ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಮತದಾನ ನೀರಸವಾಗಿತ್ತು. ಪ್ರಾರಂಭದ ಹಂತದಲ್ಲಿಯೇ ಎಲ್ಲಾ 259 ಬೂತ್‍ಗಳಲ್ಲೂ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ 9 ಗಂಟೆಯಾದರೂ ಚುರುಕಾಗಲಿಲ್ಲ. ಕ್ಷೇತ್ರದಾದ್ಯಂತ ಕೇವಲ 5 ರಷ್ಟು ಮಾತ್ರ ಮತದಾನ ನಡೆದಿದ್ದು, ಬಹುತೇಕ ಮತಗಟ್ಟೆ ಕೇಂದ್ರಗಳಲ್ಲಿ ನೀರಸವಾತಾವರಣವಿತ್ತು.
ಚಳ್ಳಕೆರೆ ನಗರವೂ ಸೇರಿದಂತೆ ಗ್ರಾಮಾಂತರದ ವಿವಿಧ ಬೂತ್‍ಗಳ ಮತಗಟ್ಟೆ ಕೇಂದ್ರಗಳಲ್ಲಿ ಮತ ಯಂತ್ರ ಕೈಕೊಟ್ಟಿದ್ದು, ಕೆಲವು ಗಂಟೆಗಳ ಕಾಲ ಮತದಾರರು ಕಾದು ತಮ್ಮ ಮತವನ್ನು ಚಲಾಯಿಸಬೇಕಾಯಿತು. ಕ್ಷೇತ್ರದ ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಮತಕೇಂದ್ರದಲ್ಲಿ ಇವಿಎಂ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಲಹೊತ್ತು ಮತದಾನ ಸ್ಥಗಿತಗೊಂಡಿದ್ದು, ನಂತರ ಮತದಾನ ಚಾಲನೆಯಾಯಿತು.
ಕೆಲವು ಬೂತ್‍ಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟಿದ್ದು, ಮತ ಚೀಟಿಯಲ್ಲಿ ಪೋಟೋ ಬದಲಾವಣೆ ಮತದಾರರಲ್ಲಿ ಗೊಂದಲ ಉಂಟು ಮಾಡಿತು, ನಗರದ ಬಾಪೂಜಿ ವಿದ್ಯಾಸಂಸ್ಥೆ, ಎಚ್‍ಟಿಟಿ ಶಾಲೆ, ಮಹಾತ್ಮ ಗಾಂಧಿ ಆಂಗ್ಲ ಪ್ರಾಥಮಿಕ ಶಾಲೆ ಮುಂತಾದ ಮತಗಟ್ಟೆ ಕೇಂದ್ರಗಳಲ್ಲೂ ಸಹ ಇವಿಎಂ ದೋಷದ ಕಾರಣ ಕೆಲ ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿದ್ದು, ನಂತರ ಚುನಾವಣಾಧಿಕಾರಿಗಳು ಬೇರೆ ಇವಿಎಂ ಅಳವಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.
ನಗರದ ಕಾಟಪ್ಪನಹಟ್ಟಿಯಲ್ಲಿರುವ ಮತಗಟ್ಟೆ ಸಂಖ್ಯೆ 78ನ್ನು ಸಖಿ ಬೂತಾಗಿ ಪರಿವರ್ತಿಸಿದ್ದು, ಭೂತ್‍ನ ಮುಂಭಾಗದಲ್ಲಿ ತೆಂಗಿನ ಚಪ್ಪರ ಹಾಕಿ, ವಿವಿಧ ಹೂಗಳಿಂದ ಅಲಂಕಾರ ಮಾಡಿ ಮಹಿಳಾ ಮತದಾರರನ್ನು ಸೆಳೆಯುವ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಮತಗಟ್ಟೆ ಕೇಂದ್ರದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿರುವುದು ವಿಶೇಷ.
ಕ್ಷೇತ್ರದ ಬೆಳಗೆರೆ, ನಾರಾಯಣಪುರ, ಹಿರೇಮಧುರೆ, ಚಿಕ್ಕಮಧುರೆ, ಸೋಮಗುದ್ದು, ಪಗಡಲಬಂಡೆ, ಪಿ.ಮಹದೇವಪುರ, ಪರಶುರಾಮಪುರ, ಜಾಜೂರು, ಕರೀಕೆರೆ, ಬೊಮ್ಮಸಮುದ್ರ, ಮೀರಸಾಬಿಹಳ್ಳಿ, ದೇವರಮರಿಕುಂಟೆ, ಕಸ್ತೂರಿ ತಿಮ್ಮಣ್ಣನಳ್ಳಿ, ಗೋಪನಹಳ್ಳಿ, ರಾಮಜೋಗಿಹಳ್ಳಿ, ನನ್ನಿವಾಳ, ದುಗ್ಗಾವರ, ಬುಡ್ನಹಟ್ಟಿ, ಹೊಟ್ಟೆಪ್ಪನಹಳ್ಳಿ ಮುಂತಾದ ಗ್ರಾಮಗಳಲ್ಲಿ ಉತ್ತಮ ಮತದಾನವಾಗಿದೆ.
ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ, ಚಿತ್ರಯ್ಯನಹಟ್ಟಿ, ಮಹಾತ್ಮಗಾಂಧಿ ಶಾಲೆ, ಎಪಿಎಂಸಿ ಮತಗಟ್ಟೆ ಕೇಂದ್ರ, ಮದಕರಿನಗರ ಮತಗಟ್ಟೆ ಕೇಂದ್ರ, ಶಾರದ ವಿದ್ಯಾಸಂಸ್ಥೆ ಮತಗಟ್ಟೆ ಕೇಂದ್ರ, ಸೋಮಗುದ್ದು ರಸ್ತೆ ಬಾಪೂಜಿ ಬಾಲಕಿಯರ ಶಾಲೆ, ನವಚೇತನ ಶಾಲೆ, ಉರ್ದು ಶಾಲೆ, ಎಸ್‍ಜೆಎಂ ಶಾಲೆ, ಹಳೇಟೌನ್ ಪ್ರೈಮರಿ ಶಾಲೆ ಮುಂತಾದ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಶಾಂತಿಯುತವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ.
ನಗರದ ಮಹಾತ್ಮ ಗಾಂಧಿ ವಿದ್ಯಾಸಂಸ್ಥೆಯ ಮತಗಟ್ಟೆ ಸಂಖ್ಯೆ 101ರಲ್ಲಿ ಇವಿಎಂ ಮತಯಂತ್ರ ಮೂರು ಬಾರಿ ಕೆಟ್ಟಿದ್ದು, ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಪಕ್ಷದ ಮಾಜಿ ನಗರಸಸಭಾ ಗೋವಿಂದರಾಜು, ಜೆಡಿಎಸ್ ನಗರಸಭಾ ಸದಸ್ಯ ಹೊಯ್ಸಳಗೊವಿಂದ, ಬಿಜೆಪಿ ಯುವ ಘಟಕದ ಅಧ್ಯಕ್ಷ ಆರ್.ನಾಗೇಶ್ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತ ಪಡಿಸಿದರು.
ಕಾರಣ ನೂರಾರು ಮತದಾರು ಕಾದು ಕಾದು ಮತದಾನ ಮಾಡದೇ ವಾಪಾಸ್ ತೆರಳಿದ್ದು, ಇದರಿಂದ ತೊಂದರೆಯಾಗುತ್ತಿದೆ. ಅಧಿಕಾರಿಗಳು ಸಕಾಲದಲ್ಲಿ ರಿಪೇರಿಗೊಳಿಸಿಲ್ಲವೆಂದು ಅಸಂತೋಷ ವ್ಯಕ್ತ ಪಡಿಸಿದ್ದು, ಮಾಹಿತಿ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ದಾವಿಸಿ ಬದಲಿ ಇವಿಎಂ ಯಂತ್ರವನ್ನು ಅಳವಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಕಳೆದ 2018ರ ವಿಧಾನಸಭಾ ಚುನಾವಣೆ 2019ರ ನಗರಸಭಾ ಚುನಾವಣೆಗೆ ಹೊರತು ಪಡಿಸಿದಲ್ಲಿ ಪ್ರಸ್ತುತ ಲೋಕಸಭಾ ಚುನಾವಣೆಗೆ ಮತದಾನ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದು, ರಾಜಕೀಯ ಪಕ್ಷಗಳ ನೇತಾರರಿಗೆ ಆತಂಕ ಉಂಟು ಮಾಡಿದೆ. ಕಾರಣ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಯ ನಡುವೆ ನೇರ ಹಣಾಹಣೆ ಇದ್ದು, ಇಬ್ಬರಿಗೂ ಗೆಲುವು ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ. ಮತ ಮಂತ್ರ ದೋಷ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಆತಂಕ ಉಂಟಾಗಿದ್ದು, ನಂತರ ಯಾವುದೇ ತೊಂದರೆ ಉಂಟಾಗದಂತೆ ಮತದಾನ ಮುಂದುವರೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
