ಪ.ಬಂಗಾಳದಲ್ಲಿ ಶೇ.77ರಷ್ಟು ಮತದಾನ..!!!

ಕೊಲ್ಕತ್ತ

         ಪಶ್ಚಿಮ ಬಂಗಾಳದ ಉತ್ತರ ಭಾಗದ ಮೂರು ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನದಲ್ಲಿ ಅಂದಾಜು ಶೇ.77 ರಷ್ಟು ಮತದಾನವಾಗಿದ್ದು, ಅಲ್ಲಲ್ಲಿ ವ್ಯಾಪಕ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.

         ಏಳು ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಿಗದಿಯಾಗಿದ್ದು, ಇಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಡಾರ್ಜಲಿಂಗ್, ಜಲ್‌ಪೈಗುರಿ ಮತ್ತು ರಾಯ್‌ಗಂಜ್‌ ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟು 49,32, 346 ಮತದಾರರ ಪೈಕಿ ಶೇ.77ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 42 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಜಲ್‌ಪೈಗುರಿಯಲ್ಲಿ ಶೇ.82.67ರಷ್ಟು, ಡಾರ್ಜಲಿಂಗ್ ನಲ್ಲಿ ಶೇ.72.14ರಷ್ಟು ಹಾಗೂ ರಾಯ್‌ಗಂಜ್‌ನಲ್ಲಿ ಶೇ.73.31ರಷ್ಟು ಮತದಾನವಾಗಿದೆ.

       ಚಹಾ ತೋಟದ ಕಾರ್ಮಿಕರು ಡಾರ್ಜಲಿಂಗ್ ಮತ್ತು ಜಲ್‌ಪೈಗುರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರೆ, ಪ್ರತಿಷ್ಠಿತ ರಾಯ್‌ಗಂಜ್‌ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮುಸ್ಲೀಂ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದರು.
ಈ ಮಧ್ಯೆ, ಉತ್ತರ ದಿನಾಜ್ ಪುರ್‌ ಜಿಲ್ಲೆಯಲ್ಲಿ ಚುನಾವಣೆ ವೇಳೆ ಬೆಳಿಗ್ಗೆ ಹಿಂಸಾಚಾರ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ.
ಚೋಪ್ರಾದಲ್ಲಿ ಅಪರಿಚಿತ ಕಿಡಿಗೇಡಿ ಕಾರ್ಯಕರ್ತರು ಘರ್ಷಣೆಯಲ್ಲಿ ತೊಡಗಿದ್ದರಿಂದ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ತೀವ್ರ ಘರ್ಷಣೆಯಿಂದ ಚೋಪ್ರಾ ರಣರಂಗವಾಗಿ ಮಾರ್ಪಟ್ಟಿತ್ತು.

        ರಾಯ್‌ ಗಂಜ್‌ನ ಹಾಲಿ ಸಂಸದ ಸಿಪಿಎಂನ ಮೊಹಮದ್‌ ಸಲೀಮ್‌ ಅವರು ತಮ್ಮ ಕಾರಿನ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕಾರಿನ ಮೇಲೆ ಕಲ್ಲು ತೂರಿದ್ದರಿಂದ ಅವರ ಚಾಲಕನೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಡಳಿತಾರೂಢ ಟಿಎಂಸಿ ಕಾರ್ಯಕರ್ತರು ಮತಗಟ್ಟೆ ವಶ ಮಾಡಿಕೊಂಡಿದ್ದಾರೆ ಎಂದು ರಾಯ್‌ಗಂಜ್‌ನಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಹೆದ್ದಾರಿಯನ್ನು ಬಂದ್‌ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಭದ್ರತಾಪಡೆಗಳು ಲಾಠಿ ಚಾರ್ಜ್‌ ನಡೆಸಿ ಚದುರಿಸಿದ್ದಾರೆ.

         ರಾಯ್‌ಗಂಜ್‌ ಕಾರೊನೇಷನ್‌ ಹೈಸ್ಕೂಲ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಮತಗಟ್ಟೆ ವಶಕ್ಕೆ ಪ್ರಯತ್ನಿಸಿದ್ದಾರೆ ಎಂದು ರಾಯ್‌ಗಂಜ್‌ ಬಿಜೆಪಿ ಅಭ್ಯರ್ಥಿ ದೇಬಶ್ರೀ ಚೌಧರಿ ಆರೋಪಿಸಿದ್ದಾರೆ.

      ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡ ನಂತರ ರಾಯ್‌ಗಂಜ್‌ ವ್ಯಾಪ್ತಿಗೆ ಬರುವ ಚೋಪ್ರಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು.ಮತ್ತೊಂದು ಘಟನೆಯಲ್ಲಿ ಪುರುಲಿಯಾದ ಅರ್ಷಾ ಪೊಲೀಸ್ ಠಾಣೆ ವ್ಯಾಪ್ತಿಯ ಸೆನಾಬೊನಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link