ನರೇಂದ್ರ ಮೋದಿ ಅವರನ್ನು ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಿ : ಎಚ್.ಕೆ.ಪಾಟೀಲ್

ಬೆಂಗಳೂರು

         ಮಿಲಿಟರಿ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣಾ ಆಯೋಗ ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ ಆಗ್ರಹಿಸಿದ್ದಾರೆ.

       ಪ್ರೆಸ್ ಕ್ಲಬ್ ನಲ್ಲಿಂದು ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ಕೆಲಸ ನಡೆಯುತ್ತಿದೆ. ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆ ಇದಾಗಿದೆ ಎಂದರು.

      ದೇಶದಲ್ಲಿ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕಾಗಿದೆ. ಈ ಹಿನ್ನಲೆಯಲ್ಲಿ ದೇಶದ ಸಂವಿಧಾನ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆಯನ್ನು ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆಗಳು ಚುನಾವಣಾ ಆಯೋಗದ ಕಾರ್ಯಗಳ ಮೇಲೆ ಸಂಶಯ ಉಂಟುಮಾಡುವಂತಿವೆ ಎಂದರು. ರಾಜಸ್ಥಾನದ ರಾಜ್ಯಪಾಲರಾದ ಕಲ್ಯಾಣ ಸಿಂಗ್ ಅವರು ತಾವು ಬಿಜೆಪಿ ಕಾರ್ಯಕರ್ತ ಎಂದು ಬಹಿರಂಗವಾಗಿ ಹೇಳುತ್ತಾರೆ.

       ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಪಕ್ಷದ ಕಾರ್ಯಕರ್ತ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಇದರ ವಿರುದ್ದ ಚುನಾವಣಾ ಆಯೋಗ ದೇಶದ ಸಾರ್ವಭೌಮ ಅಧಿಕಾರ ಹೊಂದಿರುವ ರಾಷ್ಟ್ರಪತಿಗಳಿಗೆ ದೂರು ನೀಡುತ್ತಾರೆ. ಆದರೆ ದುರಾದೃಷ್ಟ ಎಂದರೆ ಈ ಪ್ರಕರಣವನ್ನು ರಾಷ್ಟ್ರಪತಿಗಳು ಗೃಹ ಇಲಾಖೆಗೆ ವಹಿಸುತ್ತಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವರ ವಿರುದ್ದ ಕ್ರಮ ಕೈಗೊಳ್ಳದೇ ಇರುವುದು ಬಹಳ ವಿಷಾದನೀಯ ಎಂದರು. ಈ ನಿಟ್ಟಿನಲ್ಲಿ ರಾಜಸ್ಥಾನದ ರಾಜ್ಯಪಾಲ ಕಲ್ಯಾಣಸಿಂಗ್ ಅವರನ್ನು ತಕ್ಷಣ ಅಮಾನತ್ತಿನಲ್ಲಿ ಇಡಬೇಕು ಎಂದರು.

       ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿರೋದ ಪಕ್ಷದ ಬಿಜೆಪಿ ನಾಯಕರು ಮಾತನಾಡಲಿ. ಆದರೆ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷರೂ ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈ ಹಿನ್ನಲೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಸಂವಿಧಾನಕ್ಕೆ ಅಡ್ಡಿಯನ್ನುಂಟುಮಾಡಿದ್ದು ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಎಂದರು.

        ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 5 ಮಹಾಯುದ್ದಗಳನ್ನು ಗೆದ್ದಿದ್ದೇವೆ. ನಾವು ಯುದ್ದ ಗೆದ್ದಿದ್ದೇವೆ ಎಂದು ಯಾವತ್ತು ಮತ ಹಾಕಿ ಎಂದು ಕೇಳಿಲ್ಲ. ಆದರೆ ಇಂದು ಪುಲ್ವಾಮಾ ಹೆಸರಿನಲ್ಲಿ ಮೋದಿ ಮತ ಯಾಚಿಸುತ್ತಿರುವುದು ಸರಿನಾ? ಭಾವನಾತ್ಮಕ ವಿಚಾರಗಳ ಮೂಲಕ ಬಿಜೆಪಿ ಮತ ಕೇಳುತ್ತಿದ್ದೆಯೇ ಹೊರತು ಜನಸಾಮಾನ್ಯರ ಬದುಕಿಗೆ ಏನು ಮಾಡುತ್ತಿದೆ ಎಂದು ಎಲ್ಲೂ ಹೇಳುವುದಿಲ್ಲ. ಇದು ದೇಶದ ದುರ್ದೈವ ಎಂದರು.

        ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೇನಾ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿ ಬಿಜೆಪಿ ಬಾವುಟ ಹಿಡಿದು ಚುನಾವಣಾ ಪ್ರಚಾರ ಮಾಡುತ್ತಿರುವುದು ಸಂವಿಧಾನ – ಪ್ರಜಾಪ್ರಭುತ್ವ ವಿರೋಧಿ ಕೆಲಸ ಎಂದರು. ದೊಡ್ಡವರನ್ನು ಸರಿದಾರಿಗೆ ತರುವುದೇ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ದೊಡ್ಡವರ ತಪ್ಪುಗಳು ದೊಡ್ಡ ಪರಿಣಾಮವನ್ನೇ ಬೀರುತ್ತಿವೆ. ಪ್ರಧಾನಿ ಮೋದಿ ಮಿಲಿಟರಿ ವಸ್ತ್ರ ಧಿರಿಸಿ ಗಾಗಲ್ ಧರಿಸುವುದು ತಪ್ಪು, ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿದರೆ ಜನರಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಮೂಡಲು ಸಾಧ್ಯ ಎಂದರು.

       ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಬರಿ ಬಾಯಿಮಾತಿನ ಎಚ್ಚರಿಕೆ ಸಾಲದು. ಮೋದಿಯನ್ನು ಚುನಾವಣೆಯಿಂದ ಅನರ್ಹಗೊಳಿಸಬೇಕು ಎಂದು ಪುನರ್ ಉಚ್ಚರಿಸಿದರು.

       ಮಂತ್ರಿ ಸ್ಥಾನಕ್ಕೀಂತಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ದೊಡ್ಡದು. ಮಂತ್ರಿ ಪದವಿ ಹಂಚುವ ಮೊದಲೇ ನನಗೆ ಪಕ್ಷ ಇದರ ಬಗ್ಗೆ ಸೂಚನೆ ನೀಡಿತ್ತಾ ಇಲ್ಲವಾ ಎನ್ನುವುದು ಪಕ್ಷದ ಆಂತರಿಕ ವಿಚಾರ. ಹತ್ತಾರು ವರ್ಷ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿಯೇ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಈಗ ಪಕ್ಷದ ಕೆಲಸ ಮಾಡುತ್ತಿದ್ದೇನೆ ಎಂದರು.

         ಬಿಜೆಪಿ ಪ್ರಣಾಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲರು, ಕೇವಲ ಚುನಾವಣೆ ಮಾತ್ರ ನಮ್ಮ ಗುರಿಯಲ್ಲ. ದೇಶ ಕಟ್ಟುವುದು ನಮ್ಮ ಮೊದಲ ಗುರಿ. ಈ ಹಿಂದೆ ಪ್ರಧಾನಿ ಮೋದಿ ಪ್ರತಿಯೋಬ್ಬರ ಅಕೌಂಟಿಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಭರವಸೆ ಕೊಟ್ಟಿದ್ದರು, ಅದನ್ನು ಈಡೇರಿಸಿದ್ದಾರ ಎಂದು ಪ್ರಶ್ನಿಸಿದರು. ಬಿಜೆಪಿ ಪ್ರಣಾಳಿಕೆಯ ಬಗ್ಗೆ ಜನರಿಗೆ ಅರ್ಥವಿಲ್ಲ ಹಾಗೂ ವಿಶ್ವಾಸವೂ ಇಲ್ಲ. ಹೀಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಜನರು ನಂಬುವುದಿಲ್ಲ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link