ದಾವಣಗೆರೆ:
ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸಾರ್ವಜನಿಕರಿಗೆ ಮಾದರಿಯಾಗಿರಬೇಕೆಂಬ ಉದ್ದೇಶದಿಂದ ಕಡ್ಡಾಯ ಮತದಾನಕ್ಕೆ ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಏ.23 ರಂದು ಮತದಾನ ಮಾಡುವ ಸರ್ ಎಂವಿ ಕಾಲೇಜಿನ ಸಿಬ್ಬಂದಿಗಳಿಗೆ ಒಂದು ದಿನದ ಹೆಚ್ಚುವರಿ ವೇತನ ನೀಡಲಾಗುವುದು ಎಂದು ಕಾಲೇಜಿನ ಕಾರ್ಯದರ್ಶಿ ಎಸ್.ಜೆ.ಶ್ರೀಧರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸಿಬ್ಬಂದಿಗಳಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ನೋಟಿಸ್ ಮೂಲಕವೂ ತಿಳುವಳಿಕೆ ನೀಡಲಾಗಿದೆ. ಕಾಲೇಜಿನಲ್ಲಿ ಬೋಧಕ ಮತ್ತು ಬೋಧಕೇತರ 258 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇವರೆಲ್ಲರ ಒಂದು ದಿನದ ವೇತನ ಸುಮಾರು 2.48 ಲಕ್ಷ ರೂ.ಗಳಾಗುತ್ತವೆ. ಸಿಬ್ಬಂದಿಗಳು ತಾವು ಮತದಾನ ಮಾಡಿರುವ ಬಗ್ಗೆ ಕೈ ಬೆರಳಿಗೆ ಹಚ್ಚಿಸುರ ಶಾಯಿಯನ್ನು ತೋರಿಸಿದರೆ, ಆ ಒಂದು ದಿನದ ಹೆಚ್ಚುವರಿ ವೇತನ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ನಮ್ಮ ಸರ್ ಎಂವಿ ಕಾಲೇಜಿನಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ. ಪರಿಸರ ಕಾಳಜಿಗಾಗಿ ಗಿಡಗಳ ಸಂರಕ್ಷಣೆಗೆ ತಂತಿ ಬೇಲಿ ಅಳವಡಿಸುವುದು, ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ರಕ್ತದಾನ ಶಿಬಿರ, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಊಟ ವಸತಿ ಸೌಲಭ್ಯ ಸೇರಿದಂತೆ ಹತ್ತುಹಲವು ಕಾರ್ಯಗಳನ್ನು ಆಯೋಜಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಶಂಕರ್ರಾವ್ ಹಾಜರಿದ್ದರು.