ಹರಿಹರ:
ಜಿಲ್ಲೆಯ 8 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಬಿ.ಮಂಜಪ್ಪಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೊನ್ನಾಳಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ನಗರದ ಎಸ್.ಎಸ್.ಕೆ. ಕಲ್ಯಾಣ ಮಂಟಪದಲ್ಲಿ ಆಯೋಜಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅಥವಾ ಎಸ್.ಎಸ್.ಮಲ್ಲಿಕಾರ್ಜುನ ಮೈತ್ರಿ ಅಭ್ಯರ್ಥಿ ಆಗುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪರಿಗೆ ಟಿಕೆಟ್ ದಕ್ಕಿತು. ನಾಮಪತ್ರ ಸಲ್ಲಿಕೆ ನಂತರ ಮೈತ್ರಿ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಚುನಾವಣಾ ಲೆಕ್ಕಾಚಾರಗಳಲ್ಲ ಮೈತ್ರಿ ಅಭ್ಯರ್ಥಿ ಪರವಾಗಿಯೆ ಇದ್ದು, ಅಗಿದ್ದೆಲ್ಲಾ ಒಳ್ಳೆಯದೆ ಎಂಬಂತಾಗಿದೆ ಎಂದರು.
ಕಳೆದ 25 ವರ್ಷಗಳ ಹಿಂದೆ ಹಿಂದುಳಿದ ವರ್ಗದ ನಾಯಕ ಚನ್ನಯ್ಯ ಒಡೆಯರ್ ದಾವಣೆಗೆರೆಯಿಂದ ಆಯ್ಕೆಯಾಗಿದ್ದರು. ಅದಾದ ನಂತರ ಇದೆ ಮೊದಲ ಭಾರಿಗೆ ಮತ್ತೆ ಹಿಂದುಳಿದ ಸಮಾಜದ ಮುಖಂಡರೊಬ್ಬರಿಗೆ ಅವಕಾಶ ದೊರೆತಿದ್ದು, ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ಕಳೆದ ಮೂರು ಸಲ ಸತತವಾಗಿ ಆಯ್ಕೆಯಾಗಿರುವ ಜಿ.ಎಂ.ಸಿದ್ದೇಶ್ವರ ಸಾಧನೆ ಶೂನ್ಯ. ಇದುವರೆಗೂ ಅವರು ಜಿಲ್ಲೆಗೆ ಒಂದೆ ಒಂದು ಮಹತ್ತರ ಯೋಜನೆ ತಂದಿಲ್ಲ. ಹೋದಲ್ಲಿ, ಬಂದಲ್ಲಿ ಅವರಿಗೆ ನೀವು ಏನು ಮಾಡಿದ್ದೀರಿ ಎಂದು ಕೇಳಿದರೆ ಅವರು ನರೇಂದ್ರ ಮೋದಿ ಕಡೆಗೆ ಕೈತೋರಿಸಿ ಕುಳಿತುಕೊಳ್ಳುತ್ತಾರೆ. ಪದೆ ಪದೆ ಮೋದಿ ಮುಖ ನೋಡಿ ಇವರಿಗೆ ಓಟು ನೀಡಲು ನಮ್ಮ ಮತದಾರರೇನು ದಡ್ಡರಲ್ಲ ಎಂದು ಛೇಡಿಸಿದರು.
ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ಬಣ್ಣಬಣ್ಣದ ಸುಳ್ಳು ಮಾತುಗಳಿಂದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಷ್ಟ್ರೀಯತೆ, ಸೇನೆಯನ್ನು ತಮ್ಮ ಸ್ವಂತದ್ದೆಂಬಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುವ ಜನರೆ ಇವರ ಟಾರ್ಗೆಟ್, ಯುವಕರ ಮೈಂಡ್ ವಾಶ್ ಮಾಡಿ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಪ್ರಸಕ್ತ ಚುನಾವಣೆಯಲ್ಲಿ ಪ್ರತಿಯೊಬ್ಬರೂ ವಿವೇಚನೆಯಿಂದ ಆಲೋಚಿಸಿ, ಭಾರತದ ಉತ್ತಮ ಭವಿಷ್ಯಕ್ಕಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು.
ಜಿಲ್ಲಾ ಮುಖಂಡ ಡಿ.ಬಸವರಾಜ್ ಮಾತನಾಡಿ, ಕ್ಷೇತ್ರದಲ್ಲಿರುವ ಎಲ್ಲಾ ಸಮಾಜದ ಮತದಾರರೂ ಮೈತ್ರಿ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ. ಸತತ ಮೂರು ಸಲ ಆಯ್ಕೆಯಾಗಿರುವ ಸಿದ್ದೇಶ್ ಸಾಧನೆ ಶೂನ್ಯ, ಹೋದಲ್ಲಿ ಬಂದಲ್ಲಿ ಜನರೆ ಅವರನ್ನು ಪ್ರಶ್ನಿಸುತ್ತಿದ್ದಾರೆ. ಅದ್ಯಾವ ಮುಖ ಹೊತ್ತು ಪ್ರಚಾರಕ್ಕೆ ತೆರಳುತ್ತಿದ್ದಾರೋ ತಿಳಿಯದು ಎಂದು ಟೀಕಿಸಿದರು.
ಕೇಂದ್ರದ ವಿಮಾನಯಾನ ಖಾತೆ ಸಚಿವರಾಗಿದ್ದರೂ ರಾಜ್ಯದ ಕೇಂದ್ರ ಸ್ಥಳವೂ, ವಿದ್ಯಾನಗರಿಯೂ ಆದ ದಾವಣಗೆರೆಗೆ ಒಂದು ವಿಮಾನ ನಿಲ್ದಾಣ ತರಲಾಗಲಿಲ್ಲ. ಆ ವೇಳೆ 500 ಎಕರೆ ಜಾಗ ಕೇಳಿದ್ದೆ ಸಿಗಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಮೂಲ ಗುಣದಂತೆ ಇವರೂ ಸಹ ಮಹಾ ಸುಳ್ಳುಗಾರರು. ನಮ್ಮ ಕ್ಷೇತ್ರಕ್ಕೆ ಇವರು ಶಾಪವಾಗಿದ್ದಾರೆ. ಇವರನ್ನು ತೊಲಗಿಸಿದಾಗ ಮಾತ್ರ ಕ್ಷೇತ್ರದ ಗ್ರಹಣ ಬಿಡಲು ಸಾದ್ಯ ಎಂದರು.
ಜಿಲ್ಲಾ ವೀಕ್ಷಕರಾದ ಬಲ್ಕೀಷ್ ಬಾನು ಮಾತನಾಡಿ, ಮೋದಿಯಿಂದ ದೇಶಕ್ಕೆ ಏಕತೆ, ಸಮಗ್ರತೆಗೆ ಗಂಡಾಂತರ ಒದಗಿ ಬಂದಿದೆ, ಪುಲ್ವಾಮಾ ದಾಳಿ ನಂತರದ ಬೆಳವಣಿಗೆಗಳು ಇದಕ್ಕೆ ಸಾಕ್ಷಿಯಾಗಿವೆ. ಐದಾರು ದಶಕಗಳ ಕಾಲ ಚೀನಾ, ಪಾಕಿಸ್ಥಾನದಂತ ಶತೃ ದೇಶಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ. ನೂರಾರು ಸರ್ಜಿಕಲ್ ಸ್ಟ್ರೈಕ್ ನಡೆಲಾಗಿದೆ ಆದರೆ ಅದ್ಯಾವುದನ್ನೂ ಕಾಂಗ್ರೆಸ್ ತನ್ನದೆಂದು ಬಿಂಬಿಸಿಕೊಳ್ಳಲಿಲ್ಲ. ಆದರೆ ಮೋದಿ ಎಲ್ಲದೂ ತನ್ನದೆ ಸಾಧನೆ ಎಂದು ಬೀಗುತ್ತಾರೆ ಎಂದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಬಿಜೆಪಿಯರು ಸುಳ್ಳು ಹೇಳುವಲ್ಲಿ ನಿಸ್ಸೀಮರು, ಸಣ್ಣ-ಪುಟ್ಟದ್ದನ್ನೆಲ್ಲಾ ದೊಡ್ಡದಾಗಿ ಬಿಂಬಿಸಿ ಜನರನ್ನು ಮರಳು ಮಾಡಲು ನೋಡುತ್ತಾರೆ. ಆದರೆ ಮೋದಿ ಆಟ ನಡೆಯದು, ಜನರೇನು ದಡ್ಡರಲ್ಲ. 5 ವರ್ಷಗಳಲ್ಲಿ ವಿದೇಶ ಪ್ರವಾಸ ಮಾಡಿದ್ದೆ ಅವರ ಸಾಧನೆ, ಅದರಿಂದಲೂ ಏನೂ ಲಾಭವಾಗದಿದ್ದರೂ ಮೋದಿ ಬಂದ ನಂತರವೇ ಭಾರತ ವಿಶ್ವಗುರುವಾಗಿದೆ ಎಂಬ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಕಪ್ಪು ಹಣ ತರುವುದು, 2 ಕೋಟಿ ಉದ್ಯೋಗ ಸೃಷ್ಟಿಸುವುದೆಲ್ಲಾ ಸುಳ್ಳಾಯಿತು. ಹಿಂದೂ ಧರ್ಮ ಗುತ್ತಿಗೆ ಹಿಡಿದವರಂತೆ ಬಿಜೆಪಿಗರು ರಾಜಕೀಯ ಕಾರಣಕ್ಕೆ ಹಬ್ಬಗಳನ್ನೆಲ್ಲಾ ಆಚರಿಸಿ, ಜನರನ್ನು ಮರಳು ಮಾಡುತ್ತಾರೆ. ಕ್ಷೇತ್ರದ ಎಲ್ಲಾ ವರ್ಗದ ಜನರೂ ಸಹ ಹೆಚ್.ಬಿ.ಮಂಜಪ್ಪರ ಗೆಲುವಿಗೆ ಶ್ರಮಿಸುವ ಮೂಲಕ ದೇಶದ ಭವಿಷ್ಯ ಕಾಪಾಡಬೇಕಿದೆ ಎಂದು ಕರೆ ನೀಡಿದರು. ಎಮ್ಮೆಲ್ಸಿ ಅಬ್ದುಲ್ ಜಬ್ಬಾರ್ ಖಾನ್, ಮುಖಂಡರಾದ ನಿಖಿಲ್ ಕೊಂಡಜ್ಜಿ, ಶಂಕರ್ ಖಟಾವಕರ್, ಪರಶುರಾಮ್ ಕಾಟ್ವೆ, ಕೆ.ಮರಿದೇವ್, ಬೆಳ್ಳುಡಿ ಎಚ್.ಎಚ್. ಬಸವರಾಜ್, ಸಿ.ಎನ್.ಹುಲಿಗೇಶ್, ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
