ಓಟ್ ಹಾಕ್ತಿವಿ ಅಕ್ಕಿ ನಿಲ್ಲಿಸಬೇಡಿ

ಹುಳಿಯಾರು

     ಚುನಾವಣೆ ಮುಗಿದ ಮೇಲೆ ಅಕ್ಕಿ ನಿಲ್ಲಿಸ್ತಾರಂತೆ. ಕೈ ಮುಗಿತೀನಿ ಸ್ವಾಮಿ ಅಕ್ಕಿ ಮಾತ್ರ ನಿಲ್ಲಿಸಬೇಡಿ ಎಂದು ಮತ ಜಾಗೃತಿಗೆ ತೆರಳಿದ್ದ ಅಧಿಕಾರಿಗೆ ಮತದಾರರೊಬ್ಬರು ಕೇಳಿಕೊಂಡರು.

      ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ಶುಕ್ರವಾರ ಇಲ್ಲಿನ ಶಂಕರಾಪುರ ಬಡಾವಣೆಯ ಅಲೆಮಾರಿ ಜನಾಂಗದ ಮನೆಗಳಿಗೆ ತೆರಳಿ ಮತ ಜಾಗೃತಿ ಮೂಡಿಸುವ ವೇಳೆ ಈ ಪ್ರಸಂಗ ಜರುಗಿತು.

      ಹುಳಿಯಾರು ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಅವರು ಕೂದಲು ವ್ಯಾಪಾರ ಮಾಡುವ ಅಲೆಮಾರಿಯ ಬಳಿ ತೆರಳಿ ಕೂದಲ ವ್ಯಾಪಾರವೆಂದು ಮತ ಹಾಕದೆ ಹಳ್ಳಿಗಳಿಗೆ ಹೋಗ ಬೇಡಪ್ಪ. ನೀನು ವ್ಯಾಪಾರಕ್ಕೆ ಹೋಗಲೇ ಬೇಕೆಂದಿದ್ದರೆ ಓಟ್ ಹಾಕಿ ನಂತರ ವ್ಯಾಪಾರಕ್ಕೆ ಹೋಗು. ಓಟು ಹಾಕುವಾಗ ಹಣ, ಹೆಂಡ ಇಸ್ಕೊಂಡು ಓಟ್ ಹಾಕಬೇಡ. ಹಾಗೆ ಓಟ್ ಹಾಕೋದು ತಪ್ಪು. ಹಾಗಾಗಿ ನಿನಗೆ ಇಷ್ಟವಿರುವ ವ್ಯಕ್ತಿಗೆ ಓಟ್ ಹಾಕು ಎಂದು ಕಿವಿ ಮಾತು ಹೇಳಿದರು.

     ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಮತದಾರ ಆಯ್ತು ಸ್ವಾಮಿ ಪ್ರತಿ ತಿಂಗಳು ಅಕ್ಕಿ ಕೊಡ್ತಾವ್ರೆ. ಅಂತಹದರಲ್ಲಿ ಹಣ, ಹೆಂಡ ಇಸ್ಕೊಂಡು ನಾನೇಕೆ ಓಟ್ ಹಾಕಲಿ. ಇದೇನೂ ಇಸ್ಕೊಳ್ಳದೆ ಓಟ್ ಹಾಕ್ತೆನೆ. ಆದರೆ ಅಕ್ಕಿ ಮಾತ್ರ ನಿಲ್ಲಿಸಬೇಡಿ ಸ್ವಾಮಿ. ಈ ಅಕ್ಕಿಯಿಂದಲೇ ನಾವು ಮೂರೊತ್ತು ಹೊಟ್ಟೆತುಂಬ ಊಟ ಮಾಡ್ತಿದ್ದೀವಿ ಎಂದರು.

     ಪಪಂ ಮುಖ್ಯಾಧಿಕಾರಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಆತನ ಮುಗ್ಧತೆ ಕಂಡು ನಸುನಕ್ಕು ಮುಂದಿನ ಮನೆಗೆ ಮತ ಜಾಗೃತಿಗೆ ತೆರಳಿದರು. ಶಂಕರಾಪುರ ಬಡಾವಣೆಯಲ್ಲಿ ಬಿಡಾರ ಹಾಕಿಕೊಂಡಿರುವ ಅಲೆಮಾರಿಗಳ ಬಳಿ ತೆರಳಿ ಏ.18 ರಂದು ಲೋಕಸಭಾ ಚುನಾವಣೆಗೆ ಚುನಾವಣೆ ನಡೆಯಲಿದ್ದು ಎಲ್ಲರೂ ಆ ದಿನ ನಿಮ್ಮನಿಮ್ಮ ಊರುಗಳಿಗೆ ತೆರಳಿ ನಿಮಗೆ ಇಷ್ಟ ಬಂದವರಿಗೆ ಮತ ಹಾಕಿ. ನಿಮ್ಮ ಮತದಿಂದ ದೇಶದ ಭವಿಷ್ಯ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಪಪಂ ಆರ್‍ಓ ಪ್ರದೀಪ್, ಎಸ್‍ಡಿಎ ಜಿನಾಯತ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ರಾಘವೇಂದ್ರ, ಸಿಬ್ಬಂಧಿಗಳಾದ ಆನಂದ್, ರೇಖಾ, ವೆಂಕಟೇಶ್, ಆಶಾ ಕಾರ್ಯಕರ್ತೆಯರಾದ ಭಾಗ್ಯಮ್ಮ, ಬನಶಂಕರಮ್ಮ, ಶೋಭ, ಪಪಂ ಪೌರಕಾರ್ಮಿಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link