ದಾವಣಗೆರೆ :
ಗುರು-ಶಿಷ್ಯ ಪರಂಪರೆಯ ಕಾರಣಕ್ಕಾಗಿ ಭಾರತ ಜಗತ್ತಿನ ಗಮನ ಸೆಳೆದಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಪಾದಿಸಿದರು.
ನಗರದ ವೈಷ್ಣವಿ ಚೇನತ ಕಾಲೇಜಿನ ಆವರಣದಲ್ಲಿ ಶ್ರೀರಾಮ ಸೇನೆ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು-ಶಿಷ್ಯ ಪದ್ಧತಿಯು ನಮ್ಮ ಪರಂಪರೆಯ ಭಾಗವಾಗಿದ್ದು, ಈ ಕಾರಣಕ್ಕಾಗಿಯೇ ಭಾರತದ ಜಗತ್ತಿನ ಗಮನ ಸೆಳೆದು, ಪ್ರಪಂಚದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು.
ಶ್ರೀರಾಮ ಸೇನೆಯ ವತಿಯಿಂದ ಪ್ರಪ್ರಥಮ ಬಾರಿಗೆ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ಸಮಾಜದಲ್ಲಿ ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‍ಎಸ್‍ಎಸ್) ಆರಂಭದಿಂದಲೂ ಗುರುವಂದನೆ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಆದರೆ, ಅಲ್ಲಿ ಗುರುವನ್ನು ವ್ಯಕ್ತಿಯ ಬದಲಾಗಿ ಶಕ್ತಿಯಾಗಿ, ವಿಚಾರ ಕೇಂದ್ರಿತವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಆರ್‍ಎಸ್‍ಎಸ್‍ನ ಗುರು ಎಂದರೆ ವ್ಯಕ್ತಿಯಲ್ಲ, ತ್ಯಾಗದ ಪ್ರತೀಕವಾಗಿರುವ ಭಗವಾ ಧ್ವಜ ಎಂದು ವಿಶ್ಲೇಷಿಸಿದರು.
ಸಮಾಜಕ್ಕೆ ಸಮರ್ಪಣೆ ಮಾಡುವುದು ಸಹ ನಮ್ಮ ಪರಂಪರೆಯ ಭಾಗವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಮರ್ಪಣೆ ಭಾವ ಬೆಳೆಸಿಕೊಳ್ಳಬೇಕು. ದುಡಿದ ಪ್ರತಿ ನೂರು ರೂಪಾಯಿಗಳಲ್ಲಿ 10 ರೂಪಾಯಿಯನ್ನು ಸಮಾಜಕ್ಕೆ ಅರ್ಪಿಸುವ ಮನೋಭಾವ ಬೆಳೆದಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪ್ರತಿ ವ್ಯಕ್ತಿಯ ಅಸ್ತಿತ್ವದ ಹಿಂದೆ ಸಮಾಜ ಇರುತ್ತದೆ. ಸಮಾಜವಿಲ್ಲದೇ ವ್ಯಕ್ತಿ ಇರಲು ಸಾಧ್ಯವಿಲ್ಲ. ಹೀಗಾಗಿ ಸಮಾಜದ ಕೊಡುಗೆ ಪಡೆದು ಬೆಳೆದ ವ್ಯಕ್ತಿಯು, ಸಮಾಜಕ್ಕೆ ತನ್ನ ಕೈಲಾದ ಸೇವೆ ಮಾಡಬೇಕೆಂದು ಸಲಹೆ ನೀಡಿದ ಮುತಾಲಿಕ್. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಹಾವಳಿ ಹೆಚ್ಚಾಗಿದ್ದು, ದೀಪವನ್ನು ಆರಿಸಿ ಜನ್ಮ ದಿನ ಆಚರಿಸುವುದು ಹಾಗೂ ಕುಡಿದು, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸುವುದು ಭಾರತೀಯ ಸಂಸ್ಕತಿಯಲ್ಲ ಎಂದರು.
ವೈಷ್ಣವಿ ಚೇತನ ಸಂಸ್ಥೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ವೀರಮಾಚನೇನಿ ಮಾತನಾಡಿ, ಗಡಿಯಲ್ಲಿದ್ದುಕೊಂಡು ಚಳಿ, ಗಾಳಿಗೂ ಲೆಕ್ಕಿಸದೇ ಗಡಿ ಕಾಯುತ್ತಿರುವ ಯೋಧರಂತೆ ನಾವು ಗಡಿಯಲ್ಲಿ ಹೋರಾಡಲು ಸಾಧ್ಯವಾಗದಿದ್ದರೂ ದೇಶಪ್ರೇಮವನ್ನು ಹೊರ ಹಾಕಲು ಸಾಕಷ್ಟು ದಾರಿಗಲಿವೆ. ಪ್ರತಿಯೊಬ್ಬರು ಕನಿಷ್ಠ ಒಂದು ರೂಪಾಯಿಯನ್ನಾದರೂ ದೇಶದ ಸೈನಿಕರಿಗೆ ಸಲ್ಲಿಸುವುದು ಸಹ ದೇಶಭಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಿಟಲ್ ಚಾಂಪ್ಸ್ ಗುರುಕುಲಂ ಸಂಸ್ಥಾಪಕ ವಿಜಯ್‍ಕುಮಾರ್, ಅರ್ಚಕರಾದ ಅನಿಲ್ ಶರ್ಮಾ, ಶ್ರೀರಾಮ ಸೇನೆಯ ಪರಶುರಾಮ್ ನಡುಮನಿ, ಹೆಚ್.ಸಿ.ಶ್ರೀಧರ್ ಪಾಟೀಲ್, ನೂತನ ಆಚಾರ್ಯ, ಡಿ.ಬಿ.ವಿನೋದ್ ರಾಜ್, ಕುಮಾರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
