ನಷ್ಟ ಹೊಂದಿದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವೆ : ಶಾಸಕ

ತುರುವೇಕೆರೆ

   ತಾಲ್ಲೂಕಿನ ಮಾರಸಂದ್ರ ಮತ್ತು ಸೊರವನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ತೀವ್ರ ಬಿರುಗಾಳಿ ಸಹಿತ ಮಳೆಗೆ ರೈತರ ಅಪಾರ ಪ್ರಮಾಣದ ತೆಂಗು ಮತ್ತು ಮನೆಗಳು ನಾಶವಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಮಸಾಲ ಜಯರಾಮ್ ಹಾಗೂ ತಾಲ್ಲೂಕು ಆಡಳಿತ ಸೋಮವಾರ ಸ್ಥಳ ಪರಿಶೀಲನೆ ಮಾಡಿ ನಷ್ಟ ಹೊಂದಿದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

   ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯ ಮಾರಸಂದ್ರ ಗ್ರಾಮಕ್ಕೆ ಶಾಸಕ ಮಸಾಲಜಯರಾಮ್ ಭೇಟಿ ನೀಡಿ ಮಳೆಗಾಳಿಗೆ ಹಾನಿಗೊಳಗಾದ ಸಿದ್ದಲಿಂಗಯ್ಯ, ಕೆಂಪಯ್ಯ ಹಾಗೂ ಗ್ರಾಮದ ಇತರೆ ರೈತರ ನಷ್ಟದ ಸಮಸ್ಯೆಗಳನ್ನು ಆಲಿಸಿದರು.

     ನಂತರ ಮಾಯಸಂದ್ರ ಹೋಬಳಿಯ ತೂಬಿನಕಟ್ಟೆಗೆ ತೆರಳಿ ಈಚೆಗಷ್ಟೆ ನೂತನವಾಗಿ ಕಟ್ಟಿದ ಸವಿತಾಲೋಕೇಶ್ ಅವರ ಮನೆ ತೀವ್ರಗಾಳಿಗೆ ಮನೆಯ ತಗಡಿನಶೀಟ್, ತೀರು ಎಲ್ಲವೂ ಜಖಂಗೊಡು ಈ ಕುಟುಂಬ ಬೀದಿಗೆ ಬಂದಿರುವುದನ್ನು ಮನಗಂಡ ಶಾಸಕರು ತೀವ್ರ ಹಾನಿಯಾಗಿರುವ ಮನೆ ಸಂತ್ರಸ್ಥರಿಗೆ ತಲಾ 5 ಸಾವಿರ ರೂಪಾಯಿಗಳ ನಗದನ್ನು ಕೊಟ್ಟು ಸಾಂತ್ವನ ಹೇಳಿ ಹೆಚ್ಚಿನ ಪರಿಹಾರವನ್ನು ತಾಲ್ಲೂಕು ಆಡಳಿತದಿಂದ ದೊರಕಿಸಿಕೊಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ನಯಿಂಉನ್ನಿಸಾ ಅವರಿಗೆ ಸೂಚಿಸಿದರು.ಸೊರವನಹಳ್ಳಿ ಗ್ರಾಮದ ಸುಶೀಲಮ್ಮನವರ ತೋಟದಲ್ಲಿ ಫಲಕೊಡುತ್ತಿದ್ದ ಆಳೆತ್ತರದ ನೂರಾರು ತೆಂಗಿನ ಮರಗಳು ಬುಡಮೇಲಾಗಿ ಬಿದ್ದಿರುವುದನ್ನು ಕಂಡು ಶಾಸಕ ಮಸಾಲ ಜಯರಾಮ್ ಮರುಗಿದರು.

    ಅಲ್ಲಿನ ರೈತರು ಶಾಸಕರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಗಾಳಿ ಹೊಡೆತಕ್ಕೆ ವಿದ್ಯುತ್ ಕಂಬಗಳು ಮುರಿದಿದ್ದು ಅವುಗಳನ್ನು ಬೇಗ ಸರಿಪಡಿಸಿ ವಿದ್ಯುತ್ ಕೊಡಿಸುವಂತೆ ಶಾಸಕರ ಬಳಿ ಅಂಗಲಾಚಿಕೊಂಡರು.

     ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, ತಾಲ್ಲೂಕಿನಲ್ಲಿ ತೀವ್ರ ಬರಗಾಲವಿದ್ದದ್ದರಿಂದ ನೀರಿಗೆ ಹಾಹಾಕಾರ ಉಂಟಾಗಿ ರೈತರು ತೆಂಗು ಸೇರಿದಂತೆ ಇನ್ನಿತರ ಬೆಳೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅಲ್ಲದೆ ರೈತರು ಕೊಳವೆ ಬಾವಿಕೊರೆಸಲು ಕೈಯಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡರೂ ಸಹಾ ಇತ್ತಾ ನೀರೂ ಇಲ್ಲಾ ಹಣವೂ ಇಲ್ಲ ಎಂಬಂತಹ ವಿಷಮ ಸ್ಥಿತಿಯಲ್ಲಿ ಪ್ರಕೃತಿಯ ವಿಕೋಪ ರೈತರನ್ನು ಮತ್ತಷ್ಟು ಕಳೆಗುಂದುವಂತೆ ಮಾಡಿದೆ. ಈಗಾಗಲೆ ಕಂದಾಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ನಷ್ಟದ ಮಾಹಿತಿ ಸಂಗ್ರಹಿಸಿದ್ದು ಶೀಘ್ರದಲ್ಲೇ ರೈತರಿಗೆ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಿದರು.

     ತಹಸೀಲ್ದಾರ್ ನಯಿಂಉನ್ನಿಸಾ ಮಾತನಾಡಿ, ಮಳೆ ಹಾನಿಯಿಂದ ಸೊರವನಹಳ್ಳಿ, ತೂಬಿನಕಟ್ಟೆ ಸೇರಿ ಸುಮಾರು 342 ತೆಂಗು, 124 ಅಡಿಕೆ, 66 ಬಾಳೆ, 8 ಮನೆಗಳಿಗೆ ಹಾನಿಯಾಗಿದ್ದು, ಅದೇ ರೀತಿ ಮಾರಸಂದ್ರ ಗ್ರಾಮದಲ್ಲಿ ಬೆಳೆ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ತೋಟಗಾರಿಕಾ ಇಲಾಖೆಯ ತೆಂಗು ಪುನಃಶ್ಚೇತನ ಯೋಜನೆಯಡಿ 1 ಹೆಕ್ಟೇರ್‍ಗೆ 18 ಸಾವಿರದಂತೆ ಎಷ್ಟು ಪ್ರದೇಶದಲ್ಲಿ ತೆಂಗು ಹಾನಿಯಾಗಿರುತ್ತದೆಯೋ ಅಷ್ಟು ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಜಖಂಗೊಂಡ ಮನೆಗಳ ಮಾಹಿತಿಯನ್ನು ಜಿಲ್ಲಾ ಪಂಚಾಯಿತ್‍ಗೆ ಕಳುಹಿಸಿ ಶೀಘ್ರ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

       ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ದುಂಡಾರೇಣುಕಪ್ಪ, ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ಆರ್.ರಂಗಸ್ವಾಮಿ, ಕಾಂತರಾಜು, ವಿ.ಬಿ.ಸುರೇಶ್, ರವಿಕುಮಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap