ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿನಲ್ಲಿರುವ ಜೆಸಿಬಿ ಯಂತ್ರಗಳ ನಿಯಂತ್ರಣಕ್ಕೆ ಪಾಲಿಕೆಯ ಆಡಳಿತವು ಬಿಗಿ ಕ್ರಮ ಕೈಗೊಂಡಿದೆ. ಇದಕ್ಕಾಗಿ `ನಿರ್ದಿಷ್ಟ ಮಾನದಂಡದ ನಿರ್ವಹಣಾ ಪ್ರಕ್ರಿಯೆ’ಯನ್ನು ಜಾರಿಗೆ ತಂದಿದೆ.
ಈವರೆಗೆ ಪಾಲಿಕೆಯಲ್ಲಿರುವ ಜೆಸಿಬಿ ಯಂತ್ರಗಳ ಬಳಕೆಗೆ ನಿರ್ದಿಷ್ಟ ಪ್ರಕ್ರಿಯೆ ಇರಲಿಲ್ಲ. ಆದರೆ ಇದೇ ಮೊದಲಬಾರಿಗೆ ಆಯಕ್ತ ಟಿ.ಭೂಪಾಲನ್ ಅವರು ಇದನ್ನು ಅನುಷ್ಠಾನಕ್ಕೆ ತಂದಿದ್ದು, ಇದರೊಂದಿಗೆ ಜೆಸಿಬಿ ಯಂತ್ರಗಳ ಬಳಕೆಯಲ್ಲಿ ಪಾರದರ್ಶಕತೆ ಬರಲಿದೆಯೆಂದು ಹೇಳಲಾಗುತ್ತಿದೆ.
ಕಂಟ್ರೋಲ್ ರೂಂಗೆ ದೂರು
ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳ ಪೈಕಿ ಯಾವುದೇ ವಾರ್ಡ್ನಲ್ಲಿ ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಜೆಸಿಬಿ ಯಂತ್ರ ಅನಿವಾರ್ಯ ಎಂದು ಸಾರ್ವಜನಿಕರಿಂದ/ ಪಾಲಿಕೆ ಸದಸ್ಯರಿಂದ/ ಪಾಲಿಕೆ ಅಧಿಕಾರಿಗಳಿಂದ ದೂರು ಬಂದಲ್ಲಿ ಮೊದಲಿಗೆ ಪಾಲಿಕೆ ಕಚೇರಿಯಲ್ಲಿರುವ “ಕಂಟ್ರೋಲ್ ರೂಂ”ಗೆ ಮಾಹಿತಿ ನೀಡಬೇಕು.
ಅಲ್ಲಿರುವ ದೂರು ಪುಸ್ತಕದಲ್ಲಿ ಅಲ್ಲಿನ ಸಿಬ್ಬಂದಿಯಿಂದ ಆ ಬಗ್ಗೆ ದಾಖಲಾಗಬೇಕು. ಬಳಿಕ ಅಲ್ಲಿಂದ ಸಂಬಂಧಿಸಿದ ವ್ಯಾಪ್ತಿಯ ಪರಿಸರ ಇಂಜಿನಿಯರ್ ಅವರಿಗೆ ಸಂದೇಶ ರವಾನೆಯಾಗುತ್ತದೆ.
ಪಾಲಿಕೆ ಸುಪರ್ದಿನಲ್ಲಿ ಒಟ್ಟು ನಾಲ್ಕು ಜೆಸಿಬಿ ಯಂತ್ರಗಳಿವೆಯಾದರೂ, ಒಂದು ಜೆಸಿಬಿ ಯಂತ್ರವು ದುರಸ್ತಿಯಲ್ಲಿರುವುದರಿಂದ ಪ್ರಸ್ತುತ ಮೂರು ಜೆಸಿಬಿ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂರನ್ನು ಪಾಲಿಕೆಯ ಮೂವರು ಪರಿಸರ ಇಂಜಿನಿಯರ್ಗಳು ತಲಾ 12 ವಾರ್ಡ್ಗಳಿಗೆ ಒಂದು ಜೆಸಿಬಿ ಯಂತ್ರದಂತೆ ನಿರ್ವಹಣೆ ಮಾಡಲಿರುವರು.
ಆಯಾ ವಾರ್ಡ್ ವ್ಯಾಪ್ತಿಯ ಪರಿಸರ ಇಂಜಿನಿಯರ್ ಸದರಿ ಜೆಸಿಬಿ ಯಂತ್ರದ ಚಾಲಕನಿಗೆ ನಿರ್ದಿಷ್ಟ ಸ್ಥಳಕ್ಕೆ ತೆರಳುವಂತೆ ಸೂಚಿಸುತ್ತಾರೆ. ಜೊತೆಗೆ ಸಂಬಂಧಿಸಿದ ವಾರ್ಡ್ನ ಹೆಲ್ತ್ ಇನ್ಸ್ಪೆಕ್ಟರ್ ಅವರಿಗೆ ಈ ಬಗ್ಗೆ ಮೇಲ್ವಿಚಾರಣೆ ಮಾಡುವಂತೆ ಸೂಚಿಸುತ್ತಾರೆ.
ಸ್ಥಳಕ್ಕೆ ತೆರಳುವ ಜೆಸಿಬಿ ಯಂತ್ರದ ಚಾಲಕನು ಅಲ್ಲಿ ಕೆಲಸ ನಿರ್ವಹಿಸಿದ ಬಳಿಕ ಪುಸ್ತಕದಲ್ಲಿ ದೂರುದಾರರ ಹೆಸರು, ವಿಳಾಸ, ಅಲ್ಲಿಗೆ ಜೆಸಿಬಿ ಯಂತ್ರ ತಲುಪಿದ ಸಮಯ, ಅಲ್ಲಿಂದ ಜೆಸಿಬಿ ಯಂತ್ರ ಹೊರಡುವ ಸಮಯ, ಮಾಡಿದ ಕೆಲಸದ ವಿವರ ದಾಖಲಿಸಿ ಅದಕ್ಕೆ ಸಂಬಂಧಿಸಿದ ಹೆಲ್ತ್ ಇನ್ಸ್ಪೆಕ್ಟರ್ ಅವರಿಂದ ಸಹಿ ಪಡೆಯಬೇಕು.
ಖಾಸಗಿ ಬಳಕೆ ಸಲ್ಲ
ಪಾಲಿಕೆಗೆ ಸೇರಿದ ಜೆಸಿಬಿ ಯಂತ್ರಗಳನ್ನು ಖಾಸಗಿ ಕೆಲಸ ಕಾರ್ಯಗಳಿಗೆ ಬಳಸುವಂತಿಲ್ಲವೆಂದು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಅದಕ್ಕೆ ಸಂಬಂಧಿಸಿದ ಪರಿಸರ ಇಂಜಿನಿಯರ್, ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಜೆಸಿಬಿ ಯಂತ್ರದ ಚಾಲಕ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.
ಜಿ.ಪಿ.ಎಸ್. ಅಳವಡಿಕೆ
ಈ ಮೂರೂ ಜೆಸಿಬಿ ಯಂತ್ರಗಳಿಗೆ ಜಿ.ಪಿ.ಎಸ್. ಅಳವಡಿಸಲಾಗಿದೆ. ಹೀಗಾಗಿ ಅವುಗಳ ಸಂಪೂರ್ಣ ಚಲನವಲನಗಳು ಅಕ್ಷಾಂಶ -ರೇಖಾಂಶ ಸಹಿತ ನಿಖರವಾಗಿ ದೊರಕಲಿದೆ. ಇದನ್ನು ಖುದ್ದಾಗಿ ತಾವೂ ಪರಿಶೀಲಿಸಬಹುದಾಗಿದೆ ಎಂದು ಆಯುಕ್ತ ಭೂಪಾಲನ್ ತಿಳಿಸಿದ್ದಾರೆ.
ದುರ್ಬಳಕೆಗೆ ಕಡಿವಾಣ
“ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ಕೈಗೊಂಡಿರುವ ಈ ನೂತನ ಕ್ರಮದಿಂದ ಪಾಲಿಕೆಯ ಜೆಸಿಬಿ ಯಂತ್ರಗಳ ದುರ್ಬಳಕೆಗೆ ಕಡಿವಾಣ ಬೀಳಲಿದೆ. ಜೆಸಿಬಿ ಯಂತ್ರಗಳು ಸದ್ಬಳಕೆ ಆಗಲಿವೆ. ಇದೊಂದು ಸ್ವಾಗತಾರ್ಹ ಕ್ರಮ” ಎಂದು ಸಾರ್ವಜನಿಕ ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ