ದಾವಣಗೆರೆ
ಪ್ರಧಾನಿ ಮೋದಿ ಸರ್ಕಾರವು, ಯುಪಿಎ ಸರ್ಕಾರದ 23 ಯೋಜನೆಗಳ ಪೈಕಿ 19 ಯೋಜನೆಗಳನ್ನು ಕದ್ದು, ಅದಕ್ಕೆ ಸುಣ್ಣ-ಬಣ್ಣ ಬಳಿದು ಆ ಯೋಜನೆಗಳನ್ನು ತಾವು ತಂದಿರುವುದಾಗಿ ಹಸಿ ಸುಳ್ಳು ಹೇಳುತ್ತಿದ್ದಾರೆಂದು ಚಿತ್ರ ನಟ, ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಿನ ಮೋಡಿಗಾರ-ಹಸಿ ಸುಳ್ಳುಗಳ ಸರದಾರ ಆಗಿರುವ ಪ್ರಧಾನಿ ನರೇಂದ್ರ ಮೋದಿ ಯುಪಿಎ ಸರ್ಕಾರ ಹಿಂದೆ ತಂದಿರುವ ಯೋಜನೆಗಳಾದ ನಿರ್ಮಲ ಭಾರತ ಯೋಜನೆಯನ್ನು ಕದ್ದು, ಸ್ವಚ್ಛ ಭಾರತ ಯೋಜನೆಯನ್ನಾಗಿ, ಮೂಲ ಉಳಿತಾಯ ಠೇವಣಿ ಖಾತೆಯನ್ನು ಕದ್ದು ಜನ್‍ಧನ್ ಯೋಜನೆಯನ್ನಾಗಿ ಹೀಗೆ ನಮ್ಮ ಸರ್ಕಾರದ 19 ಯೋಜನೆಗಳನ್ನು ಕದ್ದು, ಅವುಗಳಿಗೆ ಸುಣ್ಣ-ಬಣ್ಣ ಬಳಿದು ಹೊಸ ಹೆಸರುಗಳನ್ನು ಘೋಷಿಸಿ ಅವುಗಳನ್ನು ತಾವೇ ತಂದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆಂದು ದೂರಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ಸತ್ತು ಹೋಗಿತ್ತಾ? ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಉಳಿಸಿರುವ ಕಾರಣಕ್ಕಾಗಿಯೇ ನರೇಂದ್ರ ಮೋದಿಯವರು ಕಳೆದ ಚುನಾವಣೆಯಲ್ಲಿ ಬಹುಮತ ಗಳಿಸಿ, ಪ್ರಧಾನಿಯಾಗಿದ್ದರು ಎಂಬುದನ್ನು ಮೊದಲು ಅರಿಯಬೇಕೆಂದು ಸಲಹೆ ನೀಡಿದರು.
ಸುವರ್ಣಪಥ ರಸ್ತೆಯನ್ನು ದೇಶಾದ್ಯಂತ ಮಾಡಿದ ವಾಜಪೇಯಿ ಸರ್ಕಾರವು ಸೇರಿದಂತೆ ಹಿಂದಿನ ಯಾವುದೇ ಸರ್ಕಾರಗಳು ಮಾಡದ ಅಭಿವೃದ್ಧಿಯನ್ನು ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದೆ ಎಂಬ ಧಾಟಿಯಲ್ಲಿ ಬಿಜೆಪಿಗರು ಮಾತನಾಡುತ್ತಿರುವುದು ಸರಿಯಲ್ಲ. ದೇಶದಲ್ಲಿ ಕೆಲ ನ್ಯೂನ್ಯತೆ, ಲೋಪದೋಷಗಳಿವೆ ನಿಜ ಅವುಗಳನ್ನು ಸರಿ ಮಾಡುವ ಬಗ್ಗೆ ಮಾತನಾಡಿದರೆ, ನಮ್ಮದೇನೂ ತಕರಾರಿಲ್ಲ. ಆದರೆ, ಇಡೀ ದೇಶವನ್ನು ನಾವೇ ಅಭಿವೃದ್ಧಿ ಮಾಡಿದ್ದೇವೆಂದ ಧಾಟಿಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬರೀ ಪಕ್ಷ ಮಾತ್ರವಲ್ಲ, ಅದು ದೇಶದ ಆತ್ಮವಾಗಿದೆ. ನರೇಗಾ ಯೋಜನೆ ಜಾರಿಗೆ ತಂದವರ್ಯಾರು. ಯುಪಿಎ ಸರ್ಕಾರ ಆಧಾರ್ ಜಾರಿಗೆ ತರಲು ಮುಂದಾಗಿದ್ದ ಸಂದರ್ಭದಲ್ಲಿ ಗಟ್ಟಿಯಾಗಿ ವಿರೋಧಿಸಿದ್ದ ಮೋದಿ, ಅಧಿಕಾರಕ್ಕೆ ಬಂದಾದ ಮೇಲೆ ಏಕೆ ಕಡ್ಡಾಯಗೊಳಿಸಿದರು? ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದವರ್ಯಾರು? ಮಾಹಿ ಹಕ್ಕು ಕಾಯಿದೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ತಂದವರ್ಯಾರು? ಚಂದ್ರಯಾನ ಮಾಡಿದವರ್ಯಾರು? ಇಸ್ರೋ ಆರಂಭಿಸಿದವರ್ಯಾರು? ಎಂದು ಪ್ರಶ್ನಿಸಿದ ಚಂದ್ರು, ಯುಪಿಎ ಅವಧಿಯಲ್ಲಿ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಸಾಧನೆ ಅಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ಘೋಷಿಸಿದ ಒಂದಾಂಶವನ್ನೂ ಸಹ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಲಿಲ್ಲ. ಆದರೆ, ನಮ್ಮ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದೆ ನುಡಿದಂತೆ ನಡೆದಿತ್ತು ಹಾಗೂ ಈಗಿನ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಹ ಪ್ರಣಾಳಿಕೆಯಲ್ಲಿನ ಅಂಶವನ್ನು ಜಾರಿಗೆ ತರುತ್ತಿದೆ ಎಂದರು.
ಬಿಜೆಪಿ ಹಿಂದಿನ ಚುನಾವಣೆಯಲ್ಲಿಯೇ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದರು. ಆದರೆ, ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಅದರ ಚಕಾರವೇ ಎತ್ತಲಿಲ್ಲ. ಈಗ ಮತ್ತೆ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. ಇದನ್ನು ಬಿಜೆಪಿ ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಿರುವುದು ಕಾಂಗ್ರೆಸ್ ಸಾಧನೆಯಾಗಿದೆ ಎಂದರು.
ಹಸಿ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಮೋದಿ ಸರ್ಕಾರಕ್ಕೆ ಈ ಬಾರಿ ಪರ್ಯಾಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದ ಅವಶ್ಯಕತೆ ಇದೆ. ಹೀಗಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸರಳ ಸಜ್ಜನಿಕೆಗೆ ಹೆಸರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ರುದ್ರಪ್ಪ ಹನಗವಾಡಿ ಮಾತನಾಡಿ, ಸಾರ್ವತ್ರಿಕಾ ಚುನಾವಣೆಗಳಲ್ಲಿ ಈ ಹಿಂದೆ ರಾಕೀಯ ಪಕ್ಷಗಳಉ ಬಂದು ಪ್ರಚಾರ ಮಾಡುವ ಪರಿಸ್ಥಿತಿ ಇತ್ತು. ಆದರೆ, ಈಗ ಸಾಹಿತಿ, ಕಲಾವಿದರು, ನಟರು ಪ್ರಚಾರ ನಡೆಸಿ, ಇಂತಹವರಿಗೆ ಮತ ನೀಡಿ ಎಂಬುದಾಗಿ ಹೇಳುವ ಪರಿಸ್ಥಿತಿಯನ್ನು ಮೋದಿ ಸರ್ಕಾರ ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಗಮನಿಸಿದರೆ, ಮುಂದೇ ಚುನಾವಣೆ ಬರುತ್ತೋ, ಇಲ್ಲವೋ ಎಂಬ ಆತಂಕ ಸಮಾಜದಲ್ಲಿ ಮನೆ ಮಾಡಿದೆ. ಸಂವಿಧಾನದ ಕೆಳಗಡೆ ಕೆಲಸ ಮಾಡುತ್ತಿದ್ದ ಸಿಬಿಐ, ಇಡಿ, ಐಟಿ, ಸುಪ್ರೀಂ ಕೋರ್ಟ್‍ನಂತಹ ಸ್ವಯತ್ತ ಸಂಸ್ಥೆಗಳು ಸಹ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ದೇಶದಲ್ಲಿ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಎಂ.ಟಿ.ಸುಭಾಶ್ಚಂದ್ರ ಭೋಸ್, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಶಂಕರ್, ಮುಮ್ತಾಜ್ ಬೇಗ್, ನೌಷದ್ ಮತ್ತಿತರರು ಹಾಜರಿದ್ದರು.