ವಿಜೃಂಭಣೆಯಿಂದ ನಡೆದ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ

ಹೊನ್ನಾಳಿ:

      ತಾಲೂಕಿನ ಹಳೇ ದೇವರಹೊನ್ನಾಳಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

     25 ಸಾವಿರ ರೂ.ಗಳಷ್ಟು ಮೌಲ್ಯದ ವಿವಿಧ ಹೂವುಗಳಿಂದ, ಪುಷ್ಪಮಾಲಿಕೆಗಳಿಂದ ರಥವನ್ನು ಭರ್ಜರಿಯಾಗಿ ಅಲಂಕರಿಸಲಾಗಿತ್ತು. ರಥಕ್ಕೆ ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ರಥಕ್ಕೆ ಅರ್ಪಿಸಿದ ಮೆಣಸಿನಕಾಳುಗಳನ್ನು ತಿಂದರೆ ಒಳ್ಳೆಯದು ಎನ್ನುವ ಭಾವನೆ ಭಕ್ತರಲ್ಲಿ ಇರುವ ಕಾರಣ ನೆಲದ ಮೇಲೆ ಬಿದ್ದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

       ದೇವಸ್ಥಾನದ ಆವರಣದಿಂದ ಮುಂಭಾಗದ ಮೈದಾನದವರೆಗೆ ರಥ ಹರಿದು ನಿಂತಿತು. ಅಲ್ಲಿ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆಯಲು ಭಕ್ತರ ಮಧ್ಯೆ ಸ್ಪರ್ಧೆಯೇ ಏರ್ಪಟ್ಟಿತ್ತು. ರಥದ ಒಂದು ಭಾಗದ ಗಾಲಿಗಳಿಗೆ ಒಡೆದ ತೆಂಗಿನ ಕಾಯಿಯ ಹೋಳುಗಳನ್ನು ಗ್ರಾಮದ ಹರಿಜನರು ಹಾಗೂ ಇನ್ನೊಂದು ಭಾಗದ ಗಾಲಿಗಳಿಗೆ ಒಡೆದ ತೆಂಗಿನ ಕಾಯಿಯ ಹೋಳುಗಳನ್ನು ಗ್ರಾಮದ ನಾಯಕ ಜನಾಂಗದವರು ತೆಗೆದುಕೊಂಡು ಹೋಗುವುದು ವಾಡಿಕೆ. ಅದರಂತೆ ಅವರು ತೆಂಗಿನ ಕಾಯಿಯ ಹೋಳುಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋದರು.
ಮಧ್ಯಾಹ್ನ 3ರಿಂದ ಓಕುಳಿ ಮಹೋತ್ಸವ, ರಂಗದಾಟ, ಭೂತನಾಥನ ಬಾಳೆಹಣ್ಣಿನ ಸೇವೆ, ಜಾತ್ರೆ ಇತ್ಯಾದಿ ಕಾರ್ಯಕ್ರಮಗಳು ವೈಭವದಿಂದ ನಡೆದವು.

     ಏ. 6ರಂದು ಚಂದ್ರದರ್ಶನದ ನಂತರ ಕಂಕಣ ಧಾರಣೆ ನಡೆಸಲಾಗಿತ್ತು. 7ರಂದು ಧೂಳೆ ಉತ್ಸವ, 8ರಂದು ಕುದುರೆ ಉತ್ಸವ, 9ರಂದು ಗಜ ಉತ್ಸವಗಳು ಮಹಾರಥೋತ್ಸವಕ್ಕೆ ಮೊದಲು ನಡೆದಿದ್ದವು.

      ಶ್ರೀ ಲಕ್ಷ್ಮೀ ಮಾಧವ ರಂಗನಾಥ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್. ಮಾಧುರಾವ್, ರಾಮಾನುಜ ಟ್ರಸ್ಟ್‍ನ ಎಸ್.ಕೆ. ಗೋಪಾಲಸ್ವಾಮಿ, ಮುಖಂಡರಾದ ಮಾದಪ್ಪ, ನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link