ತುಮಕೂರು
ತುಮಕೂರು ನಗರದಲ್ಲಿ ಕಂದಾಯ ಭೂಮಿಯಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗಿರುವ ಕಟ್ಟಡಗಳಿಗೆ ಮತ್ತು ಇತರೆ ಕಟ್ಟಡ ಪರವಾನಗಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್ ನಿರಾಕ್ಷೇಪಣಾ ಪತ್ರ (ಎನ್.ಓ.ಸಿ.), ಕುಡಿಯುವ ನೀರು ಮತ್ತು ಒಳಚರಂಡಿ (ಯುಜಿಡಿ) ಸಂಪರ್ಕ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆಯ ಆಡಳಿತವು ಕೆಲವೊಂದು ಮಹತ್ವದ ನಿರ್ಣಯ ಕೈಗೊಂಡಿದೆ.
ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿರುವ ಪಾಲಿಕೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಸಮಸ್ಯೆಯನ್ನು ಚರ್ಚಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ನೀರು, ಯುಜಿಡಿ ಸಂಪರ್ಕಕ್ಕೆ ಮೂರು ಹಂತದ ಕ್ರಮ
ನಗರದಲ್ಲಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಒದಗಿಸಲು ನಿಯಮಿತವಾದ ಮೂರು ಹಂತದ ವಿಧಾನಗಳನ್ನು ಅನುಸರಿಸಲು ಈ ಸಭೆಯಲ್ಲಿ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ.
ಮೊದಲನೆಯದಾಗಿ-
“ಒಳಚರಂಡಿ/ನೀರಿನ ಕೊಳಾಯಿ ಸಂಪರ್ಕ ಕೋರಿ ಬರುವ ಅರ್ಜಿಯನ್ನು ಆಯಾ ವಾರ್ಡ್ಗೆ ಸಂಬಂಧಿಸಿದ ಸಿವಿಲ್ ಇಂಜಿನಿಯರ್ (ಎಇ/ ಜೆಇ ಮತ್ತು ಎ.ಇ.ಇ.) ಸ್ವೀಕರಿಸಿ, ಸಂಬಂಧಿತ ಕಟ್ಟಡ ನಿರ್ಮಾಣ ನಿಯಮಾನುಸಾರ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಕಡತದಲ್ಲಿ ದಾಖಲಿಸಬೇಕು. ಮತ್ತು ಒತ್ತುವರಿಯಾಗಿದ್ದ ಪಕ್ಷದಲ್ಲಿ ಒತ್ತುವರಿಯಾಗಿರುವ ಕಟ್ಟಡದ ವಿಸ್ತೀರ್ಣದ ವಿವರದೊಂದಿಗೆ ಸ್ಪಷ್ಟವಾದ ಅಭಿಪ್ರಾಯವನ್ನು ಕಡತದಲ್ಲಿ ದಾಖಲಿಸಿ ಕಂದಾಯ ಶಾಖೆಗೆ ಸಲ್ಲಿಸಬೇಕು.”
ಎರಡನೆಯದಾಗಿ-
“ಕಂದಾಯ ಶಾಖೆಯಲ್ಲಿ ಕಡತದಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿ ಕಟ್ಟಡ ನಿರ್ಮಾಣ ನಿಯಮಾನುಸಾರವಿದ್ದಲ್ಲಿ ನಿಗದಿತ ಆಸ್ತಿ ತೆರಿಗೆಯನ್ನು ಪಾವತಿಸಿಕೊಳ್ಳಬೇಕು ಅಥವಾ ಕಟ್ಟಡವು ನಿಯಮಬಾಹಿರ ನಿರ್ಮಾಣವಾಗಿದ್ದಲ್ಲಿ ದುಪ್ಪಟ್ಟು ಆಸ್ತಿ ತೆರಿಗೆಯನ್ನು ದಂಡದ ರೂಪದಲ್ಲಿ ಪಾವತಿಸಿಕೊಂಡು, ರಶೀದಿಯನ್ನು ಮುದ್ರಿಸಿ ಕಡತದಲ್ಲಿ ಅಡಕವಿರಿಸಿ ಯುಜಿಡಿ/ ನೀರಿನ ಕೊಳಾಯಿ ಸಂಪರ್ಕ ನೀಡುವ ಸಂಬಂಧ ಕಡತವನ್ನು ತಾಂತ್ರಿಕ ಶಾಖೆಗೆ ಕಳುಹಿಸಬೇಕು.”
ಮೂರನೆಯದಾಗಿ-
“ಸಂಬಂಧಿತ ತಾಂತ್ರಿಕ ಶಾಖೆಯಲ್ಲಿ ಒಳಚರಂಡಿ/ ನೀರಿನ ಕೊಳಾಯಿ ಸಂಪರ್ಕ ನೀಡುವ ಸಂಬಂಧ ನಿಯಮಾನುಸಾರ ನಿಗದಿತ ಶುಲ್ಕ ಪಾವತಿಸಿಕೊಂಡು ಒಳಚರಂಡಿ/ ನೀರಿನ ಕೊಳಾಯಿ ಸಂಪರ್ಕ ಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಬೇಕು.
ಅರ್ಜಿದಾರರು ಮಹಾನಗರ ಪಾಲಿಕೆಯಿಂದ ಪ್ಲಂಬಿಂಗ್ ಪರವಾನಗಿ ಹೊಂದಿದ ಏಜೆನ್ಸಿಯ ಮೂಲಕವೇ ಒಳಚರಂಡಿ/ ನೀರಿನ ಕೊಳಾಯಿ ಸಂಪರ್ಕ ಪಡೆಯಬೇಕು ಹಾಗೂ ಮಹಾನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿ ಪರವಾನಗಿದಾರನು ನೀಡುವ ಯುಜಿಡಿ/ ನೀರಿನ ಕೊಳಾಯಿ ಸಂಪರ್ಕ ನಿಯಮಾನುಸಾರ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು” ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ದುಪ್ಪಟ್ಟು ಆಸ್ತಿ ತೆರಿಗೆ
ನಿಯಮಬಾಹಿರವಾಗಿ ನಿರ್ಮಾಣ ಮಾಡಲಾದ ಕಟ್ಟಡಗಳು ತೆರವು ಆಗುವವರೆಗೂ ಪ್ರತಿ ವರ್ಷ ದುಪ್ಪಟ್ಟು ಆಸ್ತಿ ತೆರಿಗೆಯನ್ನು ನಿಯಮಾನುಸಾರ ವಿಧಿಸಲು ತೀರ್ಮಾನಿಸಲಾಗಿದೆಯಲ್ಲದೆ, ಇಂತಹ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆಯನ್ನು ದಂಡದ ರೂಪದಲ್ಲಿ ವಿಧಿಸಿದರೂ, ಸದರಿ ಆಸ್ತಿಯನ್ನು ಸಕ್ರಮ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿದ್ಯುತ್ ಎನ್ಓಸಿ ನಮ್ಮದಲ್ಲ
ವಿದ್ಯುತ್ ಎನ್.ಓ.ಸಿ. ಕೋರಿ ಬರುತ್ತಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆ ವತಿಯಿಂದ ವಿದ್ಯುತ್ ಎನ್.ಓ.ಸಿ.ಯನ್ನು ನೀಡಲಾಗುವುದಿಲ್ಲ.
ಬದಲಾಗಿ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಸಭೆ ಕರೆದು ಚರ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಮಳೆ ನೀರು ಕೊಯ್ಲು ಕಡ್ಡಾಯ
ತುಮಕೂರು ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಹಾಗೂ ಲಭ್ಯವಾಗುವ ಮಳೆ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಟ್ಟಡ ಪರವಾನಗಿಯಲ್ಲಿನ ಷರತ್ತುಗಳಲ್ಲಿ ತಿಳಿಸಿರುವಂತೆ “ಮಳೆ ನೀರಿನ ಕೊಯ್ಲು” ವಿಧಾನ ಅಳವಡಿಸಿಕೊಳ್ಳದ ಕಟ್ಟಡಗಳ ನಿರ್ಮಾಣವನ್ನು “ನಿಯಮಬಾಹಿರ ಕಟ್ಟಡ ನಿರ್ಮಾಣ” ಎಂದು ಪರಿಗಣಿಸಲು ಸಭೆಯು ತೀರ್ಮಾನಿಸಿದೆ.
ಮಾರ್ಚ್ 31ರೊಳಗೆ ಅನ್ವಯ
ಈ ಸಭೆಯಲ್ಲಿ ಕೈಗೊಳ್ಳಲಾಗಿರುವ ತೀರ್ಮಾನಗಳು ದಿನಾಂಕ 31-03-2019 ರ ಒಳಗೆ ನಿರ್ಮಾಣವಾಗಿರುವ ವಸತಿ ಕಟ್ಟಡಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದ್ದು,
ದಿನಾಂಕ 31-03-2019 ರ ಬಳಿಕ ಯಾವುದೇ ನಿಯಮಬಾಹಿರ ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶ ನೀಡಬಾರದೆಂದು ತಾಂತ್ರಿಕ ಶಾಖೆಗೆ ಹಾಘೂ ಸಂಬಂಧಿತ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ಸಭೆಯ ಆರಂಭದಲ್ಲಿ,
ಭೂಪರಿವರ್ತನೆ ಆಗದೆ ಇರುವ ಹಾಗೂ ಭೂಪರಿವರ್ತನೆ ಮಾಡಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ವಿನ್ಯಾಸ ಅನುಮೋದನೆಯಾಗದಿರುವ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಮಹಾನಗರ ಪಾಲಿಕೆ ವತಿಯಿಂದ ಕಟ್ಟಡ ಪರವಾನಗಿಯನ್ನು ನೀಡಲು ಅವಕಾಶವಿರುವುದಿಲ್ಲ.
ಆದರೂ ಸಹ ಸಾರ್ವಜನಿಕರು ಸದರಿ ಭೂಮಿಯಲ್ಲಿ ನಿಯಮಬಾಹಿರವಾಗಿ ನಿರ್ಮಿಸಿರುವ ಮನೆಗಳಿಗೆ/ಕಟ್ಟಡಗಳಿಗೆ ವಿದ್ಯುತ್ ಎನ್.ಓ.ಸಿ. ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ದಿನಾಂಕ 06-03-2019 ರಲ್ಲಿ ನಡೆದಿರುವ ಪಾಲಿಕೆಯ ಸಾಮಾನ್ಯ ಸ`Éಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಈ ಹಿಂದೆ ಅಂದರೆ ದಿನಾಂಕ 20-11-2018 ರಂದು ಪಾಲಿಕೆ ಕಚೇರಿಯಿಂದ ಹೊರಡಿಸಿರುವ `ಜ್ಞಾಪನ` (ಸಂಖ್ಯೆ: ತುಮಪಾ/ಸಿಬ್ಬಂದಿ/ಸಿಆರ್/100/2018-19)ದಲ್ಲಿ ಸದರಿ ನಿಯಮಬಾಹಿರ ಕಟ್ಟಡಗಳಿಗೆ ಯಾವುದೇ ವಿದ್ಯುತ್ ಸಂಪರ್ಕ,
ನಲ್ಲಿ ಸಂಪರ್ಕ ನೀಡಬಾರದೆಂದು ನಿರ್ದೇಶನ ನೀಡಿರುವ ವಿಷಯಗಳು ಪ್ರಸ್ತಾಪಗೊಂಡಿತು. ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ರ ನಿಯಮ-112 (ಸಿ) ಪ್ರಕಾರ ನಿಯಮಬಾಹಿರ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆಯನ್ನು ದಂಡ ರೂಪದಲ್ಲಿ ಪಾವತಿಸಿಕೊಂಡು ವಿದ್ಯುತ್ ಸಂಪರ್ಕ ನೀಡಲು ಎನ್.ಓ.ಸಿ. ನೀಡುವ ಬಗ್ಗೆ ಯಾವುದೇ ಸ್ಪಷ್ಟವಾದ ನಿಯಮಗಳಿಲ್ಲ. ಈಗಾಗಲೇ ಸಾರ್ವಜನಿಕರು ವಾಸವಿರುವ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕರ್ನಾಟಕ ಪೌರನಿಗಮಗಳ ಅಧಿನಿಯಮ ಸೆಕ್ಷನ್-58 ರಲ್ಲಿ ವಿವರಿಸಿರುವಂತೆ ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯವಾಗಿರುತ್ತದೆ ಎಂಬ ವಿಷಯವೂ ಅಧಿಕಾರಿಗಳ ಸಭೆಯಲ್ಲಿ ಚರ್ಚೆಗೊಂಡಿತು. ಅವೆಲ್ಲವನ್ನೂ ಚರ್ಚೆ ಮಾಡಿ ಅಂತಿಮವಾಗಿ ಮೇಲ್ಕಂಡಂತೆ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.