ದಾವಣಗೆರೆ:
ಸಾಧಿಸುವ ಛಲ, ಗುರು ಮತ್ತು ಗುರಿ ವಿದ್ಯಾರ್ಥಿಗಳನ್ನು ಯಶಸ್ವಿ ಬದುಕಿನ ಕಡೆ ಕೊಂಡ್ಡೊಯ್ಯಲಿವೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ತಿಳಿಸಿದರು.
ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಧ.ರಾ.ಮ. ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಗೆ ಬಡತನ ಎಂಬುದು ಶಾಪವೇ ಅಲ್ಲ. ಆದರೆ, ಛಲ ಒಂದಿದ್ದರೆ ಬೇಕಾದನ್ನು ಸಾಧಿಸಬಹುದು ಎಂದು ಹೇಳಿದರು.
ಗುರಿ ಸಾಧಿಸಲು ಛಲ, ಆತ್ಮವಿಶ್ವಾಸ, ಶ್ರದ್ಧೆ ಭಾಗವಾಗಬೇಕು. ಹಾಗಾದರೆ ಮಾತ್ರ ಯಶಸ್ವಿ ಬದುಕಿನ ಪಯಣ ಸಾರ್ಥಕವಾಗುತ್ತದೆ. ವಿದ್ಯೆ ಸಾಧಕನ ಸೊತ್ತು ಎಂಬುದನ್ನು ಅರಿತರೆ ಸೋಮಾರಿತನ ತನ್ನಿಂದ ದೂರವಾಗುತ್ತದೆ. ಹಣ ಗಳಿಕೆ ಮುಖ್ಯವಲ್ಲ. ಸಮಾಜಮುಖಿ ಚಿಂತನೆ ವಿದ್ಯಾವಂತರಲ್ಲಿ ಮೂಡಿದರೆ ಪದವಿಗೆ ಸಾರ್ಥಕ ಬರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಬಿ.ಎಸ್.ನಾಗರತ್ನಮ್ಮ ಮಾತನಾಡಿ, ಯುವಕರು ಮೊಬೈಲ್ನಲ್ಲೇ ಕಾಲ ಹರಣ ಮಾಡದೇ, ಭವಿಷ್ಯದ ಬದುಕಿಗೆ ತಾವೇ ಮುನ್ನುಡಿ ಬರೆಯುವ ಉತ್ಸಾಹ ತೋರಬೇಕು. ಆಗ ಮಾತ್ರ ಯಶಸ್ವಿ ಬದುಕು ರೂಪಿಸಿಕೊಳ್ಳಲು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರದ ವಿಭಾಗ ಮುಖ್ಯಸ್ಥೆ ಮಂಗಳಗೌರಿ, ಡಾ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಗೋಪಾಲಕೃಷ್ಣ ನಾಯಕ್, ಕೆ. ಕೊಟ್ರಪ್ಪ, ಹೆಚ್. ಬಸವರಾಜಪ್ಪ, ಪ್ರವೀಣ, ಚಂದನ, ಚೇತನ್ ಸೇರಿದಂತೆ ಇತರರು ಇದ್ದರು. ಸಿ.ಜಿ. ತನುಶ್ರೀ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಡಾ. ಆರ್. ವನಜಾ ಸ್ವಾಗತಿಸಿದರು. ಬಿ. ಭಾರತಿ ಮತ್ತು ಎ.ಎಸ್. ಪೂಜಾ ನಿರೂಪಿಸಿದರು. ಬಿ.ಜಿ. ಸಿದ್ದೇಶ್ ವಂದಿಸಿದರು.