ಬಳಕೆಯಾಗದೆ ವ್ಯರ್ಥವಾದ ನೂತನ ಪೋಲೀಸ್ ಚೌಕಿಗಳು ..!!

ತುಮಕೂರು

ವರದಿ :ರಾಕೇಶ್.ವಿ. 

       ತುಮಕೂರಿನಲ್ಲಿ ವಾಹನಗಳ ಓಡಾಟ ದಿನೆದಿನೆ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುವಲ್ಲಿ ಸಂಚಾರಿ ಪೊಲೀಸರ ಪಾತ್ರ ಹೆಚ್ಚಾಗಿದೆ. ಇವರು ರಸ್ತೆಯ ಮಧ್ಯದಲ್ಲಿ ನಿಂತು ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇತ್ತು. ಪೊಲೀಸರ ಆರೋಗ್ಯ ದೃಷ್ಠಿಯಿಂದ ನಗರದಲ್ಲಿ ನೂತನ ಪೊಲೀಸ್ ಚೌಕಿಗಳ ನಿರ್ಮಾಣ ಮಾಡಲಾಗಿದ್ದು, ಅವುಗಳು ಸದ್ಯ ಬಳಕೆಯಾಗದೆ ವ್ಯರ್ಥವಾಗಿ ನಿಂತಿವೆ.

        ನಿತ್ಯ ಮಳೆ, ಗಾಳಿ, ಬಿಸಿಲು, ಧೂಳು ಎನ್ನುವುದನ್ನು ಲೆಕ್ಕಿಸದೆ ಸಂಚಾರಿ ಪೊಲೀಸರು ತಮ್ಮ ಕರ್ತವ್ಯ ನೆರವೇರಿಸುತ್ತಾರೆ. ಈ ಮುಂಚೆ ಭದ್ರಮ್ಮ ವೃತ್ತದ ಮಧ್ಯ ಭಾಗದಲ್ಲಿ ಛತ್ರಿ ಇರುವ ಚೌಕಿ ಇತ್ತು. ಅದು ಕೇವಲ ಬಿಸಿಲಿನಿಂದ ಮಾತ್ರ ರಕ್ಷಣೆ ನೀಡುತ್ತಿತ್ತು. ಆದರೆ ಧೂಳಿನಿಂದ ತಪ್ಪಿಸಿಕೊಳ್ಳಲು ಯಾವುದೇ ಅನುಕೂಲ ಇರಲಿಲ್ಲ. ಅದೇ ರೀತಿ ಬಿ.ಜಿ.ಎಸ್.ವೃತ್ತದ ಮಧ್ಯದಲ್ಲಿದ್ದ ಪೊಲೀಸ್ ಚೌಕಿಯ ಕೆಳ ಭಾಗದಲ್ಲಿನ ಗೋಡೆಯು ಬಿರುಕು ಬಿಟ್ಟು, ಯಾವ ಕ್ಷಣದಲ್ಲಾದರೂ ಕೆಳ ಬೀಳಬಹುದಿತ್ತು. ಇದರ ಬಗ್ಗೆ ಗಮನ ಹರಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾವಿ ಗೋಪಿನಾಥ್‍ರವರು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ನೂತನವಾದ ಪೊಲೀಸ್ ಚೌಕಿಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು.

      ಸುಮಾರು 8 ತಿಂಗಳು ಅವಧಿಯಲ್ಲಿ ನೂತನವಾಗಿ ನಿರ್ಮಾಣವಾದ ಚೌಕಿಗಳಿಗೆ ಗ್ಲಾಸ್ ಅಳವಡಿಕೆ ಮಾಡಲಾಗಿದ್ದು, ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡಬಹುದಿತ್ತು. ಇದಕ್ಕೆ ಬೆಳಕಿನ ಸೌಲಭ್ಯ ಸೇರಿದಂತೆ ಪೊಲೀಸ್ ಪೇದೆಗಳು ನಿಂತುಕೊಳ್ಳಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ಚೌಕಿಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಗಾಳಿಯಂತ್ರಗಳ ವ್ಯವಸ್ಥೆ ಹಾಗೂ ಬೆಳಕಿನ ಸೌಲಭ್ಯಕ್ಕಾಗಿ ವಿದ್ಯುತ್ ಬಲ್ಬ್‍ಗಳನ್ನು ಅಳವಡಿಸಲಾಗಿದೆ.

ನಗರದ 15 ಕಡೆಗಳಲ್ಲಿ ಚೌಕಿ ನಿರ್ಮಾಣ

      ತುಮಕೂರು ನಗರದ ಬಿಎಚ್ ರಸ್ತೆಯಲ್ಲಿ ಕಾಲ್‍ಟ್ಯಾಕ್ಸ್ ವೃತ್ತ, ಟೌನ್‍ಹಾಲ್ ವೃತ್ತ, ಭದ್ರಮ್ಮ ವೃತ್ತ, ಶಿವಕುಮಾರಸ್ವಾಮೀಜಿ ವೃತ್ತ, ಬಟವಾಡಿ ವೃತ್ತ, ಕ್ಯಾತ್ಸಂದ್ರ ವೃತ್ತ, ರಿಂಗ್ ರಸ್ತೆಗೆ ಅಂಟಿಕೊಂಟಿರುವಂತೆ ಬಡ್ಡಿಹಳ್ಳಿ 80 ಅಡಿ ರಸ್ತೆಯ ಬಳಿ, ಶೆಟ್ಟಿಹಳ್ಳಿ ಬಳಿ, ಶಿರಾಗೇಟ್, ಕುಣಿಗಲ್ ವೃತ್ತ, ದಾನಃ ಪ್ಯಾಲೆಸ್, ಗುಬ್ಬಿ ರಿಂಗ್ ರಸ್ತೆ, ನಂತರ ಬಿ.ಜಿ.ಪಾಳ್ಯ, ಹೆಗ್ಗೆರೆ, ಶಿರಾಗೇಟ್‍ನ ಕಾಳಿದಾಸ ವೃತ್ತ, ಕೋಟೆ ಆಚಿಜನೇಯಸ್ವಾಮಿ ವೃತ್ತದ ಬಳಿ ಒಟ್ಟು 15 ಕಡೆಗಳಲ್ಲಿ ನವೀನ ಪೊಲೀಸ್ ಚೌಕಿಗಳ ನಿರ್ಮಾಣ ಮಾಡಲಾಗಿದೆ.

ಪೊಲೀಸ್ ಚೌಕಿಗಳಿಗೆ ಬೀಗ

        ನೂತನವಾಗಿ ನಿರ್ಮಾಣ ಮಾಡಿರುವ ಪೊಲೀಸ್ ಚೌಕಿಗಳಿಗೆ ಹಲವು ಕಡೆಗಳಲ್ಲಿ ಬೀಗ ಜಡಿಯಲಾಗಿದೆ. ರಿಂಗ್ ರಸ್ತೆಗೆ ಅಂಟಿಕೊಂಡಂತೆ ಇರುವ ಹಲವು ಚೌಕಿಗಳಿಗೆ ಬೀಗ ಜಡಿಯಲಾಗಿದೆ. ಕೆಲ ಚೌಕಿಗಳಿಗೆ ಗಾಜಿನ ಗ್ಲಾಸ್‍ಗಳನ್ನು ಅಳವಡಿಸಿದರೆ ಗುಬ್ಬಿ ರಿಂಗ್ ರಸ್ತೆಯ ವೃತ್ತದಲ್ಲಿ ನಿರ್ಮಾಣ ಮಾಡಲಾದ ಚೌಕಿಗೆ ಯಾವುದೇ ಗಾಜಿನ ಕೆಲಸ ಮಾಡಿಲ್ಲ. ಅಲ್ಲಿ ನಿಲ್ಲುವ ಪೊಲೀಸರಿಗೆ ಹಳೆಯ ಪಜೀತಿ ಎದುರಾಗುತ್ತದೆ. ಆದರೆ ಸದ್ಯ ಈ ಚೌಕಿಗೂ ಬೀಗ ಜಡಿದಿದ್ದಾರೆ. ಈ ಚೌಕಿಯ ಒಳಗಡೆ ಸಂಪೂರ್ಣಧೂಳು ಆವರಿಸಿಕೊಂಡಿದ್ದು, ಕೆಲಸಕ್ಕೆ ಬಾರದಂತೆ ಆಗಿದೆ.

15 ಲಕ್ಷ ವೆಚ್ಚದಲ್ಲಿ ನಿರ್ಮಾಣ

      ನಗರದಲ್ಲಿ ನಿರ್ಮಾಣ ಮಾಡಲಾದ ನೂತನ ಪೊಲೀಸ್ ಚೌಕಿಗಳ ಖರ್ಚು ಸರಿಸುಮಾರು 15 ಲಕ್ಷ ಅಂದರೆ ಒಂದೊಂದು ಚೌಕಿ ನಿರ್ಮಾಣ ವೆಚ್ಚ ಒಂದು ಲಕ್ಷ ರೂ.ಗಳು. ಈ ಹಣವನ್ನು ಪೊಲೀಸ್ ಇಲಾಖೆಯಿಂದಲೇ ನೀಡಲಾಗಿದ್ದು, ಈ ಚೌಕಿಗಳ ನಿರ್ಮಾಣ ಕಾರ್ಯ ಮಾಡಿದ್ದು, ನಿರ್ಮಿತಿ ಕೇಂದ್ರದವರು. ಪೊಲೀಸರಿಗೆ ಅನುಕೂಲವಾಗಲೆಂದು ಈ ಚೌಕಿಗಳ ನಿರ್ಮಾಣ ಮಾಡಲಾಗಿದೆ. ಆದರೆ ಇಂದು ಆ ಚೌಕಿಗಳೇ ಬಳಕೆಗೆ ಬಾರದಂತೆ ಅನಾಥವಾಗಿಬಿಟ್ಟಿವೆ.

ಉದ್ಘಾಟನೆಗೂ ಮುನ್ನವೇ ಪಾಳುಬಿದ್ದ ಚೌಕಿ

       ಶಿರಾಗೇಟ್‍ನ ಕಾಳಿದಾಸ ವೃತ್ತದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ಚೌಕಿ ಉದ್ಘಾಟನೆಗೆ ಮುನ್ನವೇ ಪಾಳು ಬಿದ್ದಿದೆ. ಚೌಕಿ ಸುತ್ತಲೂ ಹಾಕಿರುವ ಗಾಜಿನ ಗ್ಲಾಸ್ ಮುರಿದು ಬಿದ್ದಿದೆ. ಎರಡು ಭಾಗಗಳಲ್ಲಿಯೂ ಗ್ಲಾಸ್ ಮುರಿದಿದ್ದು, ಇದರಿಂದ ರಸ್ತೆಯ ಮೇಲಿನ ಧೂಳು ಒಳಹೊಕ್ಕುತ್ತಿದೆ. ಚೌಕಿ ಒಳಭಾಗದಲ್ಲಿ ಗಾಜಿನ ಚೂರುಗಳು ಬಿದ್ದಿದ್ದು ಅದನ್ನು ಸ್ವಚ್ಛ ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಸುಮಾರು 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಚೌಕಿಗೆ ಹಾಕಲಾಗಿರುವ ಗ್ಲಾಸ್‍ಗಳು ಈಗಾಗಲೇ ಮುರಿದಿದ್ದು ಮತ್ತೆ ಅದನ್ನು ದುರಸ್ತಿ ಮಾಡಲು ಮತ್ತಷ್ಟು ವೆಚ್ಚ ಖರ್ಚು ಮಾಡಬೇಕಾಗಿದೆ. ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಪೊಲೀಸ್ ಚೌಕಿಗಳಿಗೆ ಆದಷ್ಟು ಬೇಗ ಉದ್ಘಾಟನೆ ಭಾಗ್ಯ ದೊರೆತಲ್ಲಿ ಪೊಲೀಸರಿಗೆ ಅನುಕೂಲವಾಗಲಿದೆ.

ಮಾಹಿತಿ ನೀಡಲು ಹಿಂಜರಿದ ಎಂಜಿನಿಯರ್‍ಗಳು

        ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣ ಮಾಡಲಾದ ಪೊಲೀಸ್ ಚೌಕಿಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿಗಾಗಿ ನಿರ್ಮಿತಿ ಕೇಂದ್ರದ ಎಂಜಿನಿಯರ್‍ರವರನ್ನು ಸಂಪರ್ಕ ಮಾಡಿದರೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಚುನಾವಣೆ ಮುಗಿದ ಮರುದಿನದಿಂದ ಅವರ ಸಂಪರ್ಕಕ್ಕೆ ಪ್ರಯತ್ನ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಒಮ್ಮೆ ಸಿಕ್ಕಾಗ ಮಾಹಿತಿ ಕೇಳಿದರೆ ಹೇಳುತ್ರೇವೆ ಎಂದವರು ಮತ್ತೆ ಮೂರ್ನಾಲ್ಕು ದಿನಗಳವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಕೊನೆಗೆ ಶುಕ್ರವಾರ ಕರೆ ಸ್ವೀಕರಿಸಿ ಮಾತನಾಡಿದ ಎಂಜಿನಿಯರ್ ಮಾಹಿತಿ ಕೇಳುತ್ತಿದ್ದಂತೆಯೇ ಹೇಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಅವರು ಮಾಡಿದ ಕಾಮಗಾರಿಯ ಬಗ್ಗೆ ಕೇಳಿದರೆ ಮಾಹಿತಿ ನೀಡಲು ಹಿಂಜರಿಯುತ್ತಾರೆ ಎಂದರೆ sಸಾರ್ವಜನಿಕರಿಗೆ ಯಾವ ರೀತಿ ಉತ್ತರ ಕೊಡುತ್ತಾರೆ ಎಂಬುದು ಪ್ರಶ್ನಾತೀತವಾಗಿದೆ.

ಮಾಸಾಂತ್ಯದೊಳಗೆ ಚೌಕಿಗಳ ಉದ್ಘಾಟನೆ

         ಕಳೆದ ವರ್ಷದಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್‍ರವರು ಸಂಚಾರಿ ಪೊಲೀಸರು ಅನುಭವಿಸುವ ಕಷ್ಟಗಳನ್ನು ಅರಿತು ಆ ಸಮಸ್ಯೆ ಪರಿಹರಿಸು ದೃಷ್ಠಿಯಿಂದ ನಗರದ 15 ಕಡೆಗಳಲ್ಲಿ ನೂತನವಾಗಿ ಪೊಲೀಸ್ ಚೌಕಿಗಳನ್ನು ನಿರ್ಮಾಣದ ಕೆಲಸ ಪ್ರಾರಂಭಿಸಿದ್ದರು. ಈಗಾಗಲೇ ಅದು ಪೂರ್ಣಗೊಂಡಿದ್ದು, ಚುನಾವಣೆ ಹತ್ತಿರ ಬಂದಿದ್ದ ಕಾರಣದಿಂದ ಅವುಗಳ ಉದ್ಘಾಟನೆ ಕಾರ್ಯ ಆಗಿರಲಿಲ್ಲ. ಈಗ ಚುನಾವಣೆ ಮುಗಿದಿದೆ. ಪೊಲೀಸ್ ವರಿಷ್ಠರನ್ನು ಕರೆಯಿಸಿ ಅವರಿಂದ ಈ ಮಾಸಾಂತ್ಯದೊಳಗೆ ಚೌಕಿಗಳನ್ನು ಉದ್ಘಾಟನೆ ಮಾಡಿಸಲಾಗುತ್ತದೆ.
– ಡಾ.ಕೋನ ವಂಶಿ ಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ

       ಮೊದಲು ಸರಿಯಾಗಿ ಪೊಲೀಸ್ ಚೌಕಿಗಳಿರಲಿಲ್ಲ. ನಾವು ರಸ್ತೆಯ ಮಧ್ಯಭಾಗದಲ್ಲಿ ನಿಂತು ಕೆಲಸ ಮಾಡಬೇಕಿತ್ತು. ರಸ್ತೆಗಳ ಸಂಚಾರ ಹೆಚ್ಚಾಗಿರುವುದರಿಂದ ಧೂಳು, ಹೊಗೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಿತ್ತು. ಇದೀಗ ನೂತನವಾಗಿ ನಿರ್ಮಾಣ ಮಾಡಲಾದ ಈ ಚೌಕಿಗಳಿಂದ ತುಂಬಾ ಅನುಕೂಲವಾಗುತ್ತಿದೆ. ಯಾವುದೇ ರೀತಿಯ ಹೊಗೆ, ಧೂಳು ಬರುವುದಾಗಲಿ ಏನು ಇಲ್ಲ. ರಸ್ತೆ ಮೇಲೆ ಓಡಾಡುವ ಪ್ರತಿಯೊಂದ ವಾಹನಗಳು ಕಾಣುತ್ತವೆ. ಏನಾದರು ಸಮಸ್ಯೆ ಎಂದಾಗ ಹೋಗಿ ನೋಡಬಹುದು.

ಸಂಚಾರಿ ಪೊಲೀಸ್ ಪೇದೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap