ಪುರ್ನಿಯಾ
ಮೋದಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇಲ್ಲಿನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ.
ಪುರ್ನಿಯಾ ಜಿಲ್ಲೆಯ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಟೊಲಾ ಎಂಬಲ್ಲಿನ ನಿವಾಸಿ ಮನೋಜ್ ಮೋದಿ ಎಂಬವರು ತಮ್ಮ ವಕೀಲ ದಿಲೀಪ್ ಕುಮಾರ್ ದೀಪಕ್ ಅವರ ಮೂಲಕ ಮುಖ್ಯ ಜುಡಿಷಿಯಲ್ ನ್ಯಾಯಾಲಯದಲ್ಲಿ ಈ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 499 ಮತ್ತು 500 ಪರಿಚ್ಛೇದದಡಿ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭವೊಂದರಲ್ಲಿ ರಾಹುಲ್ ಗಾಂಧಿಯವರು “ಎಲ್ಲಾ ಮೋದಿಗಳು ಕಳ್ಳರು” ಎಂದು ಹೇಳಿಕೆ ನೀಡಿರುವುದು ಮೋದಿ ಸಮುದಾಯ ಮತ್ತು ಮೋದಿ ಉಪ ನಾಮ ಹೊಂದಿದ ಸಮುದಾಯಕ್ಕೆ ನೋವು ತಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮಾತ್ರವಲ್ಲ ತಾವು ಮೋದಿ ಸಮುದಾಯಕ್ಕೆ ಸೇರಿರುವುದರಿಂದ ತಮ್ಮ ಗೆಳೆಯರು ಕೂಡ ತಮ್ಮನ್ನು ಕಳ್ಳ ಎಂದು ಕರೆಯುವಂತಾಗಿದೆ. ರಾಹುಲ್ ಗಾಂಧಿ ನಮ್ಮ ಸಮುದಾಯದ ಭಾವನೆಗಳ ಮೇಲೆ ಆಟವಾಡುತ್ತಿದ್ದಾರೆ ಮತ್ತು ಇಂತಹ ಹೇಳಿಕೆಗಳ ಮೂಲಕ ಅವರು ನಮ್ಮ ಸಮುದಾಯಗಳ ಬಗ್ಗೆ ತಪ್ಪು ಭಾವನೆ ಮೂಡುವಂತೆ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಅವರು ಆರೋಪಿಸಿದ್ದಾರೆ.
ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿ ಸೇರಿದಂತೆ ಮೋದಿ ಉಪನಾಮ ಇರುವ ಎಲ್ಲರೂ ಕಳ್ಳರು ಎಂದು ರಾಹುಲ್ ಬೆಂಗಳೂರಿನ ಸಮಾವೇಶದಲ್ಲಿ ಹೇಳಿದ್ದಾರೆ ಎಂಬ ಅಂಶವನ್ನು ಅರ್ಜಿಯಲ್ಲಿ ವಕೀಲರು ಉಲ್ಲೇಖಿಸಿದ್ದಾರೆ.