸದಸ್ಯರೊಂದಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದರು.
ನಂತರ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನಾಯಕಾರದ ಎಸ್.ಎಸ್.ಮಲ್ಲಿಕಾರ್ಜುನ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಎಸ್ಟಿ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್, ಕಾಂಗ್ರೆಸ್ ಮುಖಂಡರಾದ ಬಲ್ಕಿಶ್ ಭಾನು, ಜಲಜಾ ನಾಯಕ್ ಸೇರಿದಂತೆ ಬೃಹತ್ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಎಸ್ಟಿ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್ ಅವರೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಅವರನ್ನು ಭೇಟಿ ಮಾಡಿ ಮತ್ತೊಂದು ಸೆಟ್ನಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಗರದ ದುರ್ಗಾಂಬಿಕ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಹೊಂಡದ ಸರ್ಕಲ್ ಮಾರ್ಗವಾಗಿ, ಜಾಲಿ ನಗರ 2ನೇ ಮೆನ್, ಶಿವಾಲಿ ಟಾಕೀಸ್ ಮುಖಾಂತರ, ಹೊಸ ಕೋರ್ಟ್, ರಾಜ ಭವನ ಮುಂಭಾಗದಿಂದ ಪಿ.ಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುಕ್ತಾಯವಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಬಿಜೆಪಿಯವರು ಹಣಬಲದೊಂದಿಗೆ ಚುನಾವಣೆ ನಡೆಸಲು ಹೊರಟಿದ್ದಾರೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ತಾವು ಜನಬೆಂಬಲದೊಂದಿಗೆ ಮತಯಾಚನೆ ಮಾಡುವ ಮೂಲಕ ಬಾರಿ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಹಣ ನೀಡಿ, ವಾಹನಗಳ ಮೂಲಕ ಸಾಕಷ್ಟು ಜನರನ್ನು ಕರೆ ತಂದಿದ್ದಾರೆ. ಕೆಲವು ವಾಹನಗಳು ಖಾಲಿ ಇವೆ. ಆದರೆ, ನಾವು ಹಣ ನೀಡಿ ಯಾವುದೇ ವಾಹನ ಮೂಲಕ ಜನರನ್ನು ಕರೆಸಿಲ್ಲ. ಕಾರ್ಯಕರ್ತರೇ ತಮ್ಮ ಬೈಕ್ ಮೂಲಕ ಬಂದು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ. ಜಿಲ್ಲೆಯ ಎಲ್ಲಾ ಕಡೆಯಿಂದಲೂ ಸ್ವಯಂ ಪ್ರೇರಿತರಾಗಿ ಬಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬ್ಲಾಕ್ ಮಟ್ಟದಲ್ಲಿಯೂ ಪ್ರಚಾರ ಕಾರ್ಯ ನಡೆದಿದೆ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಚಾಯ್ ವಾಲಾಗೆ ಅಂತಾ ನಿಲ್ಲಿಸಿದ್ದರು. ಹಾಗೆಯೇ ನಾವೂ ಈ ಸಲ ದಾವಣಗೆರೆ ಕ್ಷೇತ್ರಕ್ಕೆ ಸಾಮಾನ್ಯ ವ್ಯಕ್ತಿಯನ್ನು ನಿಲ್ಲಿಸಿದ್ದೇವೆ. ಕಾಂಗ್ರೆಸ್ಸಿನ ಗೆಲುವು ಶತಃ ಸಿದ್ಧವಾಗಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ, ಎರಡೂ ಪಕ್ಷಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ಇದೇ ರೀತಿಯಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ. ಜೆಡಿಎಸ್-ಕಾಂಗ್ರೆಸ್ಗಳ ಒಟ್ಟು ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಲಿದ್ದಾರೆಂದು ಹೇಳಿದರು.
ಮೆರವಣಿಗೆಯಲ್ಲಿ ಹರಿಹರ ಶಾಸಕ ಎಸ್.ರಾಮಪ್ಪ, ಮುಖಂಡರಾದ ಜಲಜಾನಾಯಕ್, ಬಲ್ಕಿಸ್ಬಾನು, ಡಿ.ಬಸವರಾಜ್, ಶಾಂತನಗೌಡರ್ರು, ಹೆಚ್.ಪಿ.ರಾಜೇಶ್, ಕೆ.ಪಿ.ಪಾಲಯ್ಯ, ಸೈಯದ್ ಸೈಫುಲ್ಲಾ, ಮುದೇಗೌಡ್ರು ಗಿರೀಶ್, ಅಯೂಬ್ ಪೈಲ್ವಾನ್, ನಸೀರ್ ಅಹ್ಮದ್, ಎಂ.ಹಾಲೇಶ್, ಶೋಭಾ ಪಲ್ಲಾಗಟ್ಟೆ, ಬಿ.ಹೆಚ್. ವೀರಭದ್ರಪ್ಪ, ದಿನೇಶ್ ಕೆ.ಶೆಟ್ಟಿ, ಎ.ನಾಗರಾಜ್, ಪಿ.ರಾಜಕುಮಾರ್, ಎಂ.ಪಿ.ಲತಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








