ಚಿತ್ರದುರ್ಗ :
ಪ್ರಸಕ್ತ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ವೆಚ್ಚಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಂಡು, ನಿಯಮಾನುಸಾರ ಕಾಲ ಕಾಲಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸುವ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚುನಾವಣಾ ವೆಚ್ಚಗಳ ಲೆಕ್ಕಪತ್ರ ನಿರ್ವಹಣೆ ಕುರಿತು ಈ ಹಿಂದೆಯೂ ಅಭ್ಯರ್ಥಿಗಳೊಂದಿಗಿನ ಸಭೆಯಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಚುನಾವಣೆಗೆ ಸಂಬಂಧಿತ ಅಥವಾ ಪ್ರಚಾರಕ್ಕೆ ಸಂಬಂಧಿತ ಖರ್ಚು ವೆಚ್ಚಗಳನ್ನು, ಬ್ಯಾಂಕ್ ಖಾತೆಯ ಚೆಕ್ ಮೂಲಕವೇ ನಿರ್ವಹಿಸಬೇಕು. ನಗದು ರೂಪದಲ್ಲಿ ಕೈಗೊಂಡ ವೆಚ್ಚಗಳ ವಿವರ ಸಲ್ಲಿಕೆಗೆ ನಿಯಮಗಳಲ್ಲಿ ಅವಕಾಶವಿಲ್ಲ. ಚುನಾವಣಾ ಪ್ರಚಾರ ಸಂದರ್ಭಕ್ಕೆ ಅನುಗುಣವಾಗಿ ಅಗತ್ಯಕ್ಕೆ ತಕ್ಕಂತೆ ಅನುಮತಿಗಳನ್ನು ಪಡೆಯಬೇಕು ಎಂದು ಹೇಳಿದರು
ಮತದಾನ ನಡೆಯವ ಏ. 18 ರಂದು ಯಾವುದೇ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಏ. 17 ರಂದು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕಿದ್ದಲ್ಲಿ, ಅಂತಹ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಪತ್ರಿಕೆಗಳಲ್ಲಿ ಏ. 17 ರಂದು ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು, ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ, ನಿಗದಿತ ಅರ್ಜಿ ನಮೂನೆಯಲ್ಲಿ ಏ. 15 ರ ಒಳಗಾಗಿ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದರು ಯಾವುದೇ ಪತ್ರಿಕೆಗಳು, ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ಪ್ರಮಾಣ ಪತ್ರ ಇಲ್ಲದೇ ಇರುವ ಚುನಾವಣಾ ಸಂಬಂಧಿತ ಜಾಹೀರಾತುಗಳನ್ನು ಏ. 17 ರಂದು ಪ್ರಕಟಿಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ವೆಚ್ಚಗಳ ನೋಡಲ್ ಅಧಿಕಾರಿ ಓಂಕಾರಪ್ಪ ಅವರು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರವನ್ನು ಸಲ್ಲಿಸುವ ಪ್ರಕ್ರಿಯೆ ಕುರಿತು ಪಿಪಿಟಿ ಪ್ರೆಸೆಂಟೇಶನ್ ಮೂಲಕ ವಿವರವಾದ ಮಾಹಿತಿ ನೀಡಿದರು.
ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ್ ಕಳ್ಳೇನವರ್ ಅವರು, ಮತದಾನ ದಿನಕ್ಕೆ ಕೊನೆಯ 72 ಗಂಟೆಗಳು ಹಾಗೂ 48 ಗಂಟೆಗಳು ಹಾಗೂ ಮತದಾನ ದಿನದಂದು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಭ್ಯರ್ಥಿಗಳು ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
