ರಸ್ತೆ ತುಂಬಾ ಹಳ್ಳ ಕೊಳ್ಳ: ಸಾರ್ವಜನಿಕರ ಪರದಾಟ

ತುಮಕೂರು

      ತುಮಕೂರು ಹೊನ್ನಾವರ ರಸ್ತೆಗೆ ಪರ್ಯಾಯವಾಗಿ ನಿರ್ಮಾಣ ಮಾಡಲಾದ ರಿಂಗ್ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೃಹತ್ ವಾಹನಗಳಿಗೆ ನಗರದಲ್ಲಿ ಪ್ರವೇಶ ನಿರ್ಬಂಧ ಇರುವ ಕಾರಣ ಹೊರಭಾಗದ ರಿಂಗ್‍ರಸ್ತೆ ಮೂಲಕವೇ ಓಡಾಡಬೇಕು. ಆದರೆ ಈ ರಸ್ತೆಯಲ್ಲಿ ಬಿದ್ದಿರುವ ಹಳ್ಳ್ಳಗಳು, ಪಕ್ಕದಲ್ಲಿಯೇ ಇರುವ ಹೊಂಡದಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

      ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಸಮೀಪದಲ್ಲಿಯೇ ಬೃಹತ್ತಾದ ಹೊಂಡವೊಂದು ನಿರ್ಮಾಣವಾಗಿದೆ. ಈ ಹೊಂಡದಲ್ಲಿ ನಿತ್ಯವೂ ಕೊಳಚೆ ನಿಂತುಕೊಂಡೆ ಇರುತ್ತದೆ. ಬೇಸಿಗೆಯಲ್ಲಿ ಕೆರೆಕಟ್ಟೆಗಳಾದರೂ ಒಣಗಿ ಹೋಗಬಹುದೇನೋ ಆದರೆ ಈ ಹೊಂಡ ಮಾತ್ರ ಕೊಳಚೆ ನೀರಿನಿಂದ ನಿತ್ಯ ಕಂಗೊಳಿಸುತ್ತದೆ. ಜೊತೆಗೆ ಈ ನೀರು ರಸ್ತೆಯ ಮೇಲೆಲ್ಲಾ ಕಾಲುವೆಯಂತೆ ಹರಿದು, ರಸ್ತೆಯ ಒಂದು ಪಾಶ್ರ್ವದಿಂದ ಇನ್ನೊಂದು ಪಾಶದರ್ವಕ್ಕೆ ಹರಿದು ಹೋಗುತ್ತಿದೆ. ಇದರಿಂದ ಇಲ್ಲಿ ಓಡಾಡುವ ಜನರು, ವಾಹನ ಸವಾರರು ದುರ್ವಾಸನೆಯನ್ನು ಸಹಿಸಲಾಗದೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಓಡಾಟ ನಡೆಸುತ್ತಿದ್ದಾರೆ.

      ಕಳೆದ ಮೂರ್ನಾಲ್ಕು ತಿಂಗಲಿನಿಂದಲೂ ಸ್ಮಾರ್ಟ್‍ಸಿಟಿ ಯೋಜನೆ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೆ. ಅದರ ಭಾಗವಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮುಂಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮುಂಚೆ ಪೊಲೀಸ್ ಠಾಣೆ ಪಕ್ಕದಲ್ಲಿನ ಹೊಂಡದ ನೀರು ರಸ್ತೆಯ ಕೆಳಭಾಗದಿಂದ ಹರಿದು ಪಕ್ಕದ ಜಮೀನೊಂದರಲ್ಲಿರುವ ಬಾವಿಗೆ ಸೇರುತ್ತಿತ್ತು. ಆ ನೀರನ್ನು ಜಮೀನುಗಳಿಗೆ ಬಳಸಲಾಗುತ್ತಿತ್ತು. ಹಾಗಾಗಿ ಹೆಚ್ಚಿನ ಸಮಸ್ಯೆ ಏನೂ ಕಂಡು ಬಂದಿರಲಿಲ್ಲ. ಇದೀಗ ಕಾಮಗಾರಿ ನೆಪದಲ್ಲಿ ಇರುವ ಕಾಲುವೆಯನ್ನು ಮುಚ್ಚಲಾಗಿದ್ದು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

        ಈ ಪ್ರದೇಶವು ತುಮಕೂರು ಮಹಾನಗರ ಪಾಲಿಕೆ 34ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿದೆ. ತುಮಕೂರು ಮಹಾನಗರ ಪಾಲಿಕೆಯು ನಗರವನ್ನು ದುರ್ವಾಸನೆ ಬೀರುವ ನಗರವನ್ನಾಗಿಸಿರುವುದು ಇಲ್ಲಿನ ಜನರ ದೌರ್ಭಾಗ್ಯವೇ ಸರಿ. ಇಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ಜನರು ನೆಮ್ಮದಿಯಾಗಿ ಉಸಿರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಯುಜಿಡಿಯ ಕೊಳಕು ನೀರು ಚೇಂಬರಿನಿಂದ ಚಿಲುಮೆಯಾಗಿ ಮೇಲೆ ಉಕ್ಕುತ್ತಿರುವುದರಿಂದ ಆ ಸ್ಥಳದಲ್ಲಷ್ಟೇ ಅಲ್ಲದೆ ಸುತ್ತ ಮುತ್ತ ದುರ್ನಾತ ಬೀರುತ್ತಿದ್ದು, ಈ ಭಾಗದಲ್ಲಿ ಸಾರ್ವಜನಿಕರು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.

      ಈ ವಾಸನೆಯಿಂದ ರಾತ್ರಿ ಹೊತ್ತು ಮನೆಯಲ್ಲಿ ನಿದ್ದೆ ಮಾಡಲು ಕೂಡ ಆಗುತ್ತಿಲ್ಲ. ಬಾಗಿಲು ತೆರೆದರೆ ಸಾಕು ಗಬ್ಬು ವಾಸನೆ ಮೂಗಿಗೆ ತಾಕುತ್ತದೆ. ಈ ಸಮಸ್ಯೆ ಸರಿಪಡಿಸಲು ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ ತಿಳಿಸಿದರೂ ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ಹಾಗೂ ಇಲ್ಲಿನ ಕಾರ್ಪೊರೇಟರ್ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಕಾಮಗಾರಿಯನ್ನು ಕೈಗೊಳ್ಳುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಹಂದಿ ನಾಯಿಗಳ ಕಾಟ :

 ಬೇಸಿಗೆಯ ಬಿಸಿ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿನ ಹಂದಿಗಳಿಗೆ, ನಾಯಿಗಳಿಗೆ ಹಾಗೂ ಎಮ್ಮೆಗಳಿಗೆ ಈ ಹೊಂಡ ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತನೆಯಾಗಿದೆ. ದಿನಬೆಳಗಾದರೆ ಸಾಕು ಪ್ರಾಣಿಗಳು ಈ ನೀರಿನೊಳಕ್ಕೆ ಇಳಿದು ನಂತರ ರಸ್ತೆಗಳ ಮೇಲೆ ಅಡ್ಡಾಡುವುದರಿಂದ ರಸ್ತೆಯಲ್ಲಿ ಓಡಾಡುವವರಿಗೆ ಉಜ್ಜುತ್ತಾ, ಬಾಲದಿಂದ ಕೊಚ್ಚೆಯನ್ನು ದಾರಿ ಹೋಕರಿಗೆ ಸಿಂಪಡಿಸುತ್ತಿವೆ. ಅಲ್ಲದೆ ಊರಿನ ತುಂಬಾ ದುರ್ವಾಸನೆ ಹರಡುವುದರೊಂದಿಗೆ ರೋಗರುಜಿನಗಳು ಬರಲು ಅನುಕೂಲ ಮಾಡಿ ಕೊಟ್ಟಂತಾಗಿದೆ.

ಸೊಳ್ಳೆಗಳ ಆವಾಸ ಸ್ಥಾನ

       ಸಾಮಾನ್ಯವಾಗಿ ಒಂದು ವಾರಕ್ಕಿಂತ ಹೆಚ್ಚಿನದಾಗಿ ನೀರು ನಿಂತುಕೊಂಡರೆ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಮಲೇರಿಯಾ, ಡೆಂಗ್ಯೂನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲಿ ಸತತ ಹಲವು ತಿಂಗಳುಗಳಿಂದ ನೀರು ನಿಂತು ಕೊಂಡೆ ಇರುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದೆ. ಸಂಜೆಯಾದರೆ ಈ ಸ್ಥಳದಲ್ಲಿ ಓಡಾಡಲು ಕೂಡ ಆಗುವುದಿಲ್ಲ. ಇಂತಹ ದುಸ್ಥಿತಿಯಲ್ಲಿಯೇ ಪೊಲೀಸ್ ಠಾಣಾ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರೋಗ ರುಜಿನಗಳ ಆತಂಕ

       ಹಂದಿಗಳು ಕೊಚ್ಚೆ ನೀರಿನಲ್ಲಿ ಇಳಿದು ಅಲ್ಲಿಂದ ನಗರದ ಬೀದಿಗಳಲ್ಲಿ ಓಡಾಡುವುದರಿಂದ ಬರುವ ಸೊಳ್ಳೆಗಳಿಂದ ರೋಗ ರುಜಿನಗಳು ಬರುತ್ತಿವೆ. ಹಲವಾರು ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆಗಳು ಸಾಕಷ್ಟಿವೆ. ಹೀಗೆ ಇಲ್ಲಿನ ಹೊಂಡವು ಹೀಗೆಯೆ ಮುಂದುವರೆದಲ್ಲಿ ಇನ್ನೆಷ್ಟು ಮಂದಿ ಕಾಯಿಲೆಗಳಿಗೆ ತುತ್ತಾಗುತ್ತಾರೋ ಎಂಬ ಆತಂಕ ಸ್ಥಳೀಯರಲ್ಲಿ ಕಂಡು ಬರುತ್ತಿದೆ.

ರಸ್ತೆಯ ಮೇಲೆ ಹಳ್ಳ ಕೊಳ್ಳ, ಗುಂಡಿ ಗುದ್ದರಗಳದ್ದೆ ಕಾರುಬಾರು

         ಬೆಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುವ ರಿಂಗ್ ರಸ್ತೆಯ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇದೀಗ ಕ್ಯಾತ್ಸಂದ್ರ ಪೊಲೀಸ್ ಠಾಣೆ ಬಳಿ ಹಳ್ಳಕೊಳ್ಳಗಳದ್ದೇ ಕಾರುಬಾರು ಆಗಿದೆ. ಇಲ್ಲಿನ ಹಳ್ಳಕೊಳ್ಳಗಳಿಂದ ದ್ವಿಚಕ್ರವಾಹನ ಸವಾರರು ಕೆಳಗೆ ಬಿದ್ದು ಕೈಕಾಲಿಗೆ ಪೆಟ್ಟು ಮಾಡಿಕೊಂಡ ನಿದರ್ಶನಗಳು ಕೂಡ ಇವೆ. ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ರಸ್ತೆಯ ಮೇಲಿನ ಗುಂಡಿಗಳಲ್ಲಿ ನೀರು ನಿಂತುಕೊಂಡು ಗುಂಡಿಯ ಆಳ ಅಂದಾಜಿಸಲಾಗದೆ, ಅಲ್ಲಿ ರಸ್ತೆ ಇದೆಯೋ ಇಲ್ಲವೋ ಎಂಬುದು ತಿಳಿಯದ ಪರಿಸ್ಥಿತಿ ಇದೆ.


         ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ತೆರಳಲು ತುಮಕೂರು ಭಾಗದ ರಿಂಗ್ ರಸ್ತೆಯ ಅನುಕೂಲ ಮಾಡಿರುವುದು ಒಳ್ಳೆಯ ಕೆಲಸ. ಆದರೆ ಈ ರಸ್ತೆಯುದ್ದಕ್ಕೂ ದೊಡ್ಡದಾದ ಹಳ್ಳಕೊಳ್ಳಗಳು ಬಿದ್ದಿವೆ. ವಾಹನಗಳು ಚಲಿಸುವಾಗ ಯಾವ ಅನಾಹುತ ಆಗುತ್ತದೆಯೋ ಎಂಬ ಭಯದಿಂದ ವಾಹನ ಚಲಾಯಿಸಬೇಕು. ಇಲ್ಲಿ ಬಂದಾಗ ಸ್ವಲ್ಪ ಯಾಮಾರಿದ್ರೂ ಪ್ರಾಣ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಜೊತೆಗೆ ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುವುದರಿಂದ ದುರ್ವಾಸನೆ ಬೀರುತ್ತ್ತಿದೆ. ಇದಕ್ಕೆ ಸಂಬಂಧಪಟ್ಟ ಶಾಸಕರು, ಅಧಿಕಾರಿ ವರ್ಗದವರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
ಮಹಾಂತೇಶ್, ವಾಹನ ಸವಾರ


            ಕಳೆದ ಮೂರ್ನಾಲ್ಕು ತಿಂಗಳಿಂದ ಸೇತುವೆ ಕಾಮಗಾರಿ ನಡೆಯುತ್ತಿದೆ. ಅದೇ ಸಮಯದಲ್ಲಿ ಕಾಮಗಾರಿ ಪ್ರಾರಂಭಿಸಿದ ಕಟ್ಟಡಗಳ ಕಾಮಗಾರಿ ಮುಗಿಯುತ್ತಾ ಬಂದಿದೆ. ಆದರೆ ಈ ಸೇತುವೆ ಕೆಲಸ ಮಾತ್ರ ನಿಧಾನಗತಿಯಲ್ಲಿ ನಡೆಯುತ್ತಿದ್ದು, ನಿತ್ಯ ಒಂದಲ್ಲಾ ಒಂದು ಅನಾಹುತಗಳು ನಡೆಯುತ್ತಿವೆ. ರಸ್ತೆಯ ಮಗ್ಗುಲಲ್ಲಿಯೇ ದೊಡ್ಡದಾದ ಹೊಂಡ ಇದ್ದು ಇಲ್ಲಿ ಕೊಳಚೆ ನೀರು ಸೇರಿಕೊಂಡು ದುರ್ವಾಸನೆ ಬೀರುತ್ತಿದೆ. ಕಾಮಗಾರಿ ಮಾಡುವವರು ಮೋಟರ್ ಹಾಕಿ ನೀರು ಎತ್ತಬೇಕಾಗಿತ್ತು. ಪ್ರಾರಂಭದಲ್ಲಿ ಎರಡು ಬಾರಿ ನೀರನ್ನು ಎತ್ತಿಹಾಕಿದರು. ನಂತರ ಆ ಕಾರ್ಯ ಮಾಡಲೇ ಇಲ್ಲ. ಈಗ ಯುಜಿಡಿ ನೀರು ಹೊಂಡಕ್ಕೆ ಸೇರಿಕೊಂಡು ಮತ್ತಷ್ಟು ಸಮಸ್ಯೆಯನ್ನುಂಟು ಮಾಡಿದೆ.
ಸದಾಶಿವಯ್ಯ, ಟೀ ಅಂಗಡಿ ಮಾಲೀಕರು


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap