ದಾವಣಗೆರೆ:
ಜಿಲ್ಲಾದ್ಯಂತ ಹಿಂದೂ ಬಾಂಧವರು ಭಾನುವಾರ ಚಂದ್ರಮಾನ ಯುಗಾದಿ ಹಬ್ಬವನ್ನು ಸಡಗರ, ಸಂಭ್ರದಿಂದ ಆಚರಿಸಿದರು. ಯುಗಾದಿಯ ವೈಶಿಷ್ಟ್ಯವಾಗಿರುವ ಚಂದ್ರನ ದರ್ಶನ ಪಡೆದರು.ಭಾನುವಾರ ಸಂಜೆ ಚಂದ್ರನ ದರುಶನ ಪಡೆದು ಪುನೀತರಾಗುವುದರ ಜೊತೆಗೆ ಬಂಧು-ಮಿತ್ರರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿದರು.
ನಗರದ ಪ್ರೌಢಶಾಲಾ ಮೈದಾನ, ಜಿಲ್ಲಾ ಕ್ರೀಡಾಂಗಣ, ದೇವರಾಜ ಅರಸು ಬಡಾವಣೆ ಮೈದಾನ ಸೇರಿದಂತೆ ಹಲವು ಮೈದಾನಗಳಲ್ಲಿ ಚಂದ್ರನ ದರ್ಶನ ಪಡೆಯಲು ಗುಂಪು, ಗುಂಪಾಗಿ ಜನ ಸೇರಿದ್ದರೆ, ಇನ್ನೂ ಕೆಲರವರು ಬಹುಮಹಡಿ ಕಟ್ಟಡಗಳ ಮೇಲೆ ಏರಿ ಚಂದ್ರನ ದರುಶನ ಪಡೆದರು.
ಯುಗಾದಿ ಎಂದರೆ ಕನ್ನಡಿಗರಿಗೆ ಸಂಭ್ರಮದ ಹಬ್ಬ ಹಾಗೂ ಹೊಸ ವರುಷದ ಆರಂಭೋತ್ಸವವೇ ಆಗಿದೆ. ಯುಗಾದಿಯ ಪ್ರಯುಕ್ತ ಹಿಂದೂ ಬಾಂಧವರು, ಅದರಲ್ಲೂ ಮಹಿಳೆಯರು ಬಾಗಿಲ ಮುಂದೆ ಬಣ್ಣ-ಬಣ್ಣದ ರಂಗೋಲಿ ಬಿಡಿಸಿ, ಮಾವಿನ ಹಾಗೂ ಬೇವಿನ ಸೋಪ್ಪಿನ ಹಸಿರು ತಳೀರು, ತೋರಣ ಕಟ್ಟಿ ಅಲಂಕರಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಅಭ್ಯಂಜನ (ಎಣ್ಣೆ ಸ್ನಾನ) ಮಾಡುವುದು ಯುಗಾದಿಯ ವಿಶೇಷ ಆಚರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮೈಗೆ ಸವರಿಕೊಂಡು, ಕಾದ ನೀರಿನಲ್ಲಿ ಒಂಚೂರು ಬೇವಿನ ಸೋಪ್ಪು ಹಾಕಿ ಎಣ್ಣೆ ಸ್ನಾನ ಮಾಡಿಕೊಂಡು ಹೊಸ ಉಡುದಾರ ಹಾಗೂ ಹೊಸ ಬಟ್ಟೆ ತೊಟ್ಟು ಯುಗಾದಿ ಆಚರಣೆಯಲ್ಲಿ ತೊಡಗಿದ್ದು ಆರ್ಕಷಕವಾಗಿತ್ತು.
ಕಡ್ಲಿ, ಬೆಲ್ಲ ಹಾಗೂ ಬೇವಿನ ಹೂವಿನ ಮಿಶ್ರಣ ಮಾಡಿ ಬೇವು-ಬೆಲ್ಲ ತಯಾರಿಸಿ, ಜೀವನದಲ್ಲಿ ಮುಂದೆ ನಡೆಯುವ ಸಿಹಿ ಹಾಗೂ ಕಹಿ ಘಟನೆಗಳನ್ನು ಮತ್ತು ಸುಖ-ದು:ಖಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆಂಬ ವಾಗ್ದಾನದ ಮೂಲಕ ಬೇವು-ಬೆಲ್ಲ ಸೇವನೆ ಮಾಡಿ, ಹಿರಿಯರಿಗೂ, ಗೆಳೆಯರಿಗೂ ಹಂಚಿ ಹೊಸ ವರುಷ ಹಾಗೂ ಯುಗಾದಿಯನ್ನು ಸಂಭ್ರಮದಿಂದ ಬರ ಮಾಡಿಕೊಂಡ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿತ್ತು.
ಒಬ್ಬಟು-ಹೋಳಿಗೆಯ ಸಿಹಿ ಭೋಜನ:
ಯುಗಾದಿ ಹಬ್ಬದ ವಿಶೇಷವೇ ಒಬ್ಬಟು ಅಥವಾ ಹೋಳಿಗೆಯ ಭಕ್ಷ ಭೋಜನ. ಯುಗಾದಿ ಸಂದರ್ಭದಲ್ಲಿ ಎಂತಹ ಬಡವನಿದ್ದರೂ ಹೋಳಿಗೆ ತಯಾರಿಸಿ, ಮನೆ ದೇವರುಗಳಿಗೆ ನೈವೇದ್ಯವಿಟ್ಟು ಸವಿದು ಸಂಭ್ರಮಿಸುವ ಕ್ಷಣ, ಸ್ನೇಹಿತರನ್ನು ಮನೆಗೆ ಭೋಜನಕ್ಕಾಗಿ ಆಹ್ವಾನಿಸುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.