ಬೆಂಗಳೂರು
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಲೋಕಸಭಾ ಚುನಾವಣೆಯ ನಂತರ ಮೂಲೆಗುಂಪು ಮಾಡುವ ಯತ್ನ ತೀವ್ರವಾಗಲಿದ್ದು ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಬೇಕು. ಅನಿವಾರ್ಯವಾದರೆ ಸಿಡಿದು ನಿಲ್ಲಲು ತಯಾರಾಗಿರಬೇಕು ಎಂದು ರಾಜ್ಯದ ವೀರಶೈವ – ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ಸಮುದಾಯದ ಶಾಸಕರಿಗೆ ಎಚ್ಚರಿಕೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಲೋಕಸಭಾ ಚುನಾವಣೆಯ ನಂತರ ದೇಶದ ಅಧಿಕಾರ ಗದ್ದುಗೆಯ ಮೇಲೆ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕುಳಿತರೆ ಇಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸ್ವಪಕ್ಷದ ನಾಯಕರನೇಕರು ಸ್ಕೆಚ್ ಹಾಕಿದ್ದಾರೆ ಎಂದು ವಿವರಿಸಿರುವುದಾಗಿ ಹೇಳಿವೆ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಡಿಯೂರಪ್ಪ ಅವರೇ ಕಾರಣ.ಆದರೆ ಈಗ ಯಡಿಯೂರಪ್ಪ ಅವರನ್ನು ಸೈಡ್ ಲೈನಿಗೆ ಸರಿಸಿ ಅಧಿಕಾರ ಹಿಡಿಯಲು ಕೆಲ ಜನನಾಯಕರಲ್ಲದವರು ಯತ್ನಿಸುತ್ತಿದ್ದು,ಅಂತಹವರ ಯತ್ನಕ್ಕೆ ಬಿಜೆಪಿ ಹೈಕಮಾಂಡ್ ಕೂಡಾ ಕುಮ್ಮಕ್ಕು ನೀಡುತ್ತಿದೆ.
ಇದೇ ಕಾರಣಕ್ಕಾಗಿ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ತೆರೆ ಮರೆಯ ಹಿಂದಿದ್ದ ಸೋಷಿಯಲ್ ಮೀಡಿಯಾ ಲೀಡರುಗಳು ರಾಜ್ಯ ರಾಜಕಾರಣದ ಫ್ರಂಟ್ ಲೈನ್ ಗೆ ಬರುವ ಮುನ್ಸೂಚನೆ ನೀಡತೊಡಗಿದ್ದಾರೆ.
ಒಂದು ವೇಳೆ ಸರ್ಕಾರ ಪದಚ್ಯುತವಾದರೆ ಯಡಿಯೂರಪ್ಪ ಅವರ ಬದಲು ತಾವೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುವುದಾಗಿ ಪಕ್ಷದ ಒಳವಲಯಗಳಿಗೆ ಸಿಗ್ನಲ್ ರವಾನಿಸಿದ್ದಾರೆ.ಆದರೆ ಯಾವ ಕಾರಣಕ್ಕೂ ಹೀಗಾಗಕೂಡದು.ಒಂದು ವೇಳೆ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಪತನವಾದರೆ ಇಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬೇಕು.
ಒಂದು ವೇಳೆ ಯಡಿಯೂರಪ್ಪ ಅವರಿಗೆ ಅವಕಾಶ ತಪ್ಪಿಸಲಾಗುತ್ತದೆ ಎಂದಾದರೆ ಯಾವ ಕಾರಣಕ್ಕೂ ಅದಕ್ಕೆ ಅವಕಾಶ ನೀಡಕೂಡದು. ಅಗತ್ಯ ಬಿದ್ದರೆ ಬಿಜೆಪಿಯ ವಿರುದ್ಧ ತಿರುಗಿ ಬೀಳಲು ಸಜ್ಜಾಗಬೇಕು ಎಂದು ಈ ನಾಯಕರು ಹಲ ಶಾಸಕರಿಗೆ ಸಂದೇಶ ನೀಡಿದ್ದಾರೆ.ಒಂದು ಸಲ ಪಕ್ಷವೇನಾದರೂ ಯಡಿಯೂರಪ್ಪ ಅವರ ಹಿಡಿತದಿಂದ ಕೈ ತಪ್ಪಿದರೆ ಮುಂದಿನ ದಿನಗಳಲ್ಲಿ ನಿಶ್ಚಿತವಾಗಿ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಹಿತ ಕಡೆಗಣನೆಯಾಗಲಿದೆ ಎಂದು ಈ ನಾಯಕರು ಹೇಳಿದ್ದಾರೆ.
ರಾಜ್ಯದ ಬಲಿಷ್ಟ ಸಮುದಾಯವಾಗಿ ಲಿಂಗಾಯತರು ಬಿಜೆಪಿಯ ಹಿಂದೆ ನಿಂತಿದ್ದಾರೆ. ಲಿಂಗಾಯತ ಸಮುದಾಯದ ಶಕ್ತಿ ಲಭ್ಯವಾಗುವ ತನಕ ಬಿಜೆಪಿಗೆ ವೋಟ್ ಬ್ಯಾಂಕ್ ಎಂಬುದೇ ಇರಲಿಲ್ಲ.ಯಾವಾಗ ಲಿಂಗಾಯತ ಸಮುದಾಯ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಜನತಾಪರಿವಾರವನ್ನು ತೊರೆದು ಬಿಜೆಪಿ ಕಡೆ ಬಂತೋ? ಆನಂತರದ ದಿನಗಳಲ್ಲಿ ಅದರ ಬಲ ಏಕಾಏಕಿಯಾಗಿ ಮೇಲಕ್ಕೇರಿತು.
ಆದರೆ ಅದನ್ನು ಮರೆತ ರಾಜ್ಯ ಬಿಜೆಪಿಯ ಕೆಲ ನಾಯಕರು, ಪಕ್ಷದ ಹೈಕಮಾಂಡ್ ವರಿಷ್ಟರ ಜತೆ ಸೇರಿ ಹೊಸ ಆಟಕ್ಕೆ ಸಜ್ಜಾಗಿದ್ದಾರೆ. ಆದರೆ ನಮಗೆ ಯಡಿಯೂರಪ್ಪ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆದರೂ ಸಾಕು.ಆದರೆ ಯಾವ ಕಾರಣಕ್ಕೂ ಅವರು ಮೂಲೆಗುಂಪಾಗಬಾರದು ಎಂದು ಈ ನಾಯಕರು ವಿವರಿಸಿದ್ದಾರೆ.
ಈ ನಾಯಕರ ಸೂಚನೆಯಂತೆ ಬಿಜೆಪಿಯ ಲಿಂಗಾಯತ ಶಾಸಕರನೇಕರು ಮುಂದಿನ ತಿಂಗಳ ಮೊದಲ ವಾರದ ವೇಳೆಗೆ ಮಹತ್ವದ ಸಭೆ ನಡೆಸಲು,ಮುಂದಿನ ಹೆಜ್ಜೆ ಇಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ವಿವರ ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
