ದಾವಣಗೆರೆ
ಮಹಾಮೈತ್ರಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದಕ್ಕೆ ಇನ್ನೂ ಸರಿಯಾದ ಉತ್ತರವಿಲ್ಲ. ಮಹಾಮೈತ್ರಿಯ ಕಲಬೆರಕೆ ಸರ್ಕಾರ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದರು.
ಜಿಲ್ಲೆಯ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪದ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಉದ್ದೇಶಕ್ಕೆ ವಿವಿಧ ಪಕ್ಷಗಳು ಸೇರಿ ಮಾಡಿಕೊಂಡಿರುವ ಮಹಾಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ, ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಹೆಚ್.ಡಿ.ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಶರದ್ ಯಾದವ್, ಶನಿವಾರ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದು. ಭಾನುವಾರದಂದು ಇಡೀ ದೇಶಕ್ಕೆ ರಜೆ ನೀಡಬಹುದು ಎಂದು ಮಹಾಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾಮೈತ್ರಿಯ ಕಲಬೆರಕೆ ಪಕ್ಷಗಳ ಕೈಯಲ್ಲಿ ದೇಶ ಸುರಕ್ಷಿತವಾಗಿರಲಾರದು. ದೇಶದ ಸುರಕ್ಷತೆ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯವಾಗಿದೆ. ಹೀಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಬಿಜೆಪಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಭಯೋತ್ಪಾದನೆಯನ್ನು ಕೊನೆಗಾಣಿಸಲು ಬಿಜೆಪಿ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿದೆ. ಉಗ್ರರು ನಡೆಸಿದ ಪುಲ್ವಾಮಾ ದಾಳಿಯಲ್ಲಿ ಹತರಾದ 40 ಸೈನಿಕರಿಗೆ ಪ್ರತಿಯಾಗಿ ವೈರಿಗಳ ಮನೆಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಆದರೆ, ನಮ್ಮ ಸೈನಿಕರ ಪ್ರಾಣ ತೆಗೆಯುವವರ ಜೊತೆ ಮಾತುಕತೆ ನಡೆಸಬೇಕೆಂದು ಕಾಂಗ್ರೆಸ್ಸಿನವರು ಹೇಳುತ್ತಾರೆ.
ದೇಶದ ಮೇಲೆ ಆಕ್ರಮಣ ಮಾಡುವ ವೈರಿಗಳ ಜೊತೆಗೆ ಮಾತುಕತೆ ನಡೆಸಬೇಕಾ, ಬಾಂಬ್ ಹಾಕಬೇಕಾ? ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದು ಓಮರ್ ಅಬ್ದುಲ್ಲಾ ಹೇಳುತ್ತಾರೆ. ಒಂದು ದೇಶಕ್ಕೆ ಇಬ್ಬರು ಪ್ರಧಾನಿ ಬೇಕಾ? ಎಂದು ಪ್ರಶ್ನಿಸಿದರು.
ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ 2.5 ಕೋಟಿ ಜನರಿಗೆ ವಸತಿ ಕಲ್ಪಿಸಿದೆ. ಬಯಲು ಶೌಚಮುಕ್ತ ದೇಶ ನಿರ್ಮಾಣಕ್ಕಾಗಿ ದೇಶದ 8 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದೆ. 50 ಕೋಟಿ ಜನರಿಗೆ 5 ಲಕ್ಷದವರೆಗೆ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದೆ.
ಹೀಗಾಗಿ ಕಳೆದ 6 ತಿಂಗಳಿನಿಂದಲೂ ದೇಶದ ದಶದಿಕ್ಕುಗಳಿಂದ ಒಂದೇ ಮಂತ್ರ ಪ್ರತಿಧ್ವನಿಸುತ್ತಿದೆ. ದೇಶದೆಲ್ಲೆಡೆ ಮೋದಿ, ಮೋದಿ ಎಂಬ ಘೋಷ ಕೇಳಿಬರುತ್ತಿದೆ ಎಂದು ಹೇಳಿದರು.
ಕಡಿಮೆ ಸ್ಥಾನ ಗೆದ್ದ ಪಕ್ಷದವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿರುವ ಕಾಂಗ್ರೆಸ್ಸಿಗರು ಹಿಂಬಾಗಿಲ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ರಿಮೋಟ್ ಕಂಟ್ರೋಲ್ ಕಾಂಗ್ರೆಸ್ ಕೈಯಲ್ಲಿದೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಹೊರತು, ರಾಜ್ಯದ ಜನರಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಜನತೆಯನ್ನು ಅವಮಾನಿಸಿದ್ದಾರೆಂದು ಟೀಕಿಸಿದರು.
ತಾವು ಮುಖ್ಯಮಂತ್ರಿಯಾಗುತ್ತಿದ್ದಂತೆ ರೈತರ 46 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇವೆಂದಿದ್ದ ಕುಮಾರಸ್ವಾಮಿ ನುಡಿದಂತೆ ನಡೆದರಾ? ಇಂತಹವರಿಂದ ರೈತರ ಅಭಿವೃದ್ಧಿ, ಏಳಿಗೆ ಸಾಧ್ಯವಿಲ್ಲ. ಇಲ್ಲಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರುಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಸ್ಥಿತಿ ಇದೆ. ಮೈತ್ರಿ ಪಕ್ಷಗಳ ನಾಯಕರ ಪರಸ್ಪರ ಕಿತ್ತಾಟದಿಂದಾಗಿ ರಾಜ್ಯದ ಅಭಿವೃದ್ಧಿ, ಜನಪರ ಕೆಲಸಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್, ಪಕ್ಷದ ಜಿಲ್ಲಾ ಉಸ್ತುವಾರಿ ಆಯನೂರು ಮಂಜುನಾಥ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಿ.ಪಿ.ಹರೀಶ, ಎಂ.ಬಸವರಾಜ ನಾಯ್ಕ, ಜೆ.ಎನ್.ಮೂರ್ತಿ, ಸುರೇಂದ್ರ ನಾಯಕ್, ಶಾಂತರಾಜ ಪಾಟೀಲ್, ಗಾಯತ್ರಿ ಸಿದ್ದೇಶ್ವರ್, ಡಿ.ಜಿ.ರಾಜಣ್ಣ, ದಿಡಗೂರು ಪಾಲಾಕ್ಷಪ್ಪ, ಹೆಚ್.ಎನ್.ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.