ಹುಳಿಯಾರು
ಶಾಲಾ ಮಕ್ಕಳಲ್ಲಿ ಪಠ್ಯದ ಜೊತೆಗೆ ಕಲೆ, ಸಂಗೀತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಶಿಕ್ಷಣ ಇಲಾಖೆ ಬೇಸಿಗೆ ರಜೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ `ಸ್ವಲ್ಪ ಓದು–ಸ್ವಲ್ಪ ಮೋಜು ಬೇಸಿಗೆ ಸಂಭ್ರಮ’ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ತಾಲೂಕಿನಾದ್ಯಂತ ಸೋಮವಾರದಿಂದ ಜಾರಿಗೆ ಬಂದಿದೆ.
ಮೇ 25 ರವರೆಗೆ ಐದು ವಾರಗಳ ಕಾಲ ಹುಳಿಯಾರು ಹೋಬಳಿಯ 3 ಶಾಲೆಗಳು ಸೇರಿದಂತೆ ತಾಲೂಕಿನ 8 ಸರ್ಕಾರಿ ಶಾಲೆಗಳಲ್ಲಿ ಆರನೇ ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಯಲಿವೆ.
ವಾರಕ್ಕೊಂದು ವಿಷಯ: ಪಠ್ಯದ ಜೊತೆಗೆ ವಾರಕ್ಕೊಂದು ವಿಷಯದಂತೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ. ಮೊದಲ ವಾರದಲ್ಲಿ ಕುಟುಂಬ, ಎರಡನೇ ವಾರ ನೀರು, ಮೂರನೇ ವಾರ ಆಹಾರ, ನಾಲ್ಕನೇ ವಾರ ನೈರ್ಮಲ್ಯ ಮತ್ತು ಕೊನೆಯ ವಾರ ಪರಿಸರದ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ.
ಮೂರು ಗಂಟೆಗಳ ಬೋಧನೆಯ ಅವಧಿಯಲ್ಲಿ ಶಿಕ್ಷಕರು ಪಾಠದ ಜೊತೆಗೆ ಬೇರೆ ಚಟುವಟಿಕೆಗಳಲ್ಲೂ ಮಕ್ಕಳು ತೊಡಗುವಂತೆ ಮಾಡಲಿದ್ದಾರೆ. ಅಲ್ಲದೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯೂ ಇರಲಿದೆ. ಗುಂಪು ಆಧರಿತ ಬೋಧನೆ: ಐದು ವಾರಗಳ ಕಾರ್ಯಕ್ರಮದಲ್ಲಿ ಮಕ್ಕಳ ಗುಂಪು ಮಾಡಿ ಶಿಕ್ಷಕರು ಚಟುವಟಿಕೆಗಳನ್ನು ಮಾಡಿಸಲಿದ್ದಾರೆ. ಅಂಕಗಣಿತ, ಮೋಜಿನ ಗಣಿತದ ಸಮಸ್ಯೆಗಳನ್ನು ಬಿಡಿಸುವುದು, ಪ್ರಶ್ನೆ ಕೇಳುವುದು, ಅದಕ್ಕೆ ವಿದ್ಯಾರ್ಥಿಗಳು ಚರ್ಚಸಿ ಉತ್ತರ ನೀಡುವುದು, ಕಥೆ, ಕವನ ಹೀಗೆ ಮಕ್ಕಳ ಪ್ರತಿಭೆಯನ್ನು ಹೊರ ಹಾಕುವಂತಹ ಎಲ್ಲ ಚಟುವಟಿಕೆಗಳು ಈ ಸಂಭ್ರಮದಲ್ಲಿ ಇರಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
