ಚೆನ್ನೈ:
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 1.48 ಕೋಟಿ ರೂಪಾಯಿ ಅಕ್ರಮ ಹಣವನ್ನು ಆದಾಯ ತೆರಿಗೆ ಇಲಾಖೆ ಇಂದು ಬೆಳಗಿನ ಜಾವ ತಮಿಳು ನಾಡಿನ ತೆಣಿ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದೆ .
ಕೋಟಿಗಟ್ಟಲೆ ಹಣವನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಕಟ್ಟಿ ಕವರ್ ನೊಳಗೆ ಇಡಲಾಗಿತ್ತು. ಕವರ್ ಮೇಲೆ ವಾರ್ಡ್ ಸಂಖ್ಯೆ, ಮತದಾರರ ಸಂಖ್ಯೆ ಬರೆದು ಪ್ರತಿಯೊಬ್ಬ ಮತದಾರರಿಗೆ ತಲಾ 300 ರೂಪಾಯಿ ಎಂದು ಬರೆಯಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ ಬಿ ಮುರಳಿ ಕುಮಾರ್ ತಿಳಿಸಿದ್ದಾರೆ.
ಈ ವಾರ್ಡ್ ಗಳು ಅಂಡಿಪಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ನಾಳೆ ಈ ಕ್ಷೇತ್ರದಲ್ಲಿ ಮತದಾನ ಕಾರ್ಯ ನಡೆಯಲಿದೆ. ಹಣ ಸಿಕ್ಕಿದ ಕಟ್ಟಡ ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷದ ಕಾರ್ಯಕಾರಿ ಕಚೇರಿ ಆವರಣದಲ್ಲಿದೆ.ಆದಾಯ ತೆರಿಗೆ ಇಲಾಖೆ ಇಂದು ನಡೆಸಿದ ದಾಳಿಯ ವಿವರಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿಗೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ನಗದನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಿನ್ನೆ ಸಂಜೆಯಿಂದ ಆದಾಯ ತೆರಿಗೆ ಇಲಾಖೆ ಸಂಗ್ರಹಾಲಯವೊಂದರಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.ದಾಳಿ ಸಂದರ್ಭದಲ್ಲಿ ಟಿಟಿವಿ ದಿನಕರನ್ ಅವರ ಬೆಂಬಲಿಗರು ಆಕ್ಷೇಪವೊಡ್ಡಿ ಸ್ಥಳಕ್ಕೆ ಬಂದು ಗಲಾಟೆ ಮಾಡಲು ಆರಂಭಿಸಿದ್ದರಿಂದ ಪೊಲೀಸರು ಆಶ್ರುವಾಯು ಸಿಡಿಸಬೇಕಾಯಿತು.
ದಾಳಿ ವೇಳೆ ಕಚೇರಿಯಲ್ಲಿದ್ದ ವ್ಯಕ್ತಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದ್ದು ಅಂಡಿಪಟ್ಟಿ ಪಂಚಾಯತ್ ಪ್ರದೇಶದಲ್ಲಿ ನಾಳೆ ನಡೆಯುವ ಉಪ ಚುನಾವಣೆಗೆ ಮತದಾರರಿಗೆ ಹಂಚಲು ಸುಮಾರು 2 ಕೋಟಿ ರೂಪಾಯಿ ನಗದು ತರಲಾಗಿತ್ತು ಎಂದು ಹೇಳಿದ್ದಾರೆ ಎಂಬುದಾಗಿ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತೆರಿಗೆ ಇಲಾಖೆ ಅಧಿಕಾರಿಗಳು ಬಂದ ಕೂಡಲೇ ಎಎಂಎಂಕೆ ಪಕ್ಷದ ಕಾರ್ಯಕರ್ತರು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ಮೇಲೆ ದಾಳಿ ಮಾಡಲಾರಂಭಿಸಿದರು. ದಾಳಿ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು, ಐಟಿ ಇಲಾಖೆ ಅಧಿಕಾರಿಗಳು ಆವರಣದ ಹೊರಗೆ ನಿಂತಿದ್ದರು.ಕಾರ್ಯಕರ್ತರು ಬಾಗಿಲನ್ನು ಮುರಿದು ಕೆಲವು ನಗದನ್ನು ಕಸಿಯಲು ಯತ್ನಿಸಿದರು. ಈ ವೇಳೆ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.