ಹೊನ್ನಾಳಿ:
ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಬೇಕು. ಆದ್ದರಿಂದ, ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ವಿನಂತಿಸಿದರು.
ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಪರ ಮತಯಾಚಿಸಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರಕಾರ ಯಾವುದೇ ತಾರತಮ್ಯವಿಲ್ಲದೇ ದೇಶದ 125 ಕೋಟಿ ಜನತೆಗೂ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ನೀವು ನೀಡುವ ಪ್ರತಿ ಮತವೂ ದೇಶದ ಭದ್ರ ಬುನಾದಿಗೆ ಅಡಿಗಲ್ಲಾಗಲಿದೆ. ಆದ್ದರಿಂದ, ಎಲ್ಲರೂ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಈ ಬಾರಿಯ ಚುನಾವಣೆ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ನಡೆಯುತ್ತಿಲ್ಲ. ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆ ದೃಷ್ಟಿಯಿಂದ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಯಾವುದೇ ದೊಂಬರಾಟಗಳು ನಡೆಯುವುದಿಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಸದರು ಸಾಕಷ್ಟು ಅನುದಾನ ಮಂಜೂರು ಮಾಡಿಸಿದ್ದಾರೆ. ಜನ ಮೆಚ್ಚುವ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಸಂಸದರಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುವ ಕಾಂಗ್ರೆಸ್‍ಗೆ ಈಗಾಗಲೇ ಸೋಲಿನ ಮುನ್ಸೂಚನೆ ದೊರೆತಿದೆ. ಅದರಿಂದ ಅವರು ವಿಚಲಿತರಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿವರಿಸಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್. ತಾಲೂಕು ರೈತ ಮೋರ್ಚಾ ಅಧ್ಯಕ್ಷ ರವೀಂದ್ರನಾಥ್, ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಗ್ರಾಪಂ ಸದಸ್ಯ ಬಸವನಗೌಡ, ಮುಖಂಡರಾದ ಕೆ.ವಿ. ಚನ್ನಪ್ಪ, ಮಂಜುನಾಥ ಹರಿಯಾಣ, ಉಮೇಶ್ ನಾಯ್ಕ, ವೆಂಕಟೇಶ್, ಚಂದ್ರಪ್ಪ, ಬಿ.ವೈ. ನಾಗರಾಜ್, ಪಿ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬೇಲಿಮಲ್ಲೂರು ಜಿಪಂ ಕ್ಷೇತ್ರದ ವ್ಯಾಪ್ತಿಯ ಬೆನಕನಹಳ್ಳಿ, ಸಾಸ್ವೆಹಳ್ಳಿ ಜಿಪಂ ಕ್ಷೇತ್ರದ ವ್ಯಾಪ್ತಿಯ ಹೊಟ್ಯಾಪುರ, ರಾಂಪುರ, ಕುಳಗಟ್ಟೆ, ಕ್ಯಾಸಿನಕೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರೊಡನೆ ಶಾಸಕ ಎಂ.ಪಿ. ರೇಣುಕಾಚಾರ್ಯ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಪರ ಮತಯಾಚಿಸಿದರು.