ಬಡವರಿಗೆ ಸೂಕ್ತ ಔಷಧೋಪಚಾರಕ್ಕೆ ಸೂಚನೆ

ಚಿತ್ರದುರ್ಗ:

    ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಶನಿವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

     ಆಸ್ಪತ್ರೆಯ ಸ್ವಚ್ಛತೆ ಕುರಿತು ಹೆಚ್ಚಿನ ಗಮನ ಸೆಳೆದರು. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಯಾವುದೇ ರೋಗಿ ರಕ್ತ ಪರೀಕ್ಷೆ ಸೇರಿದಂತೆ ಮತ್ತಿತರ ಸೇವೆಗಳಿಗಾಗಿ ಖಾಸಗಿ ಆಸ್ಪತ್ರೆ ಅವಲಂಭಿಸಬಾರದು. ಒಂದು ವೇಳೆ ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದಾದರೂ ಸೇವೆ ದೊರೆಯದಿದ್ದರೆ ಖಾಸಗಿ ನರ್ಸಿಂಗ್ ಹೋಂ ಅಥವಾ ಖಾಸಗಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರೋಗಿಯ ಮಾದರಿ ರಕ್ತ ಪಡೆದು ಜಿಲ್ಲಾಸ್ಪತ್ರೆಯಿಂದಲೇ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷಿಸಬೇಕು. ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಯಾವುದೇ ಕಾರಣಕ್ಕೂ ರೋಗಿ ಅಥವಾ ರೋಗಿ ಕಡೆಯವರು ಭರಿಸಬಾರದು ಎಂದು ಎಚ್ಚರಿಸಿದರು.

      ಬಿಪಿಎಲ್ ಕಾರ್ಡ್ ಹೊಂದಿರುವ ಯಾವುದೇ ರೋಗಿ ಆಸ್ಪತ್ರೆಗೆ ಬಂದಲ್ಲಿ ಪ್ರವೇಶ ಶುಲ್ಕ 10 ರೂ.ಗಳು ಸೇರಿದಂತೆ ಔಷಧಿ, ಶಸ್ತ್ರ ಚಿಕಿತ್ಸೆ ವೆಚ್ಚ, ರಕ್ತ ಪರೀಕ್ಷೆ ಎಲ್ಲವೂ ಉಚಿತವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಒಂದು ರೂ.ವಸೂಲಿ ಮಾಡಕೂಡದು, ರೋಗಿಗಳನ್ನು ಅಲೆಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

     ಜಿಲ್ಲಾ ಆಸ್ಪತ್ರೆಯಲ್ಲಿ ಸಿಸಿ ಸ್ಕ್ಯಾನ್ ಮಾಡಿರುವ ಎಂಆರ್‍ಐ ವರದಿ ಮತ್ತು ಫೋಟೋ ನೀಡುತ್ತಿಲ್ಲ ಎನ್ನುವ ದೂರುಗಳಿದ್ದು ಪ್ರತಿಯೊಬ್ಬ ರೋಗಿಗಳಿಗೆ ನೀಡಬೇಕು ಎಂದು ಹೇಳಿದರು.

      ರಕ್ತ ನಿಧಿ ಕೇಂದ್ರದಲ್ಲಿನ ಅವ್ಯವಸ್ಥೆ ಕುರಿತು ಪ್ರಸ್ತಾಪ ಮಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು. ಜಿಲ್ಲಾ ಮಕ್ಕಳ ಆಸ್ಪತ್ರೆ, ಹೆರಿಗೆ ವಾರ್ಡ್, ಶೌಚಾಲಯ, ಔಷಧಿ ವಿತರಣಾ ಶಾಖೆಗೆ ಭೇಟಿ ನೀಡಿ ರೋಗಿಗಳಿಗೆ ನೀಡುವ ಔಷಧಿಗಳ ವಿವರ ಪಡೆದರು. ರೋಗಿಗಳೊಂದಿಗೂ ಸಮಾಲೋಚನೆ ನಡೆಸಿ ಅವರಿಗೆ ನೀಡಿದ ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆ ತಿಳಿದುಕೊಂಡರು.

      ಕೆಲ ಔಷಧಿ ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುತ್ತಿವೆ. ಕೆಲ ಔಷಧಿಗಳನ್ನು ಹೊರಗಡೆ ಮೆಡಿಕಲ್‍ನಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಎಂದು ರೋಗಿಗಳು ಪ್ರತಿಕ್ರಿಯಿಸಿದರು.ರಾತ್ರಿ ವೇಳೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆಯಲ್ಲಿ ಇರುವ ವೈದ್ಯಾಧಿಕಾರಿಗಳು ಹಾಗೂ ಅವರ ಕೆಲಸದ ಅವಧಿಯ ಬಗ್ಗೆ ನಾಮಫಲಕ ಹಾಕಬೇಕು, ತುರ್ತು ಚಿಕಿತ್ಸಾ ಘಟಕದಲ್ಲಿ 24 ಗಂಟೆಗಳ ಕಾಲ ವೈದ್ಯರು ಸೇವೆಯಲ್ಲಿರಬೇಕು ಎಂದು ಕಾರ್ಯದರ್ಶಿ ಸೂಚಿಸಿದರು. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

        ಮಕ್ಕಳ ಪುನಶ್ಚೇತನ ಕೇಂದ್ರಕ್ಕೆ ತೆರಳಿ, ಅಲ್ಲಿ ದಾಖಲಾಗಿದ್ದ ಮಕ್ಕಳ ಆರೋಗ್ಯ ಸ್ಥಿತಿ ಹಾಗೂ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪಂಕಜ್ ಕುಮಾರ್ ಪಾಂಡೆ ಅವರು, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳ ಉನ್ನತಿಕರಣಕ್ಕೆ ಪ್ರಯತ್ನ ಮಾಡಲಾಗುತ್ತದೆ. ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ನೇಮಕಕ್ಕೂ ಕ್ರಮ ಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮಟ್ಟದಲ್ಲೇ ವೈದ್ಯರ ನೇಮಕ ಮಾಡಿಕೊಳ್ಳುವ ಅವಕಾಶವಿದೆ ಎಂದು ಕಾರ್ಯದರ್ಶಿಗಳು ಹೇಳಿದರು.

         ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಇವರೇ ಆಗಿರುವುದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಲೋಪ ಬರಬಾರದು. ಟ್ಯಾಂಕರ್ ನೀರು ಪೂರೈಕೆಯ ಬಿಲ್ ಪ್ರತಿ ವಾರ ನೀಡುವಂತೆ ಸೂಚನೆ ನೀಡಿದರು.ಆಸ್ಪತ್ರೆ ಪರಿಶೀಲನೆ ನಂತರ ಜಿಲ್ಲಾಸ್ಪತ್ರೆಯ ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

        ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಸಿ.ಸತ್ಯಭಾಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಣ್ಣ ಹಾಗೂ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap