ಬೆಂಗಳೂರು
ಯುಗಾದಿ ಹಬ್ಬದಂದು ಜೂಜಾಟದ ಜಗಳದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್‍ನನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳನ್ನು ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿನಗರದ ಬಂಗಾರಪ್ಪ ನಗರದ ಸಂತೋಷ್ ಅಲಿಯಾಸ್ ಗಿರಿ (22), ರಾಜು ಅಲಿಯಾಸ್ ಡಾಗು (20), ಜೀವನ್ ಅಲಿಯಾಸ್ ಕೋಳಿ (18), ರಾಜು ಅಲಿಯಾಸ್ ಹೆಂಡ್ರು (22), ಕಿರಣ್ ಕುಮಾರ್ ಅಲಿಯಾಸ್ ಮೊಟ್ಟೆ (21), ಜೈಕಿರಣ್ ಅಲಿಯಾಸ್ ಕಿಬ್ರಿ (21) ಬಂಧಿತ ಆರೋಪಿಗಳಾಗಿದ್ದಾರೆ.
ಕೃತ್ಯದಲ್ಲಿ ಭಾಘಿಯಾಗಿ ತಲೆಮರೆಸಿಕೊಂಡಿರುವ ಬಂಗಾರಪ್ಪ ನಗರದ ಪಾಂಡು ಅಲಿಯಾಸ್ ಆಕ್ಟೀವ್ ಪಾಂಡು, ಮಹದೇವ ಅಲಿಯಾಸ್ ಗುಡ್ಡೆ ಮಾದ ಹಾಗೂ ಹರೀಶ್ ಅಲಿಯಾಸ್ ಡಗರಬನಿಗಾಗಿ ತೀವ್ರಶೋಧ ನಡೆಸಲಾಗಿದೆ.ತಲೆಮರೆಸಿಕೊಂಡಿರುವ ಆಕ್ಟೀವ್ ಪಾಂಡು, ಮಹದೇವ, ಡಗರಬ ಅವರ ವಿರುದ್ಧ ಹಲ್ಲೆ, ಕೊಲೆಯತ್ನ, ಮನೆಗಳವು, ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಕರಣದ ತನಿಖೆಯಲ್ಲಿ ಪತ್ತೆಯಾಗಿದೆ.
ಜೂಜಾಟಕ್ಕೆ ಬಂದಿದ್ದ
ಯುಗಾದಿ ಹಬ್ಬದಂದು ಹೊಸಕೆರೆಹಳ್ಳಿಯ ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ರಾಜರಾಜೇಶ್ವರಿ ನಗರದ ಪೆÇಲೀಸ್ ಇನ್ಸ್‍ಪೆಕ್ಟರ್ ಎಂ.ಆರ್. ಸುರೇಶ್, ಮತ್ತವರ ಸಿಬ್ಬಂದಿ, ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೆರೆಹಳ್ಳಿಯ ಚಿನ್ಮಯ ಎಂಬಾತ ಯುಗಾದಿ ಹಬ್ಬದ ರಾತ್ರಿ 11ರ ವೇಳೆ ಜೂಜಾಡಿಕೊಂಡು ಹಣ ಗೆದ್ದು ಬಂಗಾರಪ್ಪ ನಗರದ ಗಣೇಶ ದೇವಸ್ಥಾನದ ಬಳಿಗೆ ಬಂದಿದ್ದು, ಅಲ್ಲಿನ ಹುಡುಗರ ಜೊತೆ ಜೂಜಾಟಕ್ಕೆ ಇಳಿದು ಹಣ ಗೆದ್ದಿದ್ದಾನೆ.ಜೂಜಾಟಕ್ಕೆ ಹೆಚ್ಚಿನ ಹಣವನ್ನು ಜೇಬಿನಿಂದ ತೆಗೆದು ತೆಗೆದು ಪಣಕ್ಕೆ ಕಟ್ಟುತ್ತಿದ್ದುದ್ದನ್ನು ಅಲ್ಲಿದ್ದ ಹುಡುಗರು ನೋಡಿ, ನಮ್ಮಲ್ಲಿ ಗೆದ್ದ ಹಣವನ್ನು ವಾಪಾಸು ಕೊಡುವಂತೆ ಜಗಳವಾಡಿದ್ದಾರೆ.
ಶವ ಎಸೆದು ಪರಾರಿ
ಆದರೆ ಚಿನ್ಮಯ ನಾನು ಇಲ್ಲಿ ಗೆದ್ದಿರುವುದು ನಾಲ್ಕೈದು ಸಾವಿರ ಉಳಿದ ಹಣವನ್ನು ಹೊಸಕೆರೆಹಳ್ಳಿಯಲ್ಲಿ ಗೆದ್ದು ಬಂದಿದ್ದೇನೆ ಎಂದಿದ್ದಾನೆ ಇದೇ ವಿಚಾರವಾಗಿ ಜಗಳ ವಿಕೋಪಕ್ಕೆ ತಿರುಗಿದಾಗ ಹೊಸಕೆರೆಹಳ್ಳಿಯಿಂದ ರಿಯಲ್ ಎಸ್ಟೇಟ್ ಏಜೆಂಟ್ ರಮೇಶ್, ಕಾರ್ತಿಕ್, ಮತ್ತೊಬ್ಬ ರಮೇಶ್ ಎಂಬಾತನನ್ನು ಚಿನ್ಮಯಿ ಕರೆಸಿಕೊಂಡಿದ್ದು, ಎಲ್ಲರೂ ಸೇರಿ ಜಗಳಕ್ಕೆ ಇಳಿದಿದ್ದಾರೆ.
ನಮ್ಮ ಏರಿಯಾ ಬಂದು ನಮ್ಮ ಮೇಲೆ ಜಗಳ ಮಾಡುತ್ತೀಯ ಎಂದು ಬಂಧಿತ ಆರೋಪಿಗಳು ಸೇರಿ, 9 ಮಂದಿ ಚಿನ್ಮಯಿ, ಕಾರ್ತಿಕ್, ರಮೇಶ್ ಮೇಲೆ ಜಗಳ ತೆಗೆದು ಎಲ್ಲರ ಮೇಲೂ ಹಲ್ಲೆ ನಡೆಸಿದ್ದರೆ ಇದರಿಂದ ಹೆದರಿದ ಚಿನ್ಮಯ್, ಕಾರ್ತಿಕ್ ಪರಾರಿಯಾಗಿದ್ದು, ಅಲ್ಲೇ ಉಳಿದ ರಮೇಶ್ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಆಟೋದಲ್ಲಿ ಆತನನ್ನು ಕೂರಿಸಿಕೊಂಡು ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆಟೋದಲ್ಲೇ ಮೃತಪಟ್ಟ ಆತನ ಮೃತದೇಹವನ್ನು ರಾಜರಾಜೇಶ್ವರಿನಗರದ ಕೃಷ್ಣಪ್ಪ ಬಡಾವಣೆಯ ಬಳಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
