ಭಾರತ ವಿಶ್ವದ 6ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ : ಜಿ.ಎಂ. ಸಿದ್ಧೇಶ್ವರ್

ಹೊನ್ನಾಳಿ:

     ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 5 ವರ್ಷಗಳ ಆಡಳಿತಾವಧಿಯಲ್ಲಿ ಭಾರತ ವಿಶ್ವದ 6ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಹೇಳಿದರು.

     ಭಾನುವಾರ ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

     ಮೋದಿಯವರು ಬಡಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ 10 ಸಾವಿರ ಕೋಟಿ ಜನರಿಗೆ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದು ಬಿಪಿಎಲ್ ಫಲಾನುಭವಿಗಳಿಗೆ ಲಭ್ಯವಾಗಲಿದೆ ಎಂದರು. ಬಹಿರ್ದೆಸೆಮುಕ್ತ ದೇಶವಾಗಬೇಕು ಎಂಬ ಕನಸಿಟ್ಟುಕೊಂಡ ಮೋದಿಯವರು ಉಚಿತವಾಗಿ ಶೌಚಾಲಯ ಕಟ್ಟಿಸಿಕೊಡಲು ಲಕ್ಷಾಂತರ ಕೋಟಿ ಅನುದಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.

     ದೇಶದ ರೈತರ ಸಂಕಷ್ಟ ಅರಿತ ಮೋದಿ ವರ್ಷಕ್ಕೆ 6 ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ನೀಡುವ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಈಗಾಗಲೇ 2 ಸಾವಿರ ರೈತರ ಖಾತೆಗೆ ಹಣ ಜಮಾ ಆಗಿದೆ ಎಂದರು.

       ರೈತರಿಗೆ ವರ್ಷಕ್ಕೆ 12 ಕೋಟಿ ಸಾಲ ಕೊಡುವ ಯೋಜನೆಯನ್ನು ಮೋದಿ ಜಾರಿಗೆ ತಂದಿದ್ದಾರೆ. ಆರೋಗ್ಯ ಕಾರ್ಡ್ ಸಿಗದಿದ್ದವರು ಕಾಮನ್ ಸರ್ವೀಸ್ ಸೆಂಟರ್‍ನಲ್ಲಿ ಕೂಡಾ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು ಎಂದರು. ಬಡವರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿದ ಮೋದಿ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿದ್ದು, ಪ್ರತಿ ತಾಲೂಕು ಕೇಂದ್ರದಲ್ಲೂ ಜನರಿಕ್ ಔಷಧಿ ಕೇಂದ್ರಗಳನ್ನು ತೆರೆದಿದ್ದಾರೆ ಎಂದರು.

       ದಿ.ಜಿ. ಮಲ್ಲಿಕಾರ್ಜುನಪ್ಪ ಅವರ ನಂತರ ನನಗೂ ಮೂರು ಬಾರಿ ಆಶೀರ್ವಾದ ಮಾಡಿದ ತಾಲೂಕಿನ ಜನತೆ ನಾಲ್ಕನೇ ಬಾರಿಗೂ ನನಗೆ ಮತ ನೀಡಬೇಕು. ಇದು ನನ್ನ ಕೊನೆಯ ಚುನಾವಣೆ. ಈ ಬಾರಿ ನಾನು ಗೆದ್ದರೆ ದಾವಣಗೆರೆ ಜಿಲ್ಲೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತೇನೆ.

       ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಭಾಗದ ತುಂಗಾ ನಾಲಾ ಆಧುನೀಕರಣಕ್ಕೆ ನಾನು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಸಾಕಷ್ಟು ಹೋರಾಟ ಮಾಡಿದ್ದೇವೆ. ಜಿ.ಎಂ. ಸಿದ್ದೇಶ್ವರ್ ಅವರೊಂದಿಗೆ ನಾನು ದೆಹಲಿಗೂ ಹೋಗಿ ಬಂದಿದ್ದೇನೆ.

       ಅವರ ಪ್ರಯತ್ನದಿಂದ ತುಂಗಾ ನಾಲಾ ಆಧುನೀಕರಣಕ್ಕೆ 343 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಕೆಲಸವಾಗುತ್ತಿರುವುದಕ್ಕೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡುತ್ತಿರುವುದೇ ಕಾರಣ. ತಾಲೂಕಿನಲ್ಲಿ ಬಿಜೆಪಿ ಸರಕಾರವಿದ್ದಾಗ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ. ಸಂಸದ ಜಿ.ಎಂ. ಸಿದ್ದೇಶ್ವರ್ ಅವರೂ ತಾಲೂಕಿನ ಪ್ರತಿ ಗ್ರಾಮಕ್ಕೂ ಅನುದಾನ ಕೊಟ್ಟಿದ್ದಾರೆ. ಆದ್ದರಿಂದ ಜಿ.ಎಂ. ಸಿದ್ದೇಶ್ವರ್ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

      ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಸದಸ್ಯ ಎಂ.ಆರ್. ಮಹೇಶ್, ವೀರಶೇಖರಪ್ಪ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್ ಪಾಟೀಲ್, ಮುಖಂಡರಾದ ಕೆ.ವಿ. ಚನ್ನಪ್ಪ, ಮಾರುತಿನಾಯ್ಕ, ಕೊನಾಯಕನಹಳ್ಳಿ ಮಂಜುನಾಥ್, ಹಾಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link