ಹೊನ್ನಾಳಿ:
ರಟ್ಟೇಹಳ್ಳಿ ತಾಲೂಕು ಹಳ್ಳೂರು ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ದುರ್ಗಾದೇವಿ ಮಹಾರಥೋತ್ಸವ ಶನಿವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಾರಥೋತ್ಸವದಲ್ಲಿ ಹಳ್ಳೂರಿನ ಶ್ರೀ ದುರ್ಗಾದೇವಿ, ಬಸವಣ್ಣ ದೇವರು ಪಾಲ್ಗೊಂಡಿದ್ದವು. ವಿವಿಧ ಬಗೆಯ ಹೂವುಗಳು, ಎಳನೀರು, ವಿವಿಧ ಹಣ್ಣುಗಳು, ಮಾವಿನ ಸೊಪ್ಪು, ವಿವಿಧ ಬಣ್ಣಗಳ ಧ್ವಜಗಳಿಂದ ತೇರನ್ನು ಅಲಂಕರಿಸಲಾಗಿತ್ತು.
ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ದುರ್ಗಾದೇವಿ ಮಹಾರಥೋತ್ಸವ ಬೆಟ್ಟದ ಕೆಳಗಿನ ಗೋವಿಂದರಾಯ ಸ್ವಾಮಿ ದೇವಸ್ಥಾನದಿಂದ ತುಂಗಭದ್ರಾ ನದಿ ಸಮೀಪದ ಹನುಮಂತ ದೇವರ ದೇವಸ್ಥಾನದವರೆಗೆ ಹರಿಯಿತು. ಅಲ್ಲಿಂದ ಮುಖ್ಯರಸ್ತೆಯವರೆಗೆ ಹರಿದು ಮತ್ತೆ ವಾಪಸ್ ಗೋವಿಂದರಾಯ ಸ್ವಾಮಿ ದೇವಸ್ಥಾನದ ಬಳಿ ತೆರಳಿತು. ಭಕ್ತರು ಸಡಗರ-ಸಂಭ್ರಮದಿಂದ ರಥವನ್ನು ವೀಕ್ಷಿಸಿ, ವಿವಿಧ ಹರಕೆ, ಕಾಣಿಕೆ ಸಲ್ಲಿಸಿ ಕೃತಾರ್ಥರಾದರು.
ಒಂದು ವಾರದ ಹಿಂದಿನಿಂದಲೂ ರಥೋತ್ಸವ ಸಂಬಂಧಿ ಸಿದ್ಧತಾ ಕಾರ್ಯಗಳು ಭರದಿಂದ ನಡೆದಿದ್ದವು. ಕಂಕಣ ಧಾರಣೆ, ಧ್ವಜಾರೋಹಣ, ರಥದ ಕಳಸಾರೋಹಣ, ಹೂವಿನ ರಥೋತ್ಸವಗಳು ವೈಭವದಿಂದ ನಡೆದಿದ್ದವು. ಪುರೋಹಿತರ ನೇತೃತ್ವದಲ್ಲಿ ಹೋಮ-ಹವನಾದಿಗಳು ನಡೆದಿದ್ದವು.
ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಗದಗ, ಧಾರವಾಡ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ರಥೋತ್ಸವಕ್ಕೆ ವಿವಿಧ ಗ್ರಾಮಗಳ ಜನರು ಎತ್ತಿನ ಬಂಡಿಗಳಲ್ಲಿ ಬರುವುದು ವಾಡಿಕೆಯಾಗಿದ್ದು, ಅನೇಕರು ರೊಟ್ಟಿ-ಬುತ್ತಿ ಸಮೇತ ತೇರಿಗೆ ಬಂದು ಸಾಮೂಹಿಕ ಭೋಜನ ಸವಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಸಕ್ತ ವರ್ಷ ಮದುವೆಯಾದ ನೂತನ ದಂಪತಿ ರಥದ ಕಳಸ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ತಮ್ಮ ಶಕ್ತ್ಯಾನುಸಾರ ಹರಕೆ, ಕಾಣಿಕೆ ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ರಥೋತ್ಸವಕ್ಕೆ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹಳ್ಳೂರಿನ ಶ್ರೀರಂಗ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಮುಖಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.