ಹುಳಿಯಾರು
ಹುಳಿಯಾರಿನಲ್ಲಿ ಯುಗಾದಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟಸುಖ ಸಮನಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕೆಲ ದೇವಾಲಯಗಳಲ್ಲಿ ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. ನೂರಾರು ಮಂದಿ ಈ ವರ್ಷದ ಭವಿಷ್ಯ, ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಕೇಳುತ್ತಿದ್ದು ವಿಶೇಷವಾಗಿತ್ತು.
ಯುಗಾದಿ ದಿನ ಬೀದಿ ಬೀದಿಗಳಲ್ಲಿ ಶಾಮಿಯಾನ ಹಾಕಿ 3 ದಿನಗಳ ಕಾಲ ಅಹೋ ರಾತ್ರಿ ಜೂಜಾಡುವುದು ಇಲ್ಲಿ ವಾಡಿಕೆ. ಆದರೆ ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕಿದ್ದರಿಂದ ಬೀದಿ ಬದಿ ಇಸ್ಪೀಟ್ ಆಡದಿದ್ದರೂ ಕದ್ದು ಮುಚ್ಚಿ ಮನೆ ಹಾಗೂ ತೋಟದ ಮನೆಗಳಲ್ಲಿ ಜೂಜಾಡಿ ತಮ್ಮ ವಾಂಛೆ ತೀರಿಸಿಕೊಂಡರು.