ತಿಪಟೂರು
ವೀರಶೈವ ಮಠಗಳು ಹಿಂದಿನ ಕಾಲದಿಂದಲೂ ಸಹ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಸಮಾಜದಲ್ಲಿ ಸ್ಥಾನ ಮಾನವನ್ನು ಉಳಿಸಿಕೊಂಡಿವೆ. ಆದರೆ ಇಂದಿನ ವೀರಶೈವ-ಲಿಂಗಾಯಿತ ಎಂಬುದರ ವಿಷಯದಲ್ಲಿ ಯಾವ ಚಿಂತನೆಯಲ್ಲಿ ಸಾಗುತ್ತಿದೆ ಎಂಬುದು ಗೊತ್ತಾಗದೆ ಎಲ್ಲರೂ ಸಹ ಒಗ್ಗೂಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಆಗಬೇಕು ಎಂದು ಕೆರಗೋಡಿ-ರಂಗಾಪುರ ಮಠದ ಸುಕ್ಷೇತ್ರಾಧ್ಯಾಕ್ಷರಾದ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ತಿಪಟೂರು ಹೋರಾಟ ಸಮಿತಿಯಿಂದ ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಹಾಗೂ ಷಡಕ್ಷರ ಮಠದ ಡಾ. ಶ್ರೀ ರುದ್ರಮುನಿ ಮಹಾಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ್ ಲಭಿಸಿದ ಪ್ರಯುಕ್ತ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಸಮಾರಂಭದ ಉದ್ಘಾಟಿಸಿ
ಆಶೀರ್ವಚನ ನೀಡಿದ ಅವರು, ವೀರಶೈವ ಮಠ-ಮಾನ್ಯಗಳು ಅನ್ನ ದಾಸೋಹ, ಜ್ಞಾನ ದಾಸೋಹಗಳ ಜೊತೆಯಲ್ಲಿ ಜೀವನದಲ್ಲಿ ನೊಂದು ಬೆಂದವರಿಗೆ ಯಾವುದೇ ಧರ್ಮ, ಜಾತಿ, ಮತಗಳನ್ನು ಗಮನಿಸದೆ ಎಲ್ಲರಿಗೂ ಆಶ್ರಯವನ್ನು ನೀಡುತ್ತಾ ಬರುತ್ತಿದ್ದು, ನಮ್ಮ ತುಮಕೂರು ಜಿಲ್ಲೆಯ ಮಠ ಮಾನ್ಯಗಳಲ್ಲಿ ನಮ್ಮ ಕಲ್ಪತರು ನಾಡಿನ ಎಲ್ಲಾ ಮಠಗಳು ಸಹ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಲರಿಗೂ ಸಹಾಯ ಮಾಡುತ್ತಾ ಬರುತ್ತಿದೆ ಎಂದರು.
ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಜಿಯವರು, 1985ರ ಇಸವಿಯಲ್ಲಿ ಪಟ್ಟಾಧಿಕಾರದಿಂದ ಹಿಡಿದು ನಾವುಗಳು ವೀರಶೈವ ಸಮಾಜದ ಜೊತೆಯಲ್ಲಿಯೇ ಎಲ್ಲಾ ಸಮಾಜಕ್ಕೆ ಹಲವಾರು ರೀತಿಯಲ್ಲಿ ಕಾಯಕಗಳನ್ನು ಮಾಡುತ್ತಾ ಬಂದಿದ್ದು ಅಂದಿನ ಸಿದ್ದಗಂಗಾ ಶ್ರೀಗಳು ನಮ್ಮ ಕಾಯಕವನ್ನು ಮೆಚ್ಚಿ ವೈದಕೀಯ ಡಾಕ್ಟರೇಟ್ ನೀಡಬೇಕು ಎಂದು ಬೆಂಗಳೂರಿನಲ್ಲಿ ನಡೆಸಿದ ಕಳಸ ಪ್ರತಿಷ್ಠಾಪನೆಯನ್ನು ಆದಿಚುಂಚನಗಿರಿ ಶ್ರೀಗಳು ಎಂಜಿನಿಯರಿಂಗ್ ಡಾಕ್ಟರೇಟ್ ನೀಡಬೇಕು ಎಂದಿದ್ದರು. ಅವರುಗಳು ಪುಣ್ಯದ ಅನುಭವಗಳ ನುಡಿಗಳು ಇಂದು ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ ಎಂದರು.
ಇಂದು ನಮ್ಮ ಶ್ರೀಮಠದಲ್ಲಿ ಭಕ್ತರ ಸಹಯೋಗದಲ್ಲಿ ಗೋವುಗಳ ಲಾಲನೆ-ಪಾಲನೆ, ಆನೆ, ನವಿಲು, ಮೊಲಗಳನ್ನು ಸಾಕಿದ್ದು ಪ್ರತಿನಿತ್ಯ ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವು ನಡೆಯುತ್ತಿದ್ದು ಧರ್ಮ ಸಂದೇಶ ಕಾರ್ಯಕ್ರಮಗಳು ನಡೆಯುತ್ತಿದ್ದು ಸದಾಕಾಲ ಭಕ್ತರಿಗೆ ತೆರೆದಿರುತ್ತದೆ ಎಂದರು.
ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದ ಷಡಕ್ಷರ ಮಠದ ಡಾ. ಶ್ರೀ ರುದ್ರಮುನಿ ಮಹಾಸ್ವಾಮಿಜಿಯವರು, ಸಾಧನೆ ಮಾಡಿದರೆ ಮುಟ್ಟಿ ನೋಡಿಕೊಳ್ಳುವಂತಿರಬೇಕು, ನಾವುಗಳು ತಿಪಟೂರಿಗೆ ಬಂದಾಗ ನಮಗೂ ಸಹ ಸ್ವಾಮೀಜಿಯ ಪೀಠ ಹೂವಿನ ಹಾಸಿಗೆಯಾಗಿರಲಿಲ್ಲ. ನಾವು ಇಲ್ಲಿ ಶೂನ್ಯದಿಂದ ಸಂಪಾದನೆ ಮಾಡಿರುವ ಸಂಪನ್ಮೂಲಗಳು ಎಲ್ಲರ ಜೀವನದಲ್ಲಿ ಬದುಕು ಮುಳ್ಳಿನ ಹಾದಿಯಾಗಿದ್ದರೆ ನಮ್ಮ ಜೀವನದಲ್ಲಿ ಮುಳ್ಳೆ ಬದುಕಿನ ಹಾದಿಯಾಗಿದೆ. ಮಹಾರಾಜ ಆದವನು ಬೀದಿಗೆ ಬಂದು ಬಿದ್ದಂತಹ ಪರಿಸ್ಥಿತಿಗಳು ನಮ್ಮಲ್ಲಿ ನಡೆದು ಹೋಗಿವೆ. ಇಂತಹ ಘಟನೆಗಳನ್ನು ನಿಗ್ರಹಿಸಿಕೊಳ್ಳಲು ತಾಳ್ಮೆ, ಸಹನೆ, ಸಂಯಮ, ಏಕಾಗ್ರತೆ, ಕಠಿಣ ಶ್ರಮಗಳು ಅತಿ ಮುಖ್ಯವಾಗಿದ್ದು, ಅಂತಹ ಫಲಗಳಿಂದ ಇಂತಹ ಗೌರವ ಸಮರ್ಪಣೆಗಳು ಲಭಿಸುತ್ತವೆ ಎಂದರು.
ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಕುಪ್ಪೂರು ಗದ್ದಿಗೆಯ ಡಾ.ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಆತ್ಮಸ್ಥೈರ್ಯ, ಕಾಯಕ, ಛಲಗಳು ಇದ್ದರೆ ನಾವುಗಳು ಏನನ್ನಾದರೂ ಸಾಧಿಸಬಹುದು. ಅರಿವಿನ ಜಾಗೃತಿ ಬಂದಾಗ ಗುರು ಶಿಷ್ಯರ ಬಾಂಧವ್ಯವು ಮೂಡಿ ಬರುತ್ತದೆ. ಆದ್ದರಿಂದ ಸದಾ ಭಕ್ತರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುರುವಿನ ಕಷ್ಟವನ್ನು ತಿಳಿದುಕೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಮಾತ್ರ ಭವಿಯು ಭಕ್ತನಾಗಲು ಸಾಧ್ಯವಾಗುತ್ತದೆ ಎಂದರು.
ಇಂದು ನಮ್ಮ ತಾಲ್ಲೂಕಿನ ಇಬ್ಬರು ಪರಮಪೂಜ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಅವರ ಸಾಧನೆಗೆ ಹಾಗೂ ಅವರುಗಳು ಸಮಾಜಕ್ಕೆ ಕೊಟ್ಟಿರುವ ಅಪಾರ ಕೊಡುಗೆಯ ಶ್ರಮದ ಫಲವೇ ಇಂದು ಈ ಪದವಿ ಲಭಿಸಿದೆ. ಇಂತಹ ಕಾರ್ಯಕ್ರಮವನ್ನು ರೂಪಿಸಿದ ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷರಾದ ಲೋಕೇಶ್ವರರ ಸೇವೆ ಅನನ್ಯವಾದದ್ದು ಎಂದರು.
ಅತಿಥಿಗಳಾಗಿ ಮಾತನಾಡಿದ ಮಾಜಿ ಶಾಸಕ ಕೆ.ಷಡಕ್ಷರಿ ವೀರಶೈವ ಮಠಗಳು ಸಮಾಜದಲ್ಲಿ ಜ್ಞಾನ, ಅನ್ನ, ಆಶ್ರಯ ನೀಡುತ್ತಾ ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಾ ಸರ್ಕಾರಗಳು ಮಾಡುವಂತಹ ಕೆಲಸಗಳನ್ನು ನಮ್ಮ ಮಠ-ಮಾನ್ಯಗಳು ನಡೆಸುತ್ತಾ ಬರುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ಸಾಧನೆ ಮಾಡಿದವರಿಗೆ ಗೌರವಿಸುವುದು ನಮ್ಮ ವೇದಿಕೆ ಮುಖ್ಯ ಗುರಿಯಾಗಿದ್ದು, ಬಸವಣ್ಣನವರ ಹಾದಿಯಲ್ಲಿ ನಾವುಗಳು ಸಾಗುತ್ತಾ ಪ್ರತಿಯೊಬ್ಬ ವ್ಯಕ್ತಿಗಳು ಸಮಾನತೆಗೋಸ್ಕರ ಲಿಂಗಾಧಾರಣೆಯನ್ನು ಮಾಡಿಕೊಳ್ಳಬೇಕು, ವಿನಃ ಯಾವ ಜಾತಿಗೆ ಮೀಸಲಾಗದೆ ಸಮಾಜದ ಒಳಿತಿಗಾಗಿ ಶ್ರಮಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಸಮಾಜದ ಕಷ್ಟ ಸುಖಗಳಿಗೆ ಶ್ರಮಿಸಿ ವಿಶೇಷ ಸಾಧನೆಯನ್ನು ಮಾಡಿದವರಿಗೆ ಸನ್ಮಾನಿಸುವುದು ನಮ್ಮ ವೇದಿಕೆ ಕೆಲಸ ಎಂದರು. ಕಾರ್ಯಕ್ರಮದಲ್ಲಿ ತಿಪಟೂರು ಹೋರಾಟ ಸಮಿತಿಯ ಕಾರ್ಯದರ್ಶಿ ವೊಡಫೋನ್ ಚಂದ್ರು, ಅಕ್ಕ ಸಮಾಜದ ಮಹಿಳೆಯರು, ಕದಳಿ ಬಳಗ, ವಿಷ್ಣು ಬಳಗದವರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
