ಬೆಂಗಳೂರು
ಮತದಾನ ನಡೆದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತಪೆಟ್ಟಿಗೆ(ಇವಿಎಂ)ಗಳನ್ನು ಜಿಲ್ಲಾ ಕೇಂದ್ರಗಳ ಭದ್ರತಾ ಕೊಠಡಿಯಲ್ಲಿ (ಸ್ಟ್ರಾಂಗ್ ರೂಂ) ಇಡಲಾಗಿದ್ದು, ಶಸ್ತ್ರ ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮತಯಂತ್ರಗಳನ್ನು ಇರಿಸುವ ಕೊಠಡಿಗಳಲ್ಲಿ ನೀರು ಹೋಗುವುದು ಹಾಗೂ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಿ ಕೊಠಡಿಯ ಬೀಗವನ್ನು ಭದ್ರಗೊಳಿಸಿ ಸೀಲ್ ಹಾಕಲಾಗಿದೆ. ಮತದಾನ ನಡೆದ ಮಂಡ್ಯ,ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ-ಕೋಲಾ,ತುಮಕೂರು-ಹಾಸನ, ದಕ್ಷಿಣ ಕನ್ನಡ, ಮಂಡ್ಯ ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಮತದಾನ ನಡೆದ ಇವಿಎಂಗಳನ್ನು ನಿನ್ನೆ ಮಧ್ಯರಾತ್ರಿಯೇ ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಲಾಗಿದೆ.
ಸ್ಟ್ರಾಂಗ್ ರೂಂ ಬಳಿ ಕೇಂದ್ರ ಮೀಸಲು ಪಡೆಯ ಶಸ್ತ್ರ ಸಜ್ಜಿತ ಯೋಧರನ್ನು ನಿಯೋಜಿಸಲಾಗಿದ್ದು, 3 ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಕಮಲ್‍ಪಂತ್ ಅವರು ತಿಳಿಸಿದ್ದಾರೆ.
ಇವಿಎಂಗಳನ್ನು ಇರಿಸಿರುವ ಸ್ಟ್ರಾಂಗ್ ರೂಂ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದ್ದು, 35 ಮಂದಿ ಕೇಂದ್ರ ಪಡೆ ಯೋಧರು ಶಸ್ತ್ರಸಜ್ಜಿತರಾಗಿ ಭದ್ರತೆ ಕೈಗೊಂಡಿದ್ದರೆ, ಕೆಎಸ್‍ಆರ್‍ಪಿಯ 3 ತುಕಡಿಗಳ ಸಿಬ್ಬಂದಿ ಬೆಳಿಗ್ಗೆ ಹಾಗೂ ರಾತ್ರಿ ಪಾಳಯದಲ್ಲಿ ಭದ್ರತೆ ಕೈಗೊಳ್ಳಲಿದ್ದಾರೆ.
ಅವರ ಜತೆ ಜಿಲ್ಲಾ ಸಶಸ್ತ್ರ ದಳದ ಪಡೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಸ್ಥಳೀಯ ಪೊಲೀಸರೂ ಸ್ಟ್ರಾಂಗ್ ರೂಂ ಸುತ್ತ ಭದ್ರತೆಯನ್ನು ಕೈಗೊಳ್ಳಲಿದ್ದಾರೆ. ನಗರಗಳಲ್ಲಿ ಡಿಸಿಪಿಗಳು, ಜಿಲ್ಲೆಗಳಲ್ಲಿ ಎಸ್‍ಪಿಗಳು ಸ್ಟ್ರಾಂಗ್ ರೂಂನ ಭದ್ರತೆಯ ನಿಗಾವಹಿಸಲಿದ್ದಾರೆ ಎಂದು ಕಮಲ್‍ಪಂತ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ