ದಾವಣಗೆರೆ:
ಇಲ್ಲಿನ ಎಂಸಿಸಿ ಬಿ ಬ್ಲಾಕ್‍ನ ಬಾಪೂಜಿ ಡೆಂಟಲ್ ಕಾಲೇಜು ಎದುರು ಶನಿವಾರ ರೋಟರಿ, ರೋಟರ್ಯಾಕ್ಟ್, ಇನ್ನರ್‍ವ್ಹೀಲ್, ಪ್ರಬೋಸ್ ಸಂಸ್ಥೆಗಳ ಸಹಯೋಗದಲ್ಲಿ ಮತದಾನ ಜಾಗೃತಿಗಾಗಿ ಏರ್ಪಡಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಬಸವಪ್ರಭು ಸ್ವಾಮೀಜಿ, ಚುನಾವಣಾ ಮತದಾನದ ದಿನದಂದು ಮತ ಚಲಾಯಿಸಲು ಅನುಕೂಲ ಆಗಲೆಂಬ ಉದ್ದೇಶದಿಂದ ರಜೆ ನೀಡುತ್ತಾರೆ. ಹೀಗಾಗಿ ರಜೆಯ ದಿನವೆಂದು ಭಾವಿಸಿ ಪ್ರವಾಸ ಕೈಗೊಳ್ಳದೇ, ಟಿವಿ ನೋಡುತ್ತಾ ಕಾಲಹರಣ ಮಾಡದೇ ಪ್ರತಿಯೊಬ್ಬರೂ ಸಹ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಬೇಕೆಂದು ಕರೆ ನೀಡಿದರು.
ನಮ್ಮ ಒಂದೋಟಿನಿಂದ ಏನಾದೀತು ಎಂಬ ಮನೋಭಾವದಿಂದ ಮತ ಚಲಾಯಿಸಲು ಹೋಗುವುದಿಲ್ಲ. ಇದು ಸಭ್ಯ ನಾಗರೀಕರ ಗುಣವೂ ಅಲ್ಲ. ಆದ್ದರಿಂದ ಮತದಾರರು ಇಂತಹ ಕೆಟ್ಟ ಆಲೋಚನೆ ಮಾಡದೇ ಏ.23ರಂದು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಮತದಾನವು ಸಂವಿಧಾನ ನಮಗೆ ನೀಡಿರುವ ಶ್ರೇಷ್ಠ ಹಕ್ಕು ಆಗಿದೆ. ನಿಮಗೆ ಇಷ್ಟವಾದ, ನಗರ, ಜಿಲ್ಲೆ, ನಾಡಿನ ಅಭಿವೃದ್ದಿಗಾಗಿ ಪಾಲ್ಗೊಳ್ಳುವ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾನವೇ ಅಸ್ತ್ರವಾಗಿದೆ. ಇದನ್ನು ಪ್ರತಿಯೊಬ್ಬರು ಅರಿತು ಮತ ಚಲಾಯಿಸಬೇಕು. ಸಮಾಜ ಸೇವೆಗೆ ಹೆಸರಾಗಿರುವ ರೋಟರಿ ಸಂಸ್ಥೆಯು ಇಂತಹ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ನಯನ ಪಾಟೀಲ್, ಮಲ್ಲರಸಾ ಕಾಟವೆ, ಜಂಬಗಿ ರಾಧೇಶ, ಬೇತೂರು ಜಗದೀಶ, ನಾಗರಾಜ ಜಾಧವ್, ಡಾ.ಎ.ಎಂ.ಶಿವಕುಮಾರ, ರಾಘವೇಂದ್ರ ನಾಯರಿ, ಅಶೋಕ ರಾಯಬಾಗಿ, ವಿಶ್ವನಾಥ ರೇವಡಿ, ಬಾಡದ ಆನಂದರಾಜ, ಅಜ್ಜಂಪುರದ ಮೃತ್ಯುಂಜಯ, ಎ.ಎನ್.ಶೇಖರ್, ಸಾಲಿಗ್ರಾಮ ಗಣೇಶ ಶೆಣೈ, ಚನ್ನಬಸವ ಶೀಲವಂತ್, ಶ್ರೀಕಾಂತ ಬಗರೆ, ಪೃಥ್ವಿ, ಮಾನಸ, ಪುಷ್ಪಾ, ಪ್ರವೀಣಕುಮಾರ, ಗುರುರಾಜ, ಫಾರ್ಮ ಪ್ರವೀಣ, ಚೇತನಕುಮಾರ, ಕೆ.ಎನ್.ಸುರೇಶ, ಮಹಮ್ಮದ್ ಗೌಸ್, ಬಾತಿ ಅಜಯ, ಪಿ.ಸಿ.ರಾಮನಾಥ ಮತ್ತಿತರರು ಭಾಗವಹಿಸಿದ್ದರು.