ಡಾ: ರಾಜ್ ಚಿತ್ರಗಳು ಮಕ್ಕಳಿಗೆ ಪ್ರೇರಣೆ: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್

ತುಮಕೂರು
 
       ಕರ್ನಾಟಕ ರತ್ನ, ಪದ್ಮಭೂಷಣ, ವರನಟ ಡಾ: ರಾಜ್‍ಕುಮಾರ್ ಅವರ ನಟನೆಯ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಿ, ಆ ಚಿತ್ರಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ತಿಳಿಸಿದರು. 
         ವರನಟ ಡಾ: ರಾಜ್‍ಕುಮಾರ್ ಅವರ 91ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಡಾ: ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು. 
        ವರನಟ ಡಾ: ರಾಜ್‍ಕುಮಾರ್ ಅವರು ನಟಿಸಿರುವ ಪ್ರತಿ ಚಲನಚಿತ್ರದಲ್ಲಿ ಪಾತ್ರಗಳಿಗೆ  ಜೀವ ತುಂಬುತ್ತಿದ್ದರು.  ತನ್ಮಯತೆ, ಶ್ರದ್ಧೆ ಅವರಲ್ಲಿತ್ತು.  ನೆಗೆಟಿವ್ ಅಥವಾ ಪಾಸಿಟಿವ್ ಪಾತ್ರದಲ್ಲಿ ನಟಿಸುವಾಗಲೂ ಆ ಪಾತ್ರಗಳಿಗೆ ತಕ್ಕಂತೆ ಮನೋಜ್ಞವಾಗಿ ನಟನೆ ಮಾಡುತ್ತಿದ್ದರು. ಭೂಕೈಲಾಸ ಹಾಗೂ ಭಕ್ತ ಪ್ರಹ್ಲಾದ ಚಲನಚಿತ್ರಗಳಲ್ಲಿ ಡಾ: ರಾಜ್ ಅವರ ನಟನೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. 
      ತೆಲುಗು ಮತ್ತು ತಮಿಳು ಭಾಷಿಕ ನನ್ನ ಸ್ನೇಹಿತರಿಗೆ ಕನ್ನಡ ಭಾಷೆ ಕಲಿಯಲು ಡಾ: ರಾಜ್‍ಕುಮಾರ್ ನಟನೆಯ ಚಿತ್ರಗಳನ್ನು ವೀಕ್ಷಿಸಲು ತಿಳಿಸುತ್ತಿದ್ದೆವು.  ಅವರ ಚಿತ್ರಗಳಲ್ಲಿ ಸ್ಪಷ್ಟವಾದ ಕನ್ನಡ ಭಾಷೆ ಬಳಕೆ ಕಾಣುತ್ತೇವೆ ಎಂದರು. 
“ರಾಘವೇಂದ್ರಸ್ವಾಮಿ” ಗಳ ಪಾತ್ರದಲ್ಲಿ ರಾಜ್‍ಕುಮಾರ್ ನಟಿಸುವಾಗ ಪಾತ್ರಕ್ಕೆ ತಕ್ಕಂತೆ ಚಿತ್ರದ ಚಿತ್ರೀಕರಣ ಮುಗಿಯುವರೆಗೂ ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡಿದ್ದರು ಎಂಬುದನ್ನು ನನ್ನ ತಂದೆಯಿಂದ ತಿಳಿದುಕೊಂಡಿದ್ದೆ. ಒಟ್ಟಾರೆ ಬಂಗಾರದ ಮನುಷ್ಯನ ಜನ್ಮ ದಿನಾಚರಣೆಯನ್ನು ಅವರ ನಟನೆಯ ಚಿತ್ರಗಳನ್ನು ವೀಕ್ಷಿಸುವ ಮೂಲಕ ಜನರು/ ಅಭಿಮಾನಿಗಳು ಆಚರಿಸಬೇಕು ಎಂದು ಅವರು ತಿಳಿಸಿದರು. 
       ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರು, ಹಿರಣ್ಯಕಶಿಪು, ಭಕ್ತ ಕನಕದಾಸ, ಭಕ್ತ ಕುಂಬಾರ ಕುರಿತಂತೆ ಪೌರಾಣಿಕ ಹಾಗೂ ಐತಿಹಾಸಿಕ ಪುಸ್ತಕಗಳನ್ನು ಓದುವಾಗ ಡಾ: ರಾಜ್‍ಕುಮಾರ್ ಅವರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ.  ಇದು ಅವರ ನಟನೆಯಲ್ಲಿ ಇದ್ದ ತನ್ಮಯತೆ, ಬದ್ಧತೆ, ಶ್ರದ್ಧೆಯನ್ನು ತೋರಿಸುತ್ತದೆ ಎಂದರು. 
      ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದರು.  ಚಿತ್ರ ನಿರ್ಮಾಪಕರನ್ನು ಅನ್ನದಾತರು ಎಂದು ಸಂಬೋಧಿಸುತ್ತಿದ್ದರು. ಇಂತಹ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಅವರ ನಟನೆಯ ಚಲನಚಿತ್ರಗಳಲ್ಲಿನ ಮೌಲ್ಯಗಳು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಅವರು ತಿಳಿಸಿದರು. 
     ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಶಿಲ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ಜಿ.ಪಿ. ದೇವರಾಜ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಡಾ: ಸುಬ್ರನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಜ್‍ಕುಮಾರ್ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಲಾವಿದ ದಿಬ್ಬೂರು ಮಂಜು ಅವರು ಡಾ: ರಾಜ್‍ಕುಮಾರ್ ಗಾಯನದ ಗೀತೆಗಳನ್ನು ಹಾಡಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ