ಅಪಪ್ರಚಾರ ಬಿಡಿ, ನಿಮ್ಮ ಕೆಲಸಗಳ ಮಾಹಿತಿ ನೀಡಿ

ದಾವಣಗೆರೆ:

      ಸಂಸದನಾಗಿ ತಾವು 15 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಕೈಗೊಂಡಿದ್ದರೂ, ಕಾಂಗ್ರೆಸ್‍ನವರು ಸಂಸದರ ಕೊಡುಗೆ ಏನೆಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅವರು ಐದು ವರ್ಷದ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದಾರೆಂಬುದನ್ನು ಮೊದಲಿಗೆ ಜನತೆಗೆ ತಿಳಿಸಲಿ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಸವಾಲು ಎಸೆದರು.

       ದಾವಣಗೆರೆ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಲೇರಿ, ಮುದಹದಡಿ, ಕನಗೊಂಡನಹಳ್ಳಿ, ಬಲ್ಲೂರು, ಕುಕ್ಕುವಾಡ, ಕೈದಾಳೆ, ಹದಡಿ ಗ್ರಾಮಗಳು ಸೇರಿದಂತೆ ಇತರೆ ಗ್ರಾಮಗಳಲ್ಲಿ ಸೋಮವಾರ ಪ್ರಚಾರ ಕೈಗೊಂಡು, ಮತಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ, ಪದೇ ಸಂಸದರ ಕೊಡುಗೆ ಏನು? 15 ವರ್ಷದ ಅವಧಿಯಲ್ಲಿ ಸಂಸದರು ಏನೂ ಕೆಲಸ ಮಾಡಿಲ್ಲ ಎಂಬುದಾಗಿ ಅಪಪ್ರಚಾರ ಮಾಡುವವರು ಐದು ವರ್ಷಗಳಲ್ಲಿ ಅವರು ಏನೇನು ಕೆಲಸ ಮಾಡಿದ್ದಾರೆಂಬುದನ್ನು ಮೊದಲು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.

         ಮೂರು ಅವಧಿಗೆ ಜಿಲ್ಲೆಯನ್ನು ಪ್ರತಿನಿಧಿಸಿ, ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಪ್ರತಿ ಐದು ವರ್ಷಗಳಿಗೂ ಆಯಾ ಅವಧಿಯಲ್ಲಿ ಮಾಡಿದ ಸಾಧನೆಗಳ ವಿಚಾರವನ್ನು ಮತದಾರರಿಗೆ ನೀಡುತ್ತಿದ್ದೇನೆ. ಕ್ಷೇತ್ರದಾದ್ಯಂತ ಪ್ರವಾಸ ಮಾಡಿ, ಜನಸಾಮಾನ್ಯರ ನಡುವೆ ನಾನೂ ಸಹ ಸಾಮಾನ್ಯ ವ್ಯಕ್ತಿಯಾಗಿ ಇದ್ದೇನೆ. ಆದರೂ ಸಹ ವಿರೋಧ ಪಕ್ಷದವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.

        ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಭ್ರಷ್ಟಾಚಾರದ ಹಣದಿಂದ ಚುನಾವಣೆಯಲ್ಲಿ ಮತದಾರರನ್ನು ಖರೀದಿಸಿ ಗೆಲ್ಲಬಹುದು ಎಂದುಕೊಂಡಿದ್ದರೇ, ಅದು ಅವರ ಮೂರ್ಖತನವಾಗಲಿದೆ. ಇಂದು ಜನತೆ ಅಭ್ಯರ್ಥಿಯ ಸ್ವಭಾವವನ್ನು ನೋಡುತ್ತಾರೆಯೇ ಹೊರತು, ಹಣವನಲ್ಲ ಎಂದು ಹೇಳಿದರು.

         ಮತದಾರರೇ ನನ್ನ ಮಾಲೀಕರಾಗಿದ್ದಾರೆ. ನಾನು ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಆರು ಜನ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜೊತೆಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಲ್ಲದೇ, ದಾವಣಗೆರೆ ದಕ್ಷಿಣ ಹಾಗೂ ಹರಿಹರ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಪ್ರಚಾರದಲ್ಲಿ ತೊಡಗಿದ್ದು, ಈ ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

          ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಹಣವಿರುವವರು ಚುನಾವಣೆಯಲ್ಲಿ ಖರ್ಚು ಮಾಡುತ್ತಾರೆ. ಆದರೆ, ನಮ್ಮ ಬಳಿ ಹಣವೂ ಇಲ್ಲ ಹಾಗೂ ಅದನ್ನು ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ. ದಾವಣಗೆರೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ, ಸಿದ್ದೇಶ್ವರ್ ಅವರು ನಾಲ್ಕನೇ ಬಾರಿಯೂ ಸಂಸತ್ ಪ್ರವೇಶಿಸಲಿದ್ದಾರೆಂದು ಭವಿಷ್ಯ ನುಡಿದರು.

           ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಬಿ.ಎಂ.ಸತೀಶ್, ರಾಜನಹಳ್ಳಿ ಶಿವಕುಮಾರ್, ವೈ.ಮಲ್ಲೇಶ್, ಗೌತಮ್ ಜೈನ್, ಶಂಕರಗೌಡ ಬಿರಾದರ್, ಸೋಗಿ ಶಾಂತಕುಮಾರ್, ಶಿವರಾಜ್ ಪಾಟೀಲ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link