ಜಗಳೂರು: ಶೇ 71 ಮತದಾನ

ಜಗಳೂರು:

      ದಾವಣಗೆರೆ ಲೋಕಸಭಾ ಚುನಾವಣೆಯು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದಿದ್ದು, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.71 ರಷ್ಟು ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರು.

       ಜಿಲ್ಲೆಯಲ್ಲಿಯೇ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 262 ಮತಗಟ್ಟೆಗಳಲ್ಲಿ ಬೆಳಿಗ್ಗೆ ಬಿಸಿಲು ಏರಿದಂತೆಲ್ಲ ಮತದಾನದ ಕಾವು ಹೆಚ್ಚುತ್ತಾ ಹೋಯಿತು. ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಬೆಳಗ್ಗೆ 6.45ರಿಂದ 262 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಜಗಳೂರು ಗೊಲ್ಲರಹಟ್ಟಿಯಲ್ಲಿ ಮತಯಂತ್ರ ತಾಂತ್ರಿಕ ತೊಂದರೆಯಿಂದ ಸ್ವಲ್ಪ ಕಾಲ ಮತದಾನ ಆರಂಭವಾಗಲಿಲ್ಲ. ಸರಿಪಡಿಸಿದ ನಂತರ ಶುರುವಾಯಿತು.

       ಯುವ ಸಮೂಹ ಉತ್ಸಾಹದಿಂದ ಮತದಾನಕ್ಕೆ ಬಂದು ವೋಟ್ ಹಾಕಿ ತಮ್ಮ ಸ್ನೇಹಿತರೊಂದಿಗೆ ಗುಂಪು ಸೆಲ್ಪೀ ಪೋಟೊ ತೆಗೆದುಕೊಂಡು ಸಂಭ್ರಮಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಒಬ್ಬೊಬ್ಬರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು.
ಕೆಲವು ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳೇ ನಾಮಪತ್ತೆಯಾಗಿದ್ದವು. ಇದರಿಂದ ಮತದಾರರು ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

        ಕಳೆದ ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ಮತ ಹಾಕಿದ್ದೇವೆ ಆದರೆ ಇದೀಗ ನಮ್ಮ ಹೆಸರುಗಳಿಲ್ಲವೆಂದರೆ ಇನ್ನು ಕೆಲವರು ಹಿಂದಿನ ವಾರ್ಡ್‍ನಲ್ಲಿ ಹಾಕಿದ ಮತದಾನ ಈ ಬಾರಿ ಬೇರೆ ಕಡೆ ವರ್ಗಾವಣೆಯಾಗಿದೆ. ಮತಗಟ್ಟೆ ಹುಡುಕಿ ಸಾಕಾಯಿತು ಅಧಿಕಾರಿಗಳ ಸಣ್ಣ ನಿರ್ಲಕ್ಷದಿಂದ ಮತದಾರರ ಅಲೆದಾಡುವಂತಾಗಿದೆ ಎಂದು ಮತದಾನ ವಂಚಿತರು ಬೇಸರ ವ್ಯಕ್ತಪಡಿಸಿದರು.

        ಪಟ್ಟಣದ ಸಂತೇಪೇಟೆ ಹಾಗೂ ಬಿಳಿಚೋಡು ಸೇರಿದಂತೆ ಎರಡು ಕಡೆ ಸಖಿ ಕೇಂದ್ರಗಳನ್ನು ತೆರೆಯಲಾಗಿತ್ತು. ಮಹಿಳೆಯರು ಉತ್ಸಾಹದಿಂದ ಮತದಾನ ಮಾಡಿ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು. ಗರ್ಭೀಣಿಯರಿಗೆ, ಬಾಣಂತಿಯರು, ಅಂಗವಿಕಲರು, ವೃದ್ದರಿಗಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂಗವಿಕರಿಗೆ ವೀಲ್‍ಚೇರ್ ಮೂಲಕ ಮತದಾನಕ್ಕೆ ತರಲಾಯಿತು.

       ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಜಿ.ಎಂ.ಎಸ್.ಅನಿತ್‍ಕುಮಾರ ತಮ್ಮ ತಮ್ಮ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 72207 ಪುರುಷ, 66992 ಮಹಿಳೆ, ಇತರೆ 10 ಸೇರಿದಂತೆ ಒಟ್ಟು 139209 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link