ದಾವಣಗೆರೆ:
ಹೃದಯ ಬಡಿತ ತಲ್ಲಣ ಸಮಸ್ಯೆ ಹೊಂದಿದ್ದ 55 ವರ್ಷದ ರೋಗಿಯೊಬ್ಬರಿಗೆ ನಗರದ ಎಸ್ಎಸ್ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಯಶಸ್ವಿಯಾಗಿ ಐಸಿಡಿ ಹೃದಯ ಚಿಕಿತ್ಸೆ ನೀಡಲಾಗಿದೆ ಎಂದು ಹೃದಯ ತಜ್ಞ ಡಾ.ಪಿ.ಮಲ್ಲೇಶ್ ತಿಳಿಸಿದರು.
ಈ ಕುರಿತು ಗುರುವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಿ ಮೌನೇಶ್ ರೆಡ್ಡಿ (55) ಎಂಬುವವರಿಗೆ ಹೃದಯ ಬಡಿತ ತಲ್ಲಣದಂತ ಸಮಸ್ಯೆ ಇತ್ತು. ಹೃದಯ ಬಡಿತ ಸಾಮಾನ್ಯಕ್ಕಿಂತ ವೇಗವಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನಲೆಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಆ ಸಂದರ್ಭ ಅವರನ್ನು ಆಂಜಿಯೋಗ್ರಾಮ್ ಪರೀಕ್ಷೆ ಮಾಡಿದಾಗ ಹೃದಯ ರಕ್ತನಾಳಗಳಲ್ಲಿ ಯಾವುದೇ ತೊಂದರೆ ಕಂಡುಬರಲಿಲ್ಲ, ಆದರೆ ನಿರಂತರವಾಗಿ ಸಮಸ್ಯೆಯಾಗುತ್ತಿದ್ದ ಕಾರಣ ಹೆಚ್ಚಿನ ತಪಾಸಣೆ ನಡೆಸಿದಾಗ ಹೃದಯ ಬಡಿತ ಹೆಚ್ಚಾಗಿರುವುದರಿಂದ ಜೀವಕ್ಕೆ ಅಪಾಯವಿರುವುದು ಪತ್ತೆಯಾಯಿತು. ನಂತರ ಮಾರ್ಚ್ 7 ರಂದು ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ದೇಹಕ್ಕೆ ಐಸಿಡಿ ಯಂತ್ರ ಅಳವಡಿಸಲಾಗಿದೆ. ಇದೀಗ ಅವರು ಸಂಪೂರ್ಣ ಗುಣಮುಖರಾಗಿ, ಎಲ್ಲರಂತೆಯೇ ಸಹಜ ಜೀವನ ನಡೆಸುತ್ತಿದ್ದಾರೆ ಎಂದರು.
ಐಸಿಡಿ ಒಂದು ಚಿಕ್ಕ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದನ್ನು ಹೃದಯಕ್ಕೆ ಅಳವಡಿಸಿದಾಗ ಹೃದಯ ಸಂಬಂಧಿಸಿದ ತ್ವರಿತ ಹಾಗೂ ಜೀವಪಾಯವಿರುವ ಹೃದಯ ಸಮಸ್ಯೆಗಳ ಮೇಲೆ ನಿರಂತರವಾಗಿ ನಿಗಾ ಇರಿಸಿ ಅದನ್ನು ನಿಯಂತ್ರಿಸುತ್ತದೆ. ಈ ಚಿಕಿತ್ಸೆಯನ್ನು ಎಸ್ಎಸ್ ನಾರಾಯಣ ಹಾರ್ಟ್ ಸೆಂಟರ್ ಯಶಸ್ವಿಯಾಗಿ ನಡೆಸಿದ ಮೊಟ್ಟ ಮೊದಲ ಹೃದ್ರೋಗ ಕೇಂದ್ರವಾಗಿದೆ ಎಂದರು.
ಚಿಕಿತ್ಸೆ ಪಡೆದ ಮೌನೇಶ್ ರೆಡ್ಡಿ ಮಾತನಾಡಿ, ಯಾವುದೇ ತೊಂದರೆಗಳಿಲ್ಲದೆ ಆರೋಗ್ಯದಿಂದಿದ್ದೇನೆ. ಡಾ.ಪಿ.ಮಲ್ಲೇಶ್ ಹಾಗೂ ಅವರ ತಂಡ ನನಗೆ ಮರುಜೀವ ನೀಡಿದ್ದಾರೆ ಎಂದರು.ಗೋಷ್ಠಿಯಲ್ಲಿ ಡಾ. ಸುನೀಲ್ ಭಂಡಾರಿಕರ್, ಡಾ. ಸುಜಿತ್, ಡಾ.ಬಿ. ಶ್ರೀನಿವಾಸ್, ಆರ್.ಎಸ್. ಧನಂಜಯ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ