ಎರಡನೇ ಬಾರಿಗೆ ಸಂಸದರಾಗಿ ಬಿ.ಎನ್.ಚಂದ್ರಪ್ಪ ಆಯ್ಕೆ ನಿಶ್ಚಿತ- ಟಿ.ರಘುಮೂರ್ತಿ.

ಚಳ್ಳಕೆರೆ

    ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ ಬಿ.ಎನ್.ಚಂದ್ರಪ್ಪ ಎರಡನೇ ಬಾರಿಗೆ ಈ ಕ್ಷೇತ್ರದಿಂದ ಮತ್ತೊಮ್ಮೆ ಸಂಸತ್‍ಗೆ ಆಯ್ಕೆಯಾಗುವ ಭರವಸೆಯನ್ನು ಹೊಂದಿದ್ಧಾರೆ. ಈ ಬಾರಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಮೈತ್ರಿಕೂಟದ ಸರ್ಕಾರದ ಅಧಿಕಾರದಲ್ಲಿದ್ದು, ಜೆಡಿಎಸ್‍ನ ಎಲ್ಲಾ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಚಲಾವಣೆಯಾಗುವುದರಿಂದ ಬಿ.ಎನ್.ಚಂದ್ರಪ್ಪ ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಲಿದ್ಧಾರೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವೀಕ್ಷಕರು, ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ತಿಳಿಸಿದರು.

     ಅವರು, ಶುಕ್ರವಾರ ಇಲ್ಲಿನ ಎಚ್‍ಪಿಪಿಸಿ ಕಾಲೇಜು ಮುಂಭಾಗದಲ್ಲಿರುವ ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಸ್ಥಾನ ಇದಾಗಿದ್ದು, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೇರೆ ಬೇರೆಯಾಗಿ ಸ್ಪರ್ಧಿಸಿದ್ದು, ಮತಗಳು ವಿಭಜನೆಗೊಂಡಿದ್ದವು.

     ಆದರೆ, ಈಗ ಜೆಡಿಎಸ್ ಸಂಪೂರ್ಣ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುವುದರಿಂದ ಸುಲಭವಾಗಿ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿ.ಎನ್.ಚಂದ್ರಪ್ಪ ಆಯ್ಕೆಯಾಗಲು ಸಹಕಾರಿಯಾಗಿದೆ. ಏ.18 ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರು ಬಿ.ಎನ್.ಚಂದ್ರಪ್ಪನವರ ಹಸ್ತದ ಗುರುತಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.

      ಸಂಸದ ಚಂದ್ರಪ್ಪನವರ ವಿಶೇಷ ಕಾಳಜಿಯಿಂದ ಭದ್ರ ಮೇಲ್ದಂಡೆ ಯೋಜನೆ ನೀರು ಸಹ ಚಳ್ಳಕೆರೆಗೆ ಬರುವ ಕಾಲ ದೂರವಿಲ್ಲ. ಬರುವ ಜೂನ್ ಮಾಹೆ ಅಂತ್ಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನೀರು ಪೈಪ್ ಮೂಲಕ ವಿವಿಧ ಸಾಗರವನ್ನು ತಲುಪಲಿದೆ. ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಈಗಾಗಲೇ ಈ ಕ್ಷೇತ್ರದ ಮತದಾರರಿಗೆ ಮನವರಿಕೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ಎನ್.ಚಂದ್ರಪ್ಪನವರನ್ನು ಮತ್ತೊಮ್ಮೆ ಗೆಲ್ಲಿಸುವ ದೃಢ ನಿರ್ಧಾರವನ್ನು ಈ ಕ್ಷೇತ್ರದ ಮತದಾರರು ಕೈಗೊಂಡಿರುತ್ತಾರೆ. ಕ್ಷೇತ್ರದ ಅಭಿವೃದ್ಧಿ ಪರ ಯೋಜನೆಗಳಿಗೆ ಸಂಸದ ಬಿ.ಎನ್.ಚಂದ್ರಪ್ಪ ಹೆಚ್ಚು ಸಹಕಾರ ಹಾಗೂ ಒತ್ತು ನೀಡಿದ್ಧಾರೆ. ಅವರ ಪರಿಶ್ರಮದಿಂದ ಕ್ಷೇತ್ರದ ಹಲವಾರು ಸಮಸ್ಯೆಗಳು ನಿವಾರಣೆಯಾಗಿವೆ ಎಂದರು.

      ಜೆಡಿಎಸ್ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿ.ಎನ್.ಚಂದ್ರಪ್ಪ ಈಗಾಗಲೇ ಕ್ಷೇತ್ರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ್ಧಾರೆ. ಎಲ್ಲೆಡೆ ಚಂದ್ರಪ್ಪನವರ ಗೆಲುವಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಆತ್ಮವಿಶ್ವಾಸವಿದೆ. ಹಾಗಾಗಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಇದು ವರವಾಗಲಿದೆ. ಜೆಡಿಎಸ್‍ನ ಎಲ್ಲಾ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚಂದ್ರಪ್ಪನವರನ್ನು ಬೆಂಬಲಿಸಬೇಕು. ಸರಳ, ಸಜ್ಜನರಾದ ಬಿ.ಎನ್.ಚಂದ್ರಪ್ಪ ಎರಡನೇ ಬಾರಿಗೆ ಈ ಕ್ಷೇತ್ರದಿಂದ ಆಯ್ಕೆಯಾದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡಲಿದ್ಧಾರೆಂದರು.

      ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರ ಕಳೆದ 10 ತಿಂಗಳಿನಿಂದ ಜನ ಮೆಚ್ಚುವ ಆಡಳಿತ ನೀಡಿದ್ದಾರೆ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುವ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿರುವಾಗಲೇ ಜನಪ್ರಿಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲವನ್ನು ಮನ್ನಾ ಮಾಡಿದ್ಧಾರೆ. ಆದರೂ ಸಹ ವಿರೋಧ ಪಕ್ಷಗಳ ನಾಯಕರು ಸುಳ್ಳು ಪ್ರಚಾರದ ಮೂಲಕ ಕಾಂಗ್ರೆಸ್ ಪಕ್ಷದ ವಿಜಯಕ್ಕೆ ಅಡ್ಡಿಯಾಗುತ್ತಿದ್ಧಾರೆ. ಆದ್ದರಿಂದ ಕ್ಷೇತ್ರದ ಪ್ರತಿಯೊಬ್ಬ ಮತದಾರನು ಚಂದ್ರಪ್ಪನವರಿಗೆ ಮತ ನೀಡುವಂತೆ ಮನವಿ ಮಾಡಿದರು.

       ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಟಿ.ಪ್ರಭುದೇವ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಸಿ.ವೀರಭದ್ರಬಾಬು, ನಗರಸಭಾ ಸದಸ್ಯರಾದ ಕೆ.ಸಿ.ನಾಗರಾಜ, ಸಿ.ಶ್ರೀನಿವಾಸ್, ಪ್ರಮೋದ್, ಗೋವಿಂದ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ವೀರಭದ್ರಪ್ಪ, ಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ವೀರೇಶ್, ರಂಜಿತಾ, ಎಚ್.ಆಂಜನೇಯ, ಗಿರಿಯಪ್ಪ, ಬಡಗಿಪಾಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಕಿರಣ್‍ಶಂಕರ್, ಸಿ.ಟಿ.ಶ್ರೀನಿವಾಸ್, ಡಿ.ಕೆ.ಕಾಟಯ್ಯ, ಅನ್ವರ್ ಮಾಸ್ಟರ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap