ಸಿಎಂ,ಮಾಜಿ ಸಿಎಂ,ಡಿಸಿಎಂ,ಡಿಕೆಶಿ ವಿರುದ್ಧ ಆಯೋಗಕ್ಕೆ ಐಟಿ ದೂರು

ಬೆಂಗಳೂರು

      ರಾಜಕಾರಣಿಗಳು ತಮ್ಮಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಐಟಿ ಅಧಿಕಾರಿಗಳು ದೂರು ನೀಡಿದ್ದಾರೆ.

       ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರ ವಿರುದ್ಧ ಐಟಿ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ.

         ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಐಟಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವುದು ಕಾನೂನು ಬಾಹಿರ. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಒತ್ತಾಯಿಸಲಾಗಿದೆ.

         ನಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.ಯಾವುದೇ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು,ಸಂಘಟನೆಗಳು ಸೇರಿದಂತೆ ಯಾರೇ ಪ್ರತಿಭಟನೆ ನಡೆಸಬೇಕಾದರೆ ಮೊದಲು ಅನುಮತಿ ಪಡೆಯಬೇಕು.

        ಕಾಂಗ್ರೆಸ್-ಜೆಡಿಎಸ್ ನಾಯಕರು ಅನುಮತಿಯನ್ನೂ ಪಡೆಯದೆ ಏಕಪಕ್ಷೀಯವಾಗಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಮೇಲೆ ಈ ರೀತಿ ಪ್ರತಿಭಟನೆ ನಡೆಸುವುದು ಕಾನೂನಿಗೆ ವಿರುದ್ಧ.ಅಲ್ಲದೆ ನೀತಿಸಂಹಿತೆ ಜಾರಿಯಾಗಿರುವಾಗ ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಕರ್ನಾಟಕ ಗೋವಾ ಐಟಿ ಇಲಾಖೆಯ ಮಹಾನಿರ್ದೇಶಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ.

         ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್,ನಮಗೆ ಐಟಿ ಇಲಾಖೆ ದೂರು ನೀಡಿರುವುದು ನಿಜ. ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಈಗಾಗಲೇ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ಯಾವ ಕಾರಣಕ್ಕಾಗಿ ದೂರು ನೀಡಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

          ಕೆಲ ದಿನಗಳ ಹಿಂದೆ ಹಾಸನ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಕೆಲವು ಕಡೆ ಐಟಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಕೆಲವು ಸಂಬಂಧಿಕರ ಮೇಲೆ ದಾಳಿ ನಡೆಸಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link