ದಾವಣಗೆರೆ:
ಚಾಂದ್ರಮಾನ ಯುಗಾದಿಯ ಮುನ್ನಾದಿನವಾದ ಶುಕ್ರವಾರ ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದ್ದರೂ, ಚುನಾವಣಾ ರಾಜಕೀಯದ ರಂಗಿನಿಂದಾಗಿ ಈ ಬಾರಿಯ ಯುಗಾದಿ ಕಳೆದ ಬಾರಿಗಿಂತ ಕಳೆಗುಂದಿದಂತಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆಯೇ ವಾಹನಗಳನ್ನು ಶುಚಿಗೊಳಿಸಿ, ಅಮಾವಾಸ್ಯೆ ಪೂಜೆಯಲ್ಲಿ ಜನರು ನಿರತರಾಗಿದ್ದ ದೃಶ್ಯ ಹಾಗೂ ಹಬ್ಬದ ಆಚರಣೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರ ದುಪ್ಪಟ್ಟಾಗಿತ್ತು. ಕಳೆದ ಸಲಕ್ಕೆ ಹೋಲಿಸಿದರೆ ಈ ಬಾರಿ ಹೂವಿನ ಬೆಲೆ ವಿಪರೀತವಾಗಿ ಏರಿಕೆಯಾಗಿದೆ ಎಂದು ವ್ಯಾಪಾರಿಗಳೇ ಮಾತಾಡಿಕೊಳ್ಳುತ್ತಿದ್ದರು. ಪ್ರತಿ ಮಾರು ಸೇವಂತಿ 80 ರೂ., ಕನಕಾಂಬರಿ ಹಾಗೂ ಮಲ್ಲಿಗೆ 100 ರೂ. ತಲುಪಿದ್ದವು. ಸಂಜೆಯ ವೇಳೆಗೆ ಹೂವಿನ ದರ ಇನ್ನೂ ಅಧಿಕವಾಗಿತ್ತು. ಚೆಂಡು ಹೂವು ಬೆಲೆ ಕೊಂಚ ಕಡಿಮೆ ಇದ್ದರೂ, ಹೂಮಾಲೆ ದರ ವಿಪರೀತವಾಗಿತ್ತು.
ತರಕಾರಿ, ದಿನಸಿ ಪದಾರ್ಥ ಹಾಗೂ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿರುವುದು ಜನರನ್ನು ಹೈರಾಣಾಗಿಸಿದೆ. ಬೇಳೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಶ್ಯಾವಿಗೆ ಸೇರಿದಂತೆ ಎಲ್ಲಾ ಪದಾರ್ಥಗಳೂ ದುಬಾರಿಯಾಗಿವೆ. ಆದರೆ ಹಬ್ಬದ ಖರೀದಿ ಅಷ್ಟೇನೂ ಜೋರಾಗಿರಲಿಲ್ಲ. ಇದರಿಂದಾಗಿಯೇ ಹಬ್ಬದ ತಾತ್ಕಾಲಿಕ ಮಾರುಕಟ್ಟೆಗೆ ಹೈಸ್ಕೂಲ್ ಮೈದಾನದ ಬದಲು ಹಿಂದಿನಂತೆ ಆರ್.ಹೆಚ್. ಧರ್ಮಛತ್ರದ ಬಳಿಯೇ ಅವಕಾಶ ಮಾಡಿಕೊಡಲಾಗಿತ್ತು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಹಬ್ಬದ ವ್ಯಾಪಾರ-ವಹಿವಾಟು ಮಂದವಾಗಿತ್ತು. ಹಣ್ಣು, ತರಕಾರಿ, ಹೂವು, ದಿನಸಿ ಪದಾರ್ಥಗಳೆಲ್ಲವೂ ದುಬಾರಿಯಾಗಿರುವುದು ಜನರ ಉತ್ಸಾಹ ಕುಂದಿಸಿತ್ತು. ಅಮವಾಸ್ಯೆ ಕಾರಣಕ್ಕೆ ಹಬ್ಬದ ಖರೀದಿ ಅಷ್ಟಾಗಿ ಕಳೆಗಟ್ಟಿರಲಿಲ್ಲ. ಹೊಸ ವರ್ಷಕ್ಕೆ ಹೊಸ ಬಟ್ಟೆ ಕೊಳ್ಳುವ ರೂಢಿ ಇರುವುದರಿಂದ ಬಟ್ಟೆಯಂಗಡಿಗಳಲ್ಲಿ ಕೊಂಚಮಟ್ಟಿಗೆ ಜನದಟ್ಟಣೆ ಕಂಡುಬಂತು.
ಹೊಸ ವರ್ಷಕ್ಕೆ ಗಂಡುಮಕ್ಕಳು ಉಡುದಾರ ಬದಲಾಯಿಸುವುದು ಸಂಪ್ರದಾಯ. ಅದರಂತೆ, ಯುಗಾದಿ ವಿಶೇಷವೆಂಬಂತೆ ಉಡುದಾರ ಮಾರಾಟಗಾರರು ಅಲ್ಲಲ್ಲಿ ಕಂಡುಬಂದರು. ಬೇವಿನ ಎಲೆ, ಮಾವಿನ ಎಲೆ, ಅಡಿಕೆ ಹೊಂಬಾಳೆ, ಲೋಳೆಸರ, ಬಿಲ್ಪತ್ರೆ, ಧವನ ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನಿಟ್ಟುಕೊಂಡು ಹಳ್ಳಿಗರು ಗ್ರಾಹಕರ ನಿರೀಕ್ಷೆಯಲ್ಲಿದ್ದರು.
ಬಿಸಿಲಿನ ತಾಪಕ್ಕೆ ರಸ್ತೆ ಬದಿಗಳಲ್ಲಿ ಕಲ್ಲಂಗಡಿ, ಪಪ್ಪಾಯಿ, ಕರಬೂಜ, ವನಸ್ಪತಿ, ತಂಪುಪಾನೀಯ ಸೇವಿಸುವವರ ಸಂಖ್ಯೆ ಅಧಿಕವಾಗಿತ್ತು. ಇದನ್ನು ಹೊರತುಪಡಿಸಿದರೆ ಹಬ್ಬದ ಖರೀದಿಯೇನೂ ವಿಶೇಷವಾಗಿರಲಿಲ್ಲ. ಅಭ್ಯಂಗ ಸ್ನಾನ ಅಥವಾ ಯುಗಾದಿ ದಿನದ ವೇಳೆಗೆ ವ್ಯಾಪಾರ ಹೆಚ್ಚಾಗಬಹುದೆಂಬ ಆಶಾ ಭಾವನೆಯಲ್ಲಿ ವ್ಯಾಪಾರಸ್ಥರಿದ್ದರು.
ಲೋಕಸಭಾ ಚುನಾವಣೆಗೆ ಏ.4ರಂದೇ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ಮುಕ್ತಾಯವಾಗಿದ್ದು, ಶುಕ್ರವಾರ ನಾಮಪತ್ರ ಪರಿಶೀಲನೆ ಇತ್ತು. ಕದನ ಕುತೂಹಲ ಮೂಡಿಸಿರುವ ಚುನಾವಣೆ ಹೊತ್ತಿನಲ್ಲೇ ಯುಗಾದಿ ಹಬ್ಬ ಆಗಮಿಸಿರುವುದರಿಂದ ಪಕ್ಷ, ಅಭ್ಯರ್ಥಿಗಳ ಪ್ರಚಾರಕ್ಕೂ ಸ್ವಲ್ಪ ಬ್ರೇಕ್ ಬಿದ್ದಿದೆ. ಅಲ್ಲದೆ, ಎಲ್ಲೆಡೆ ಚುನಾವಣೆ ಕೇಂದ್ರಿತ ಚರ್ಚೆಗಳೇ ನಡೆಯುತ್ತಿರುವುದು ಹಬ್ಬದ ಮೇಲೂ ಪ್ರಭಾವ ಬೀರಿದೆ. ಬೇವು-ಬೆಲ್ಲ ವಿಶೇಷದ ಯುಗಾದಿಯು ಯಾರ ಪಾಲಿಗೆ ಸಿಹಿ, ಯಾರಿಗೆ ಕಹಿ? ಎಂಬುದು ಚುನಾವಣೆ ಫಲಿತಾಂಶದ ನಂತರ ಗೊತ್ತಾಗಲಿದೆ.