ತುಮಕೂರು
ಏಪ್ರಿಲ್ 18ರಂದು ನಡೆಯುವ ತುಮಕೂರು ಲೋಕಸಭಾ-2019 ಮತದಾನವನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೊಗದ ನಿರ್ದೇಶನದಂತೆ ಎಲ್ಲಾ ಚುನಾವಣಾ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ತಿಳಿಸಿದರು.
ತುಮಕೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆ ಸಂಬಂಧ 72,48,24 ಗಂಟೆಗಳ ಮಸ್ಟರಿಂಗ್, ಮತದಾನ ದಿನ, ಮತದಾನ ಮಾರನೇ ದಿನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತುಮಕೂರು ಉಪ ವಿಭಾಗ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಸೆಕ್ಟರ್ ಅಧಿಕಾರಿಗಳ ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಏಪ್ರಿಲ್ 18ರಂದು ಚುನಾವಣಾ ಮತದಾನವಿರುವುದರಿಂದ ಇನ್ನೂ ಮುರ್ನಾಲ್ಕು ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಘಟಿಸುತ್ತವೆ. ಫ್ಲೈಯಿಂಗ್ ಸ್ಕ್ವೌಡ್‍ಗಳ ಜತೆಗೆ ಸೆಕ್ಟರ್ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ಸೆಕ್ಟರ್ ಅಧಿಕಾರಿಗಳಿಗೆ ಜಿಪಿಎಸ್ ಅಳವಡಿಸುವ ವಾಹನಗಳನ್ನು ನೀಡಲಾಗುತ್ತಿದೆ. ಸೆಕ್ಟರ್ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಶಾಂತಿ ರೀತಿಯಲ್ಲಿ ಮತದಾನ ನಡೆಯಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ನಾಳೆಯೇ ನಿಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ, ಮತಗಟ್ಟೆಗಳಲ್ಲಿರುವ ರ್ಯಾಂಪ್, ವಿದ್ಯುತ್ ದ್ವೀಪಗಳು ಸೇರಿದಂತೆ ಚುನಾವಣಾ ಮತದಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಖಾತರಿ ಪಡಿಸಿಕೊಂಡು ಸಹಾಯಕ ಚುನಾವಣಾಧಿಕಾರಿಗಳು ಅಥವಾ ತಹಶೀಲ್ದಾರ್‍ಗಳಿಗೆ ವರದಿ ಸಲ್ಲಿಸಿ ಎಂದು ಅವರು ಸೂಚಿಸಿದರು.
ಮಸ್ಟರಿಂಗ್, ಡಿಮಸ್ಟರಿಂಗ್, ಚುನಾವಣಾ ಮತದಾನದ ದಿನದಂದು ಸೆಕ್ಟರ್ ಅಧಿಕಾರಿಗಳು, ಚುನಾವಣಾ ಆಯೋಗದ ನಿರ್ದೇಶನದನ್ವಯ ಕಾಲ ಕಾಲಕ್ಕೆ ಸಲ್ಲಿಸಬೇಕಾಗಿರುವ ವರದಿಗಳನ್ನು ಸಹಾಯಕ ಚುನಾವಣಾಧಿಕಾರಿಗಳಿಗೆ ಸರಿಯಾದ ಸಮಯಕ್ಕೆ ಸಲ್ಲಿಸಲು ಕ್ರಮವಹಿಸಿ ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಖರ್ಚು ವೀಕ್ಷಕರಾದ ವಿ.ಎಸ್ ನೇಗಿ ಅವರು ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‍ಎಸ್‍ಟಿ, ಎಫ್‍ಎಸ್‍ಟಿ ತಂಡಗಳು ಸೇರಿದಂತೆ ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣಾ ಮತದಾನದ 72 ಗಂಟೆಗಳ ಮುನ್ನ ಎಲ್ಲರೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಬೇಕು.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಗಳು ಕಂಡು ಬಂದರೆ, ಜಿಲ್ಲಾ ಚುನಾವಣಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವೀಕ್ಷಕರುಗಳಿಗೆ ವರದಿ ಮಾಡಿ, ಅಲ್ಲದೆ ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಕೆಲಸ ನಿರ್ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಶುಭಾ ಕಲ್ಯಾಣ್ ಅವರು ಚುನಾವಣಾ ಮತದಾನಕ್ಕೆ ಮುಂಚೆ ಚುನಾವಣಾ ಪೂರ್ವ ಸಿದ್ಧತೆಗಳನ್ನು ಸರಿಯಾಗಿ ಮಾಡಿಕೊಂಡರೆ ಚುನಾವಣಾ ಮತದಾನವನ್ನು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಡೆಸಬಹುದಾಗಿದೆ ಎಂದು ಸೆಕ್ಟರ್ ಅಧಿಕಾರಿಗಳಿಗೆ ತಿಳಿಸಿದರು.
ಚುನಾವಣಾ ಮತದಾನಕ್ಕೂ ಮುನ್ನ 72,48,24 ಗಂಟೆಗಳ ಮುನ್ನ ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕಾಗಿರುವ ಕರ್ತವ್ಯಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ ವಿವರವಾದ ಮಾಹಿತಿಯನ್ನು ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಅವರು ನೀಡಿದರು.
ಸಭೆಯಲ್ಲಿ ಸಹಾಯ ಚುನಾವಣಾಧಿಕಾರಿಗಳಾದ ಶಿವಕುಮಾರ್, ಯೋಗೇಶ್, ಡಾ|| ಪ್ರೇಮ್‍ಕುಮಾರ್, ಜಯಸ್ವಾಮಿ, ನೋಡಲ್ ಅಧಿಕಾರಿ ಡಾ|| ಜಿ.ಪಿ ದೇವರಾಜ್ ಸೇರಿದಂತೆ ತುಮಕೂರು ಉಪವಿಭಾಗದ ಚುನಾವಣಾ ಸೆಕ್ಟರ್ ಅಧಿಕಾರಿಗಳು ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








