ದಾವಣಗೆರೆ:
ಎಲ್ಲ ಮಕ್ಕಳಿಗೂ ಅವರ ಎಲ್ಲ ಹಕ್ಕುಗಳು ದೊರೆಯುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಆಶಿಸಿದರು.ನಗರದ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಗುರುವಾರ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಭೂಮಿ ದಿನಾಚರಣೆ ಮತ್ತು ಮಕ್ಕಳ ಹಕ್ಕುಗಳ ಕ್ಲಬ್ ಸದಸ್ಯರಿಗೆ ನಾಯಕತ್ವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳು ಸಂಪೂರ್ಣ ರೂಪದಲ್ಲಿ ದೊರೆಯುವಣತಾಗಬೇಕು. ಮಕ್ಕಳಿಗೆ ಶಾಲೆಯಲ್ಲಿ ಮತ್ತು ಹೊರಗೆ ತಮ್ಮ ಮೇಲಾಗುವ ಅನ್ಯಾಯ, ದೌರ್ಜನ್ಯ, ಹಿಂಸೆಗಳು ಆದಲ್ಲಿ ಅದನ್ನು ಗುರುತಿಸಿ ಸೂಕ್ತ ವಿಧಾನದಲ್ಲಿ ಪ್ರತಿಭಟಿಸುವ ಅರಿವು ಮೂಡಿಸುವ ನಾಯಕತ್ವದ ಬೆಳವಣಿಗೆ ಆಗಬೇಕೆಂದು ಹೇಳಿದರು.
ಮಕ್ಕಳು ಬೆಳೆದು ಸಮುದಾಯ, ರಾಜ್ಯ, ದೇಶ ಮುನ್ನಡೆಸಲು ಸಹಾಯಕರಾಗಬೇಕೆಂಬುದು ಎಲ್ಲರ ಆಶಯವಾಗಿದ್ದು, ಇಂತಹ ಆಶಯ ಅರ್ಥಪೂರ್ಣವಾಗಿ ಸಫಲವಾಗಬೇಕಾದರೆ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ಹಕ್ಕುಗಳು ಹಾಗೂ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.
ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಲ್ಲಿ ಅವುಗಳ ನಿವಾರಣೆಗೆ ಮಕ್ಕಳು ತಮ್ಮ ಹಕ್ಕುಗಳನ್ನು ಪ್ರತಿಪಾದನೆ ಮಾಡುವಲ್ಲಿ ಶಿಬಿರಗಳು ಸಹಾಯಕವಾಗಬೇಕು. ಎಂತಹ ಪ್ರಸಂಗ ಬಂದರೂ ಮಕ್ಕಳು ಯಾರದೇ ಒತ್ತಡಕ್ಕೆ ಬೀಳದೆ, ಬದುಕಲು, ಜೀವನ ನಡೆಸಲು ಸಹಾಯ ಆಗುವಂತ ವಾತಾವರಣ ನಿರ್ಮಾಣ ಮಾಡುವುದು ಸಮುದಾಯದ ಕರ್ತವ್ಯವಾಗಿದೆ ಎಂದು ಹೇಳಿದರು.
ನೈಸರ್ಗಿಕ ಸಂಪನ್ಮೂಲಗಳ ಮಾರಣ ಹೋಮ ಹಾಗೂ ಅತಿಯಾದ ಮಾಲಿನ್ಯದ ಪ್ರಭಾವದಿಂದಾಗಿ ಭೂಮಿಯ ತಾಪಮಾನ ಏರಿಕೆ ಆಗುತ್ತಿದ್ದು , ಈ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪ್ರತಿಯೊಬ್ಬ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಒಂದೊಂದು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಮರಗಿಡಗಳ ಪೋಷಣೆಯಿಂದ ಜಾಗತಿಕತಾಪಮಾನ ಇಳಿಮುಖ ಮಾಡಬಹುದೆಂದು ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯಗಳನ್ನು ಪಡೆಯಲು ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದು ಅವಶ್ಯವಿದ್ದು, ಧರ್ಮ, ಜಾತಿ, ಭಾಷೆ,ವರ್ಗಗಳನ್ನೂ ಮೀರಿ ಆಲೋಚಿಸುವಂತ ಉದಾತ್ತವಾದ ಧ್ಯೇಯಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದರು.
ಇದು ಕೇವಲ ಅರ್ಥ್ ಡೇ ಅಲ್ಲ, ಎಲ್ಲರ ಬರ್ತ್ ಡೇ. ಸೌರ ಮಂಡಲದ 5ನೇ ಅತ್ಯಂತ ದೊಡ್ಡ ಗ್ರಹ ಭೂಮಿ. ಜೀವ ಸಂಕುಲಗಳನ್ನು ಹೊಂದಿರುವ ಏಕೈಕ ಗ್ರಹವಾಗಿದೆ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗಿದೆ. ಮನುಷ್ಯ ತಮ್ಮ ಸುಖದ ಜೀವನಕ್ಕಾಗಿ ಭೂಮಿಯ ಸಂಪತ್ತನ್ನು ಬರಿದು ಮಾಡುತ್ತಿದ್ದು, ಇದರಿಂದ ಪರಿಸರವೂ ಕೂಡ ಹಾಳಾಗುತ್ತಿದೆ. ನೀರು, ವಾಯು ಮಲೀನ ವಾಗುತ್ತಿವೆ. ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಅದ್ದರಿಂದ ಭೂಮಿಯ ವಾಸ್ತವಿಕ ಸ್ಥಿತಿಗತಿಗಳು, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾನ್‍ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾ.ಸಿರಿಲ್ ಸಗಾಯರಾಜ್ ಮಾತನಾಡಿ, ನಮ್ಮ ಮುಂದಿನ ಭವಿಷ್ಯಕ್ಕಾಗಿ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ. ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ತೀರಾ ಕಳವಳಕಾರಿ ಅಂಶವಾಗಿದೆ. ಭೂಮಿಯ ರಕ್ಷಣೆಯ ಜಾಗೃತಿಗಾಗಿ ಅಭಿಯಾನ ಹಮ್ಮಿಕೊಳ್ಳುವುದು ತೀರಾ ಅಗತ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಪ್ರತಿನಿಧಿಗಳಾದ ಯಶಸ್ವಿನಿ, ಗುರು, ಸೋಷಿಯಲ್ ಆಕ್ಟಿವಿಸ್ಟ್ ಕ್ರೀಂ ಯೋಜನೆಯ ರಾಜ್ಯ ಸಂಚಾಲಕರಾದ ಬಿ.ಮಂಜಪ್ಪ, ಎ.ಟಿ.ವಸಂತಕುಮಾರ್, ಹೀರಾನಾಯ್ಕ ಉಪಸ್ಥಿತರಿದ್ದರು.