ದಾವಣಗೆರೆ
ಈ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸಿದರೆ, ದೇಶಕ್ಕೆ ಒಳ್ಳೆಯ ಭವಿಷ್ಯ ಬರುವುದರ ಜೊತೆಗೆ ಜನತೆಗೂ ಒಳ್ಳೆಯ ದಿನಗಳು ಬರಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಈ ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮರೆಮಾಚಿ, ತಾನೇ ಎಲ್ಲಾ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರನ್ನು ಈ ಲೋಕಸಭೆ ಚುನಾವಣೆಯಲ್ಲಿ ಮನೆಗೆ ಕಳಿಸಿದರೆ, ದೇಶಕ್ಕೆ ಒಳ್ಳೆಯ ಭವಿಷ್ಯ, ಜನತೆಗೂ ಒಳ್ಳೆಯ ಕಾಲ ಬರಲಿದೆ ಎಂದು ಹೇಳಿದರು.
ದೀರ್ಘ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿಲ್ಲ, ಎಲ್ಲವನ್ನೂ ತಾನೇ ಮಾಡುತ್ತಿದ್ದೇನೆಂಬಂತೆ ನರೇಂದ್ರ ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದ ಅವರು, 2014ರ ಚುನಾವಣೆಯಲ್ಲಿ ಬಿಜೆಪಿ ವಿದೇಶದಿಂದ ಕಪ್ಪು ಹಣ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು.
15 ಲಕ್ಷ ಇರಲಿ, 15 ಪೈಸೆಯೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.ಯಾವುದೇ ಕಾರಣಕ್ಕೂ ದೇಶದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ಕೆಲಸವನ್ನು ಪ್ರತಿಯೊಬ್ಬ ಮತದಾರರು ಮಾಡಬೇಕು. ಆಗ ಮಾತ್ರ ದೇಶ ಉಳಿಯಲು ಸಾಧ್ಯ? ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು ಜೈಲಿಗೆ ಹೋಗಿ ಬಂದವರ ಸಾಲು ಸಾಲು ನಿದರ್ಶನಗಳಿವೆ. ಈಗಲೂ ಬಹುತೇಕರು ಜಾಮೀನಿನ ಮೇಲೆ ಹೊರಗಿದ್ದಾರೆಂದು ದೂರಿದರು.
ಪ್ರಧಾನಿ ಮೋದಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಐಟಿ ದಾಳಿ ಮಾಡಿಸುವ ಮೂಲಕ ಕಾಂಗ್ರೆಸ್, ಜೆಡಿಎಸ್ ನಾಯಕರು, ಬೆಂಬಲಿಗರು, ಹಿತೈಷಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ವಿಪಕ್ಷ ನಾಯಕರು ಪ್ರಚಾರಕ್ಕೆ ಹೋಗದಂತೆ ತಡೆಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಪ್ರತಿ ತಿಂಗಳಿಗೆ 6 ಸಾವಿರದಂತೆ 72 ಸಾವಿರ ರೂ.ಗಳನ್ನು ಬಡ ರೈತರಿಗೆ ನೀಡುವ ಘೋಷಣೆ ಮಾಡಿದೆ. ನುಡಿದಂತೆ ನಡೆಯುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಬಿಜೆಪಿಯವರಂತೆ ನಾವು ಸುಳ್ಳು ಹೇಳುವವರಲ್ಲ. ಸತ್ಯವನ್ನೇ ಹೇಳುತ್ತೇವೆ. ಹೇಳಿದ್ದನ್ನು ಮಾಡುತ್ತೇವೆ. ಏನು ಮಾಡುತ್ತೇವೆಂಬುದನ್ನೂ ಪ್ರಾಮಾಣಿಕವಾಗಿ ಘೋಷಿಸುತ್ತೇವೆ ಎಂದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರ, ಈಗಿನ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಡವರಿಗೆ ಉಚಿತ ಮನೆ ಕಟ್ಟಿಸಿಕೊಡಲು ಸರ್ಕಾರ ಮುಂದಾಗಿದೆ. ಎಲ್ಲಾ ಗ್ರಾಮಗಳ ಹರಿಜನ, ಗಿರಿಜನ ಕಾಲನಿಗೆ ರಸ್ತೆ, ಚರಂಡಿ ಕಲ್ಪಿಸಿದ್ದು ನಮ್ಮ ಸರ್ಕಾರ. ಜನೋಪಯೋಯಾದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸೈಕಲ್ ಹೀಗೆ ಎಲ್ಲಾ ವರ್ಗಕ್ಕೂ ನ್ಯಾಯಯುತವಾಗಿ ಸೌಲಭ್ಯ ಕಲ್ಪಿಸಿದ್ದೇವೆ. ಪ್ರತಿಯೊಬ್ಬ ಮತದಾರರು ಏ.23ರಂದು ಅಭಿಮಾನದಿಂದ ಮತಗಟ್ಟೆಗೆ ತೆರಳಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಮತ ನೀಡಿ ಆಶೀರ್ವಧಿಸಬೇಕೆಂದು ಮನವಿ ಮಾಡಿದರು.
ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿ ಎಂಬುದಾಗಿ ಕೇಳುತ್ತಿದ್ದಾರೆ. ಆದರೆ, ನಾವು ಮೈತ್ರಿ ಅಭ್ಯರ್ಥಿಯಾಗಿ ಸಚ್ಚ್ಯಾರಿತ್ರ್ಯದ ಯುವಕ, ಭ್ರಷ್ಟಾಚಾರ, ಹಗರಣ ಸೇರಿದಂತೆ ಯಾವುದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಎಚ್.ಬಿ.ಮಂಜಪ್ಪಗೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿಸಿ, ನಮ್ಮ ಪಕ್ಷ ಮಾಡಿರುವ ಸಾಧನೆಯ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ, ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಹದಡಿ ಹಾಲೇಶಪ್ಪ, ತುರ್ಚಘಟ್ಟ ಎಸ್.ಬಸವರಾಜಪ್ಪ, ಕುಕ್ಕವಾಡ ಮಲ್ಲೇಶಪ್ಪ, ಮುದಹದಡಿ ದಿಳ್ಯಪ್ಪ, ನಂದಿಗೌಡ್ರು, ಶಿರಮಗೊಂಡನಹಳ್ಳಿ ರುದ್ರೇಶ, ತುರ್ಚಘಟ್ಟ ರಿಯಾಜ್, ಮೌನೇಶ, ವೆಂಕಟೇಶ, ಶಿವನಗೌಡ, ನಾಗನೂರು ಎನ್.ಡಿ.ಉಜ್ಜಪ್ಪ, ಗೌಡ್ರು ಶಿವಕುಮಾರ, ಮಹೇಶ, ರಾಘವೇಂದ್ರ, ಆವರಗೆರೆ ಮಂಜು, ಎ.ಕೆ.ಚಂದ್ರಪ್ಪ, ಎ.ಕೆ.ನೀಲಪ್ಪ, ಎ.ಕೆ.ಗುಡ್ಡಪ್ಪ, ನಾಗಮ್ಮ ಬಡಾವಣೆಯ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








