ಪಾವಗಡ
ಹೇಮಾವತಿ ನೀರನ್ನು ತುಮಕೂರಿಗೆ ತರಲು ಅಡ್ಡಿಪಡಿಸಿ ಕುತಂತ್ರ ನಡೆಸಿದ ದೇವೇಗೌಡರಿಗೆ 18ನೇ ತಾರೀಖು ತುಮಕೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಬಿ.ಜೆ.ಪಿ. ರೈತ ಮೊರ್ಚಾದ ಉಪಾಧ್ಯಕ್ಷ ಎಸ್. ಶಿವಪ್ರಸಾದ್ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ಮತ್ತು ಮಕ್ಕಳು ಅಧಿಕಾರದಲ್ಲಿದ್ದಾಗ ತುಮಕೂರಿಗೆ ಏನು ಮಾಡಿದ್ದಾರೆ? ಕುಟುಂಬ ರಾಜಕಾರಣದಿಂದಾಗಿ ಜನತಾ ದಳದ ಕಾರ್ಯಕರ್ತರೆ ಬೇಸರ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ತುಮಕೂರಿಗೆ ಮಾಡಿರುವ ಅನ್ಯಾಯವನ್ನು ಇಲ್ಲಿನ ಮತದಾರರು ಸಹಿಸುವುದಿಲ್ಲ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಕೊಡುವುದರ ಮೂಲಕ ರಾಜ್ಯದಲ್ಲಿ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದರು.
ಆದರೆ ಅಧಿಕಾರ ದಾಹದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಜನವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ಈ ಎರಡು ಪಕ್ಷಗಳಿಗೆ ಸೈದ್ದಾಂತಿಕ ನೆಲೆಯಿಲ್ಲ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಚಂದ್ರಪ್ಪನವರು ಯಾವುದೇ ಕೆಲಸ ಮಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದರೆ, ಗಡಿನಾಡು ಪಾವಗಡಕ್ಕೆ ಚಂದ್ರಪ್ಪನವರ ಕೊಡುಗೆ ಶೂನ್ಯ.
ಸಚಿವ ವೆಂಕಟರವಣಪ್ಪನವರು ಸಚಿವರಾಗಿ ಪಾವಗಡ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ? ಸದಾ ವೆಂಕಟರವಣಪ್ಪನವರನ್ನು ಟೀಕಿಸಿಕೊಂಡು ಬಂದಿರುವ ತಾಲ್ಲೂಕು ಜೆಡಿಎಸ್ ಘಟಕ ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪನವರಿಗೆ ನಿಜವಾಗಿಯೂ ಸ್ವಾಭಿಮಾನವಿದ್ದರೆ ನಮ್ಮ ಪಕ್ಷಕ್ಕೆ ಬೆಂಬಲ ನೀಡಬೇಕು. ಈ ಹಿಂದೆ ಕಾಂಗ್ರೆಸ್‍ನ್ನು ವಿರೋಧಿಸುತ್ತಾ ಜಿದ್ದಾಜಿದ್ದಿನ ರಾಜಕಾರಣ ಮಾಡಿಕೊಂಡು ಬಂದಿರುವ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಈಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್‍ಗೆ ಮತ ಹಾಕುತ್ತಾರೆ? ನಾರಾಯಣ ಸ್ವಾಮಿಯವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ದೀನ ದಲಿತರ ಪರ ಹಲವು ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಆಡಳಿತದ ಅನುಭವವಿದೆ, ದೇಶದ ಭದ್ರತೆ, ಸಮಗ್ರತೆ, ಅಭಿವೃದ್ದಿಗಾಗಿ ಪಕ್ಷಾತೀತವಾಗಿ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿಗೆ ಮತ ನೀಡುವುದರ ಮೂಲಕ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು. ಆ ಮೂಲಕ ಪ್ರತಿಯೊಬ್ಬರು ದೇಶದ ರಕ್ಷಣೆ ಮತ್ತು ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ಗಿರೀಶ್, ರವಿಶಂಕರ್‍ನಾಯ್ಕ, ಚಂದ್ರನಾಯ್ಕ, ಮಂಗಳವಾಡರಂಗಣ್ಣ, ತಿಪ್ಪೇಸ್ವಾಮಿ, ಕಡಪಲಕೆರೆ ನವೀನ್, ಬ್ಯಾಡನೂರುಶಿವು ಮತ್ತಿತರರು ಹಾಜರಿದ್ದರು.