ಹೊನ್ನಾಳಿ:
ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ರಾತ್ರಿ ವಿಶ್ವ ಭೂ ದಿನಾಚರಣೆ ಹಾಗೂ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಭೂಮಿ ಜೀವರಾಶಿಗಳಿಗೆ ಅಗತ್ಯ ಇರುವ ಎಲ್ಲಾ ಸಂಪನ್ಮೂಲಗಳನ್ನು ಕೊಟ್ಟಿದ್ದು ಸಮತೋಲನ ಕಾಪಾಡುವ ಕರ್ತವ್ಯ ನಮ್ಮದಾಗಬೇಕು ಎಂದು ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಮ್ಮ ಸಾರ್ಥಕ ಬದುಕನ್ನು ಸಮಾಜದ ಸೇವೆಗಾಗಿ ಮುಡಿಪಾಗಿಡಬೇಕು. ನಮಗಾಗಿ ಸಮಾಜ ಏನು ಕೊಟ್ಟಿದೆ ಎಂದು ಕೇಳುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದು ತಿಳಿಸಿದರು.
ಭೂಮಿ ಮೇಲೆ ತಾಪಮಾನ ಅತ್ಯಧಿಕವಾಗಿ ಹೆಚ್ಚಾಗಿದ್ದು ಇದಕ್ಕೆ ಕಾರಣ ಮಾನವನ ಅತೀ ಆಸೆ ಹಾಗೂ ಸಲ್ಲದ ಚಟುವಟಿಕೆಗಳು. ಎಲ್ಲವೂ ನನಗೇ ಮೀಸಲಾಗಬೇಕು ಎನ್ನುವ ಅತಿಯಾದ ಆಸೆ ಮನುಷ್ಯರಲ್ಲಿ ಮನೆ ಮಾಡಿದೆ. ಇದು ಸಲ್ಲದು ಎಂದು ಹೇಳಿದರು.
ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥೆ ಜ್ಯೋತಿ ಅಕ್ಕನವರು ಮಾತನಾಡಿ, ಮಾನವನಾಗಿ ಹುಟ್ಟುವುದೇ ಒಂದು ಪುಣ್ಯವಿದ್ದಂತೆ. ಎಲ್ಲವನ್ನು ಅರಿತಿರುವ ನಾವು ನಿಸರ್ಗದ ಉಳಿವಿಗೆ ಸತತ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸನ್ಯಾಸತ್ವ ಎಂದರೆ ಎಲ್ಲವನ್ನೂ ತ್ಯಜಿಸುವುದು ಎಂದರ್ಥ. ಮಠದ ಸ್ವಾಮಿಗಳು ಸಮಾಜದ ಸೇವೆಗಾಗಿ ಸದಾ ದುಡಿಯುತ್ತಾರೆ. ಹಿರೇಕಲ್ಮಠದ ಶ್ರೀಗಳ ಆಯುರಾರೋಗ್ಯ ಹೆಚ್ಚಾಗಿ ಭಕ್ತರ ಆಶೋತ್ತರಗಳನ್ನು ಈಡೇರಿಸಲಿ ಎಂದು ಆಶಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ. ಗುಣಕರ್, ಮುಖಂಡರಾದ ಎಚ್.ಎ. ಉಮಾಪತಿ, ಎಚ್.ಬಿ. ಶಿವಯೋಗಿ, ವಿಜಯಾನಂದಸ್ವಾಮಿ, ಸುರೇಶ್ ಹೊಸಕೇರಿ, ಬಸವರಾಜಪ್ಪ, ಕುಮಾರಸ್ವಾಮಿ, ಜಗದೀಶ್, ಶಿವಪದ್ಮ, ತಿಮ್ಮಪ್ಪ ಇತರರು ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








