ನವದೆಹಲಿ
ಕಾರ್ಪೋರೇಟ್ ಕಂಪೆನಿಗಳನ್ನು ನರೇಂದ್ರಮೋದಿ ನೇತೃತ್ವದ ಸರ್ಕಾರ ಪೋಷಿಸುತ್ತಿದೆ ಎಂದು ಹೇಳಿರುವ ಕಾಂಗ್ರೆಸ್, ಕಳೆದ ಐದು ವರ್ಷಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ(ಎನ್ಪಿಎ) 17 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರೋಪಿಸಿದೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸರ್ಕಾರದ ಕ್ಯಾಬಿನೇಟ್ ಸಚಿವ ನವಜೋತ್ ಸಿಂಗ್ ಸಿಧು, ಕೆಲವೇ ಕಂಪೆನಿಗಳಿಗೆ ಅತಿಯಾದ ಪೋಷಣೆಯಿಂದ ಎನ್ಪಿಎ ಪ್ರಮಾಣ ಹೆಚ್ಚಾಗಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಎನ್ಪಿಎ ಪ್ರಮಾಣ ಕೇವಲ 2 ಲಕ್ಷ ಕೋಟಿ ರೂ.ನಷ್ಟಿತ್ತು. ಕಳೆದ ಐದು ವರ್ಷಗಳಲ್ಲಿ ಈ ಪ್ರಮಾಣ 17 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಟೀಕಿಸಿದ್ದಾರೆ.
ಬಡವರ ಹಿತಾಸಕ್ತಿಯನ್ನು ಕಡೆಗಣಿಸಿ, ಕಾರ್ಪೋರೇಟ್ ಕಂಪೆನಿಗಳಿಗೆ ಪ್ರಧಾನಿ ನರೇಂದ್ರಮೋದಿ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಿಧು, ಯುಪಿಎ ಸರ್ಕಾರ, ರೈತರ 72,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿತ್ತು. ಆದರೆ, ಮೋದಿ ಅವರು ಅಂಬಾನಿ ಮತ್ತು ಅದಾನಿಯವರ 3.70 ಲಕ್ಷ ಕೋಟಿ ರೂ.ಸಾಲವನ್ನು ಮನ್ನಾ ಮಾಡಿದ್ದಾರೆ. ವಿಜಯ್ ಮಲ್ಯ, ನೀರವ್ ಮೋದಿ ಭಾರತೀಯ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನಗೈಯುವಂತೆ ಮಾಡಿದ್ದಾರೆ. ಮಲ್ಯ ಮತ್ತು ನೀರವ್ ಮೋದಿ ದೇಶದಿಂದ ಓಡಿ ಹೋದಾಗ ಚೌಕಿದಾರ್ ಎಚ್ಚರವಾಗಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ