ಎಲ್ಲ ಬಡವರು ಮೈತ್ರಿ ಅಭ್ಯರ್ಥಿಗೆ ಆಶೀರ್ವದಿಸಿ

ದಾವಣಗೆರೆ

     ಎಲ್ಲಾ ವರ್ಗದ ಬಡವರು ಸೇರಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಆಶೀರ್ವಾದ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕರೆ ನೀಡಿದರು.

      ಚನ್ನಗಿರಿ ತಾಲೂಕಿನ ತ್ಯಾವಣಿಗಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಮತಯಾಚನೆಗಾಗಿ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಸಿದ್ದೇಶ್ವರ ಯಾವುದೇ ಅಬಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಈ ಬಾರಿಯೂ ಅವರಿಗೆ ಮತ ನೀಡಿದರೆ, ಏನೂ ಉಪಯೋಗವಿಲ್ಲ.

        ಸಿದ್ದೇಶ್ವರ್ ಹತ್ರ ಹಣ ಇರಬಹುದು. ಆದರೆ, ಮಂಜಪ್ಪನವರ ಬಳಿ ಹಣವಿಲ್ಲ. ಬಡತನದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಏ.23ರಂದು ಎಲ್ಲಾ ವರ್ಗದ ಬಡವರು ಸೇರಿ ಮಂಜಪ್ಪನವರಿಗೆ ಆಶೀರ್ವಾದ ಮಾಡಬೇಕೆಂದು ಕಿವಿಮಾತು ಹೇಳಿದರು.

ಸಿದ್ದೇಶ್ ಹೆಜ್ಜೆ ಗುರುತೇನು?:

       ಸ್ಥಳೀಯ ಹಾಲಿ ಸಂಸದ ಸಿದ್ದೇಶ್ವರ್ ಯಾವ ಅನುದಾನ ತಂದು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿ, ಹೆಜ್ಜೆ ಗುರುತು ಮೂಡಿಸಿದ್ದಾರೆ? ಹೆಣ್ಣು ನೋಡೋಕೆ ಹೋದ್ರೆ, ಹೆಣ್ಣಿನ ತಾಯಿನ ತೋರಿಸಿದ್ದಂಗೆ, ಸಿದ್ದೇಶ್ವರ್ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ವೋಟಿ ಕೊಡಿ ಅಂತಾ ಕೇಳುತ್ತಿದ್ದಾರೆ. ಹಾಗಿದ್ದರೆ, ನೀ ಯಾಕಪ್ಪ ನಿಂತಿಯ್ಯಾ ಎಂದು ಪ್ರಶ್ನಿಸಿದ ಅವರು, ನಾಳೆ ಜನರ ಸಮಸ್ಯೆಗೆ ಸ್ಪಂದಿಸಲು ನೀವು ಸಿಕ್ತಿರಾ? ಅಥವಾ ನರೇಂದ್ರ ಮೋದಿ ಸಿಗ್ತಾರಾ? ಎಂದು ಖಾರವಾಗಿ ಪ್ರಶ್ನಿಸಿದರು.

 ಮಾಡಿದ ಕೆಲಸಕ್ಕೆ ಕೂಲಿ ಕೊಡಿ:

        ನಮ್ಮ ಸರ್ಕಾರದಲ್ಲಿ ಎಲ್ಲಾ ಜನಾಂಗಗಳ ಕಲ್ಯಾಣಕ್ಕಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಎಲ್ಲಾ ಸಮುದಾಯಗಳ ಮಹನೀಯರ ಜಯಂತಿಗಳನ್ನು ಆಚರಣೆಗೆ ತಂದು ಆಯಾ ಸಮುದಾಯಗಳಿಗೆ ಗೌರವ ತಂದು ಕೊಟ್ಟಿದ್ದೇವೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶ್ರೀಬಸವೇಶ್ವರರ ಭಾವಚಿತ್ರ ಹಾಕಿಸಿದ್ದೇವೆ. ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅಕ್ಕಮಹಾದೇವಿಯವರ ಹೆಸರು ಇಟ್ಟಿದ್ದೇವೆ.

         ಎಸ್ಸಿ-ಎಸ್ಟಿ ಉಪ ಯೋಜನೆ ಜಾರಿಗೆ ತಂದು ಜನಸಂಖ್ಯೆಗೆ ಅನುಗುಣವಾಗಿ ವರ್ಷಕ್ಕೆ 30 ಸಾವಿರ ಕೋಟಿ ರೂ. ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿಗೆ ಇಟ್ಟಿದ್ದೇವೆ. ಈ ಅನುದಾನ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಕಾಯ್ದೆ ರೂಪಿಸಿದ್ದೇವೆ. ಪರಿಶಿಷ್ಟರಿಗೆ ಆರ್ಥಿಕ ಶಕ್ತಿ ತುಂಬಲು 1 ಕೋಟಿ ವರೆಗಿನ ಕಾಮಗಾರಿಗಳನ್ನು ಯಾವುದೇ ಟೆಂಡರ್ ಇಲ್ಲದ್ದಂತೆ ಗುತ್ತಿಗೆ ಕೊಡಲು ಕಾಯ್ದೆ ರೂಪಿಸಿದ್ದೇವೆ.

         ಹಟ್ಟಿ, ಹಾಡಿ, ತಾಂಡ, ವಾಡಿ, ಕಾಲೋನಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡಿದ್ದೇವೆ. ವಾಸಿಸುವನೆ ಮನೆ ಒಡೆಯ ಕಾಯ್ದೆ ತಂದಿದ್ದೇವೆ ಎಂದು ತಮ್ಮ ಸರ್ಕಾರದ ಐದು ವರ್ಷದ ಸಾಧನೆಗಳನ್ನು ಪಟ್ಟಿ ಮಾಡಿದರು.

        ನಾವು ಯಾವ ಜನಾಂಗವನ್ನು ಬಿಟ್ಟಿದ್ದೇವೆ ನೀವೇ ಹೇಳಿ. ಆದರೆ, ನೀವೇಕೆ ನಮ್ಮನ್ನು ಕೈಬಿಟ್ರಿ?, ನಾವು ಮಾಡಿದ ಕೆಲಸಕ್ಕೆ ನೀವು ಕೂಲಿ ಕೊಡಬೇಕಲ್ವಾ?, ನಿಮ್ಮ ಜಿಲ್ಲೆಗೆ ನೀರಾವರಿ ಯೋಜನೆಯನ್ನು ಹುಡುಕಿ-ಹುಡುಕಿ ಕೊಟ್ವಿ, ಸಾಸ್ವೆಹಳ್ಳಿ ಏತನೀರಾವರಿ ಯೋಜನೆ, ಜಗಳೂರು ಸೇರಿದಂತೆ ಇತರೆ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ, 22 ಕೆರೆಗಳ ಏತನೀರಾವರಿ ಯೋಜನೆ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಎಸ್.ಎಸ್.ಮಲ್ಲಿಕಾರ್ಜುನ್ ಯಾರೂ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಅವರನ್ನು ಸಹ ಕೈ ಬಿಟ್ಟಿದ್ದು ಸರಿಯೇ? ಲೋಕಸಭಾ ಚುನಾವಣೆಯಲ್ಲಿ ಇದು ಮರುಕಳಿಸಬಾರದು. ಈ ಬಾರಿ ಮಂಜಪ್ಪನವರನ್ನು ಶತಾಯಗತಾಯವಾಗಿ ಗೆಲ್ಲಿಸಿಕೊಂಡೇ ಬರಬೇಕೆಂದು ಸಲಹೆ ನೀಡಿದರು.

ಬಿಜೆಪಿಗೆ ಸುಳ್ಳೇ ಬಂಡವಾಳ:

       ದಾವಣಗೆರೆ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಒಮ್ಮೊಮ್ಮೆ ಬಿಜೆಪಿಯವರ ಸುಳ್ಳಿನ ಕಂತೆ, ಬಣ್ಣದ ಮಾತುಗಳಿಗೆ ಜನ ದಾರಿ ತಪ್ಪು ಬಿಡುತ್ತಾರೆ. ಬಿಜೆಪಿಯವರಷ್ಟು ಸುಳ್ಳು ಹೇಳುವವರನ್ನು ಇತಿಹಾಸದಲ್ಲಿಯೇ ನಾನು ನೋಡಿಲ್ಲ. ಅವರಿಗೆ ಸುಳ್ಳೇ ಬಂಡವಾಳವಾಗಿದೆ. ಕಳೆದ ಚುನಾವಣೆಯಲ್ಲಿ ಮೋದಿ ಹೇಳಿದ್ದ ಯಾವುದೇ ಭರವಸೆಗಳನ್ನು ಈಡೇರಿಸದೇ, ನಂಬಿದ ಜನರಿಗೆ ದ್ರೋಹ ಎಸಗಿದ್ದಾರೆ. ಜನರಿಗೆ ಸುಳ್ಳು ಹೇಳಿ ಮೋಸ ಮಾಡುವುದಕ್ಕಿಂತ ಮಹಾಪಾಪ ಮತ್ತೊಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹೋರಾಟದ ಮುಂದೆ ಹಣ ಬಲ ನಿಲ್ಲಲ್ಲ:

        ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತನನ್ನೂ ನಿಲ್ಲಿಸಿ, ಗೆಲ್ಲಿಸುತ್ತಾರೆಂಬುದಕ್ಕೆ ಈ ಚುನಾವಣೆ ಉದಾಹರಣೆ ಆಗಬೇಕು. ನಮ್ಮ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗುವ ಮೂಲಕ ಸಾಮಾಜಿಕನ್ಯಾಯವನ್ನು ಎತ್ತಿ ಹಿಡಿಯಲಿದ್ದಾರೆ. ಅಲ್ಲದೇ, ಜನರ ಆಗು ಹೋಗುಗಳಿಗೆ ಸ್ಪಂದಿಸಲಿದ್ದಾರೆ. ನಮ್ಮಲ್ಲಿ ಸಾಮಾನ್ಯವಾಗಿ ಲೀಡರ್ಸ್‍ಗಳೇ ಸೋಲಿಸ್ತಾರೆ. ಇಂತಹ ಮನಸ್ಥಿಯಿಂದ ಹೊರ ಬಂದು ಮಂಜಪ್ಪನವರನ್ನು ಗೆಲ್ಲಿಸಬೇಕೆಂಬ ಹೋರಾಟ ಮಾಡಿದರೆ, ಯಾವುದೇ ಹಣ ಬಲ ನಡೆಯಲ್ಲ ಎಂದರು.

         ಈ ಬಾರಿ ಹಣ ಬಲ ಮತ್ತು ಜನ ಬಲದ ಮಧ್ಯೆ ಚುನಾವಣೆ ನಡೆಯುತ್ತಿದ್ದು, ಮಂಜಪ್ಪನವರನ್ನು ಗೆಲ್ಲಿಸಬೇಕೆಂದು ನಿಮ್ಮ ಬೀಗರು, ಬಿಜ್ಜರಿಗೆ, ಸಂಬಂಧಿಕರಿಗೆ ತಿಳಿಹೇಳುವ ಮೂಲಕ ಮಂಜಪ್ಪನವರನ್ನು ಗೆಲ್ಲಿಸಲು ಕಾರಣೀಭೂತರಾಗಬೇಕೆಂದು ಕರೆ ನೀಡಿದರು.

ಉಳ್ಳವರು-ಇಲ್ಲದವ ಸಂಘರ್ಷ:

       ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಉಳ್ಳವರು ಮತ್ತು ಇಲ್ಲದವರ ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಬಡತದ ಹಿನ್ನೆಲೆಯಿಂದ ಬಂದ ಮಂಜಪ್ಪನವರನ್ನು ಗೆಲ್ಲಿಸಲು ಎಲ್ಲರು ಮುಂದಾಗಬೇಕು. ಮೋದಿ ಚೌಕೀದಾರರಲ್ಲ, ನೈಜ ಕಾವಲುಗಾರ ಸಿದ್ದರಾಮಯ್ಯನವರಾಗಿದ್ದು, ಕಾಂಗ್ರೆಸ್ಸಿಗರೇ ನಿಜವಾದ ಜನಸೇವಕರು ಹಾಗೂ ಜನ ಹಿತಬಯಸುವವರು ಎಂದರು.

ನಾಯಕರ ಬೆಂಬಲವಿದೆ:

       ರಾಜ್ಯ ಜೆಡಿಎಸ್ ಎಸ್ಟಿ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ನಮ್ಮ ಎದುರಾಳಿಗಳು ಮತದಾನ ಪ್ರಮಾಣ ಕಡಿಮೆ ಮಾಡಲು ಪಿತೂರಿ ನಡೆಸಿದ್ದಾರೆ. ಅಲ್ಲದೇ, ಮಂಜಪ್ಪ ಕುರುಬ ಸಮಾಜದವರಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುರುಬರು ಮತ್ತು ನಾಯಕರಿಗೆ ಆಗುವುದಿಲ್ಲ ಎಂಬ ವದಂತಿಯನ್ನು ಬಿಜೆಪಿಯವರು ಹರಡುತ್ತಿದ್ದಾರೆ. ಕಾಯಕ ಸಮಾಜಕ್ಕೆ ಬಿಜೆಪಿಯ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಾಯಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಈ ಚುನಾವಣೆಯಲ್ಲಿ ಮಂಜಪ್ಪನವರನ್ನು ನಾಯಕ ಸಮುದಾಯದವರು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ. ಅಲ್ಲದೆ, ನಮ್ಮ ಜೆಡಿಎಸ್ ಕಾರ್ಯಕರ್ತರು ಸಹ ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಹೇಳಿದರು.

        ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಮಾತನಾಡಿ, ನಾನು ಯಾವುದೇ ಜಾತಿ ಭೇದ ಇಲ್ಲದೇ, ಎಲ್ಲರನ್ನೂ ಸಾಮಾನ್ಯವಾಗಿ ಕೊಂಡ್ಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರು ಹಣ ಬಲಕ್ಕೆ ಒತ್ತು ನೀಡುತ್ತಾರಾ? ಜನ ಬಲಕ್ಕೆ ಒತ್ತು ನೀಡುತ್ತಾರಾ ಎಂಬುದನ್ನು ತೋರಿಸಿ. ಕಾರ್ಯಕರ್ತರು ಹಣಕ್ಕೆ ಬೆಲೆ ಕೊಡಬೇಡಿ, ನೀವು ಫೋನ್ ಮಾಡಿದರೂ ಸ್ಪಂದಿಸುತ್ತೇನೆ.

         ಕ್ಷೇತ್ರದಲ್ಲಿ ಸಿದ್ದೇಶ್ವರ್ ಅವರಿಗೆ ತಿರಸ್ಕಾರದ ಮನೋಭಾವದಿಂದ ನೋಡುತ್ತಿದ್ದು, ಜನ ಬದಲಾವಣೆ ಬಯಸಿ ಯುವಕನನ್ನು ಗೆಲ್ಲಿಸಬೇಕೆಂಬ ಉತ್ಸಾಹದಲ್ಲಿದ್ದಾರೆ. ಆದ್ದರಿಂದ ಏ.23ರಂದು ನಡೆಯುವ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ, ನಿಮ್ಮ ಋಣ ತೀರಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

        ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಸ್.ರಾಮಪ್ಪ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಪ್ರಸನ್ನಕುಮಾರ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಶಾಂತನಗೌಡ, ಶಿವಮೂರ್ತಿ ನಾಯ್ಕ, ಜಲಜಾ ನಾಯಕ್, ಕೆಪಿಸಿಸಿ ಕಾರ್ಯದರ್ಶಿಗಳಾದ ಡಿ.ಬಸವರಾಜ್, ಬಲ್ಕಿಶ್‍ಬಾನು, ಜಿ.ಪಂ. ಸದಸ್ಯರಾದ ತೇಜಸ್ವಿ ಪಟೇಲ್, ಫಕೀರಪ್ಪ, ಯೋಗೇಶ್, ಓಬಳಪ್ಪ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡರಾದ ಪಿ.ರಾಜಕುಮಾರ್, ಡಾ.ವೈ.ರಾಮಪ್ಪ, ಎಸ್.ಎಸ್.ಗಿರೀಶ್, ಬಿ.ಟಿ.ಹನುಮಂತಪ್ಪ, ಹೀರಾ ನಾಯ್ಕ, ಶಿವಣ್ಣ, ಅಮಾನುಲ್ಲಾ, ಶೀಲಾ ನಾಯಕ್ ಮತ್ತಿತರರು ಹಾಜರಿದ್ದರು. ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link